ಕಾಪು: ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣದಿಂದ ಸುದ್ದಿಯಲ್ಲಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಅವರು ಸೋಮವಾರ ಇಲ್ಲಿನ ಕಾಪು ತಾಲೂಕಿನ ಶಿರ್ವ ಸಮೀಪದ ಬಿಳಿಯಾರು ಧೂಮಾವತಿ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಪೂಜೆಗಳನ್ನು ಸಲ್ಲಿಸಿದರು ಮತ್ತು ದೈವಸ್ಥಾನದ ನೂತನ ಕಟ್ಟಡ ಮತ್ತು ಗೋಪುರವನ್ನು ಉದ್ಘಾಟಿಸಿದರು.
ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಬಿಳಿಯಾರು ಗ್ರಾಮದ ನಿವಾಸಿ, ಧಾರವಾಡದ ವೈನ್ ಮರ್ಚೆಂಟ್ ಅಸೋಸಿಯೇಷನ್ ಪದಾಧಿಕಾರಿ, ತಿಮ್ಮಾಪೂರ್ ಅವರ ಆಪ್ತ ಜೀವನ್ ಶೆಟ್ಟಿ ಅವರು ಆಹ್ವಾನದ ಮೇರೆಗೆ ಅಬಕಾರಿ ಸಚಿವರು ಸಪತ್ನಿಕರಾಗಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.ಅಬಕಾರಿ ಹಗರಣದಲ್ಲಿ ಬಹಿರಂಗವಾಗಿರುವ ಆಡಿಯೋದಲ್ಲಿ ಜೀವನ್ ಶೆಟ್ಟಿ ಹೆಸರು ಕೇಳಿಬಂದಿತ್ತು, ಅವರು ಅಬಕಾರಿ ಸಚಿವರ ಹೆಸರಿನಲ್ಲಿ ಮದ್ಯ ಮಾರಾಟಗಾರರಿಗೆ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ಕೊಡುತ್ತಾರೆ ಎಂದು ಆರೋಪಿಸಲಾಗಿದೆ.
ಕರೆದಿದ್ದಕ್ಕೆ ಬಂದಿದ್ದೇನೆ: ಧೂಮಾವತಿ ದೈವ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಅಬಕಾರಿ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜೀವನ್ ಶೆಟ್ಟಿ ಅವರು ಇಲ್ಲಿಗೆ ಬರುವಂತೆ ಕರೆದಿದ್ದರು, ಆದ್ದರಿಂದ ನಾನು ಕುಟುಂಬದ ಜೊತೆಗೆ ಬಂದು ದೈವದ ಆಶೀರ್ವಾದ ಪಡೆದಿದ್ದೇನೆ. ಈ ಸಂದರ್ಭದಲ್ಲಿ ದೈವಸ್ಥಾನದ ಕಟ್ಟಡಕ್ಕೆ ಸಹಕಾರ ಮಾಡಿದವರನ್ನು ಸನ್ಮಾನಿಸಿದ್ದೇನೆ. ಇಂತಹ ದೈವಿಕ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇಲ್ಲಿಗೆ ಬಂದು, ಎಲ್ಲರಿಗೂ ಮಾನಸಿಕ ನೆಮ್ಮದಿ ದೊರಕಲಿ. ಎಲ್ಲರ ಬದುಕು ಚೆನ್ನಾಗಿರಲಿ. ಎಲ್ಲರಿಗೂ ದೇವರ ಅನುಗ್ರಹ ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.ಬಿಜೆಪಿ ಆರೋಪ ಬೋಗಸ್: ಅಬಕಾರಿ ಹಗರಣ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು, ಬೋಗಸ್, ಸದನದಲ್ಲಿಯೇ ಈ ಎಲ್ಲಾ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದೇನೆ, ಇದರ ಬಗ್ಗೆ ಬೇರೆ ಏನೂ ಹೇಳುವುದಿಲ್ಲ ಎಂದು ಹೊರಟು ಬಿಟ್ಟರು.ಕೈಕಮಾಂಡೇ ಸುಪ್ರೀಂ: ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮಲ್ಲಿ ಹೈಕಮಾಂಡ್ ನಿರ್ಧಾರವೇ ಸುಪ್ರೀಂ, ನಾನೊಂದು ಹೇಳ್ತೀನಿ ನೀವೊಂದು ಹೇಳ್ತೀರಿ ಅಂದ್ರೆ ಆಗಲ್ಲ, ಹೈಕಮಾಂಡ್ ಹೇಳಿದ ಹಾಗೆ ಆಗುತ್ತೆ ಎಂದರು.