ಸಾರಾಂಶ
ಬೀದರ್: ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಮ್ ಖಾನ್ ಅವರು ಭಾನುವಾರ ಬೀದರ್ ತಾಲೂಕಿನಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾದ ಸಂಗನಳ್ಳಿ, ಇಸ್ಲಾಂಪೂರ, ಇಮಾಮ್‌ಬಾದ್ ಹಳ್ಳಿ, ಮಾಳೆಗಾಂವ್, ಕಪಲಾಪೂರ, ಅಲಮಾಸ್‌ಪುರ, ಜಾಂಪಾಡ, ಅಲ್ಲಾಪೂರ ಹಾಗೂ ನೇಮತಾಬಾದ್ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಅತಿವೃಷ್ಟಿಯಿಂದ ಹಾನಿಗೆ ಪರಿಹಾರವಾಗಿ ಮುಖ್ಯಮಂತ್ರಿಗಳು ಕೂಡಲೇ 50 ಕೋಟಿ ರು., ಪರಿಹಾರ ನೀಡಿದ್ದು ಇನ್ನೂ 100 ಕೋಟಿ ರು.ಗಳ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.ಅಲಿಯಂಬರ ಗ್ರಾಮದಲ್ಲಿ ಹಾನಿಗೊಳಗಾದ ಸೇತುವೆಯ ದುರಸ್ತಿಗೆ 5 ಕೋಟಿ ರು. ಬಿಡುಗಡೆ ಮಾಡಲಾಗುವುದು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾನಿಗೊಳ ಗಾದ ರಸ್ತೆ, ಸೇತುವೆ ದುರಸ್ತಿ ಕಾರ್ಯ ಶೀಘ್ರವೇ ಕೈಗೊಳ್ಳಲು ಸಚಿವರು ಸೂಚಿಸಿದರು.
ಕಳೆದ ಮೂರು ದಿನಗಳಿಂದ ಸತತವಾಗಿ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಸೆ.6ರಿಂದ ಮತ್ತೆ ಮಳೆ ಪ್ರವಾಹ ಪರಿಶೀಲನಾ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.ಭಾರೀ ಮಳೆಯಿಂದಾಗಿ ರೈತರ ಹೊಲಗಳಲ್ಲಿ ಬೆಳೆದ ಹೆಸರು, ಉದ್ದು, ಸೋಯಾ ಹಾಗೂ ತೊಗರಿ ಸಂಪೂರ್ಣವಾಗಿ ನಾಶವಾಗಿವೆ ಮತ್ತು ವಿವಿಧ ಸ್ಥಳಗಳಲ್ಲಿ ಅನೇಕ ಮನೆಗಳು ಕುಸಿದಿವೆ. ಪ್ರತಿಯೊಂದು ವಿಪತ್ತು ಮತ್ತು ಹಾನಿಯ ವರದಿ ಮಾಡಿ ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಲು ಜಂಟಿ ಇಲಾಖಾ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ನಿರ್ದೇಶಿಸಿ ಬೆಳೆ ಹಾನಿ ಮತ್ತು ಮನೆ ಹಾನಿಗೆ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಡಿಯಲ್ಲಿ ತಕ್ಷಣ ಪರಿಹಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬೀದರ್ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ಬೀದರ್ ತಹಸಿಲ್ದಾರ್ ರವೀಂದ್ರ ಧಾಮಾ, ಕೃಷಿ ಇಲಾಖೆ ಉಪ ನಿರ್ದೇಶಕ ಇಕ್ಬಾಲ್ ಅನ್ಸಾರಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.