ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯ ಕಾವೇರಿ ನದಿಯ ತಗ್ಗು ಪ್ರದೇಶಗಳಲ್ಲಿ ಬರುವ ಕೊಳ್ಳೇಗಾಲ ತಾಲೂಕಿನ ಪ್ರವಾಹ ಸಮಸ್ಯೆಯ ವಿವಿಧ ಗ್ರಾಮಗಳಿಗೆ ಪಶು ಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಬಿಡಲಾಗುತ್ತಿರುವುದರಿಂದ ನದಿಯ ತಗ್ಗು ಪ್ರದೇಶಗಳಲ್ಲಿ ಬರುವ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಳೇ ಹಂಪಾಪುರ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕಿಸಿದರು.ನದಿಯ ತೀರ ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ಈ ಹಿಂದೆ ಪ್ರವಾಹ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳು ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತು ಚರ್ಚಿಸಿದರು. ಈ ವೇಳೆ ಗ್ರಾಮಸ್ಥರು ಮಾತನಾಡಿ, ಪ್ರವಾಹ ಸಂದರ್ಭಗಳಲ್ಲಿ ನಿರಂತರ ತೊಂದರೆಗಳನ್ನು ಎದುರಿಸುತ್ತಿದ್ದೇವೆ. ಬೆಳೆ ನಷ್ಟವಾಗುತ್ತಿದೆ. ಮನೆಗಳಿಗೆ ನೀರು ನುಗ್ಗುವುದರಿಂದ ಹಾನಿಯಾಗುತ್ತಿದೆ. ಪ್ರವಾಹ ನಿಯಂತ್ರಿಸಲು ತಡೆಗೋಡೆ ನಿರ್ಮಾಣ ಮಾಡಬೇಕಿದೆ. ಇದರಿಂದ ಪ್ರವಾಹ ಪೀಡಿತ ಗ್ರಾಮಗಳ ಸಮಸ್ಯೆ ಪರಿಹಾರವಾಗಲಿದೆ. ಬಹುಕಾಲದ ಬೇಡಿಕೆಯಾಗಿರುವ ತಡೆಗೋಡೆ ನಿರ್ಮಾಣ ಮಾಡಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ತಡೆಗೋಡೆ ನಿರ್ಮಾಣಕ್ಕೆ 150 ಕೋಟಿ ರು. ವೆಚ್ಚದಲ್ಲಿ ತಯಾರಿಸಲಾಗಿರುವ ಅಂದಾಜುಪಟ್ಟಿಯ ವಿವರ ಪಡೆದ ಸಚಿವರು ಹಂತಹಂತವಾಗಿ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸುವುದಾಗಿ ತಿಳಿಸಿದರು. ನೀರು ಕಡಿಮೆಯಾದ ಕೂಡಲೇ ಹಾನಿಯಾಗಿರುವ ಬೆಳೆಗೆ ಪರಿಹಾರ ನೀಡಲು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಗ್ರಾಮಸ್ಥರಿಗೆ ಹೇಳಿದರು.ಪ್ರವಾಹ ಪೀಡಿತ ಗ್ರಾಮಗಳಿಗೆ ನೆರವಾಗಲು ಎಲ್ಲ ಅಗತ್ಯ ಸಿದ್ದತೆ ಮಾಡಲಾಗಿದೆ. ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಧಿಕಾರಿಗಳ ತಂಡ ಸನ್ನದ್ಧರಾಗಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸ್ಥಳೀಯ ಆಡಳಿತ, ಅಧಿಕಾರಿಗಳು ನೀಡುವ ಸಲಹೆ, ಸೂಚನೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಇದೇ ವೇಳೆ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಈ ಹಿಂದೆಯು ಪ್ರವಾಹ ಸಮಸ್ಯೆ ಆಗಿತ್ತು. ಪ್ರವಾಹ ಬಾಧಿತ ಗ್ರಾಮಗಳಿಗೆ ಶಾಶ್ವತವಾಗಿ ಪರಿಹಾರ ಕಲ್ಪಿಸಲು ಜಲಸಂಪನ್ಮೂಲ ಸಚಿವರು ಹಾಗೂ ಡಿಸಿಎಂಗೆ ಮನವಿ ಮಾಡಲಾಗಿದ್ದು, 150 ಕೋಟಿ ರು. ಅಂದಾಜು ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವನ್ನು ಹಂತಹಂತವಾಗಿ ಕೈಗೊಳ್ಳಲು ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್, ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತ, ಉಪವಿಭಾಗಾಧಿಕಾರಿ ಮಹೇಶ್, ಇನ್ನಿತರ ಅಧಿಕಾರಿಗಳು ಇದ್ದರು.