ಕಾಂಗ್ರೆಸ್‌ ಕಚೇರಿಗೆ ನಿರಾಸಕ್ತಿ: ಡಿಕೆಶಿ ಕಿಡಿ

| Published : Aug 13 2025, 12:30 AM IST

ಕಾಂಗ್ರೆಸ್‌ ಕಚೇರಿಗೆ ನಿರಾಸಕ್ತಿ: ಡಿಕೆಶಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಾದ್ಯಂತ 100 ನೂತನ ಕಾಂಗ್ರೆಸ್‌ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ತೀರ್ಮಾನಿಸಿದ್ದು, ಈವರೆಗೂ 50 ಕಡೆಯೂ ಸ್ಥಳ ಅಂತಿಮವಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ 100 ವರ್ಷ ಆಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 100 ನೂತನ ಕಾಂಗ್ರೆಸ್‌ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ತೀರ್ಮಾನಿಸಿದ್ದು, ಈವರೆಗೂ 50 ಕಡೆಯೂ ಸ್ಥಳ ಅಂತಿಮವಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಅಲ್ಲದೆ, ಮುಂದಿನ ತಿಂಗಳು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಂದ 100 ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕಾಗಿದೆ. ಹೀಗಾಗಿ ಈವೇಳೆಗೆ ಎಲ್ಲಾ ಕಡೆ ಸಿದ್ಧತೆ ಪೂರ್ಣಗೊಂಡಿರಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧೀಜಿ ಅಧ್ಯಕ್ಷತೆಯ ಬೆಳಗಾವಿ ಅಧಿವೇಶನಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 100 ಕಾಂಗ್ರೆಸ್‌ ಕಚೇರಿ ನಿರ್ಮಿಸಲು ತೀರ್ಮಾನಿಸಲಾಗಿತ್ತು.

ಅದರಂತೆ 100 ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ದಿನಾಂಕ ನಿಗದಿ ಮಾಡುವಂತೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಕೇಳಿದ್ದೆವು. ಅವರು ಪೂರಕವಾಗಿ ಸ್ಪಂದಿಸಿದ್ದರೂ ಈವರೆಗೂ ನಮ್ಮಲ್ಲಿ ಐದು ಸ್ಥಳಗಳೂ ಅಂತಿಮವಾಗಿಲ್ಲ. ಇದು ಉತ್ತಮ ಧೋರಣೆಯಲ್ಲ. ಸಂಬಂಧಪಟ್ಟ ಜಿಲ್ಲೆ ಸಚಿವರು ಜವಾಬ್ದಾರಿ ವಹಿಸಿಕೊಂಡು ಕೂಡಲೇ ಸ್ಥಳ ಗುರುತಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.