ಸಾರಾಂಶ
ಕನ್ನಡಪ್ರಭ ವಾರ್ತೆ ಅಂಕೋಲಾ
ಜನರನ್ನು ಆತಂಕದಲ್ಲಿಡುವ ಕೆಲಸವನ್ನು ನೀವು ಮಾಡುತ್ತೀದ್ದೀರಿ. ದಯವಿಟ್ಟು ಅದನ್ನು ಮಾಡಬೇಡಿ. ನೀವು ಮಾತನಾಡದೆ, ಮೌನಕ್ಕೆ ಶರಣಾಗಿರುವುದು ಯಾಕಂಥ ನನಗೆ ತಿಳಿಯುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ವಿರುದ್ದ ಶಾಸಕ ಸತೀಶ ಸೈಲ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.ಶಿರೂರು ಗುಡ್ಡ ಕುಸಿತ ದುರಂತ ಪ್ರಕರಣ ನಡೆದು 5ನೇ ದಿನವೂ ಮಣ್ಣು ತೆರವು ಮತ್ತು ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ಘಟನಾ ಸ್ಥಳದಿಂದ ಸುಮಾರು ಮೂರು ಕಿಲೋ ಮೀಟರ್ ದೂರದ ವರೆಗೆ ಮಾಧ್ಯಮದವರನ್ನು ಒಳಬಿಡದೇ, ಸುರಕ್ಷತೆಯ ನೆಪವೊಡ್ಡಿ ಜಿಲ್ಲಾಡಳಿತ ಪೊಲೀಸ್ ವ್ಯವಸ್ಥೆಯನ್ನು ಮುಂದೆ ಇಟ್ಟುಕೊಂಡು ನಿರ್ಬಂಧ ಹೇರುತ್ತಿದೆ. ಜಿಲ್ಲಾಡಳಿತವನ್ನು ಹದ್ದುಬಸ್ತಿನಲ್ಲಿಡಬೇಕಾದ ಸಚಿವರೇ ಮೌನಕ್ಕೆ ಶರಣಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸತೀಶ ಸೈಲ್ ಗರಂ ಆಗಿ ಬ್ಯಾರಿಕೇಡ್ ದಾಟಿ ಮುನ್ನುಗ್ಗಿ, ಬಹುದೂರ ಹೆದ್ದಾರಿಯಲ್ಲಿ ನಡೆದುಕೊಂಡು ಹೋದರು. ಶಾಸಕ ಸೈಲ್ ಇಷ್ಟೆಲ್ಲ ಮಾತನಾಡಿದರೂ ಸಚಿವ ವೈದ್ಯ ಮೌನಕ್ಕೆ ಶರಣಾಗಿದ್ದರು. ಒಂದೇ ಒಂದು ಶಬ್ದ ಮಾತನಾಡಲಿಲ್ಲ.
ಪತ್ರಿಕಾ ರಂಗ ಸಹ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದಂತೆ ನಮ್ಮ ಆಡಳಿತ ವ್ಯವಸ್ಥೆಯ ನಾಲ್ಕನೇ ಬಹುಮುಖ್ಯ ಅಂಗವಾಗಿದ್ದು, ನಾನೂ ಮಾಧ್ಯಮದವರ ಪರ ಹಾಗೂ ನನ್ನ ಕ್ಷೇತ್ರದ ಬಡ ಜನತೆಯ ಪರವಾಗಿ ಇದ್ದೇನೆ. ಕೇರಳ ರಾಜ್ಯದ ಅರ್ಜುನ್ ಎನ್ನುವ ವ್ಯಕ್ತಿ ಗುಡ್ದ ಕುಸಿತದ ವೇಳೆ ಬೆಂಜ್ ವಾಹನದಲ್ಲಿ ಸಿಲುಕಿದ್ದಾನೆ ಎಂದು ಆತನ ರಕ್ಷಣೆಗೆ ತ್ವರಿತ ಕಾರ್ಯಾಚರಣೆ ಕೈಗೊಳ್ಳುವಂತೆ ವಿನಂತಿಸಿದ್ದರು. ಹಾಗಾಗಿ ಬೇರೆ ರಾಜ್ಯದ ವ್ಯಕ್ತಿಯಾಗಿದ್ದರೂ ಆತನ ಜೀವವು ಅಮೂಲ್ಯವಾಗಿದ್ದು, ಇಲ್ಲಿನ ಕಾರ್ಯಾಚರಣೆ, ಪಕ್ಕದ ರಾಜ್ಯದವರಿಗೆ ತಪ್ಪು ಸಂದೇಶ ಹೋಗದಂತೆ ಮಾಧ್ಯಮಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ. ಇದರಿಂದ ರಾಜ್ಯದ ಮರ್ಯಾದೆ ಹಾಳಾಗುತ್ತಿದೆ ಎಂದರು. ನಾಪತ್ತೆಯಾದ ಅರ್ಜುನ್, ಅವರ ಕುಟುಂಬದ ನಂಬಿಕೆ ಮತ್ತು ಮಹದಾಸೆ ಎಂಬಂತೆ ನಾನೂ ಅವನು ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.ವಾಹನದಲ್ಲಿ ಹಿಂಬಾಲಿಸಿದ ಸಚಿವ
ಸಚಿವ ಮಂಕಾಳು ವೈಧ್ಯ ಅವರೊಂದಿಗೆ ಮುನಿಸಿಕೊಂಡು ಕಾಲ್ನಡಿಗೆಯಲ್ಲಿಯೇ ಹೊರಟಿದ್ದ ಸೈಲ್ ಅವರನ್ನು ಪೊಲೀಸರು ಮತ್ತೆ ತಡೆಯುವ ಯತ್ನ ಮಾಡಿದರೂ ಜಗ್ಗದ ಶಾಸಕ, ಬಹುದೂರ ದಾರಿ ತುಳಿದು ಬಂದಿದ್ದರು. ಈ ವೇಳೆ ವಾಹನದಲ್ಲಿ ಅವರನ್ನು ಹಿಂಬಾಲಿಸಿ ಬಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸೈಲ್ ಅವರ ಮನವೊಲಿಸಿ, ಮತ್ತೆ ತಮ್ಮ ವಾಹನದಲ್ಲಿ ಕರೆದೊಯ್ದರು.