ಕಲಾಪಕ್ಕೆ ಬಾರದ ಸಚಿವರು: ಸ್ಪೀಕರ್‌ ಗರಂ

| Published : Mar 19 2025, 12:30 AM IST

ಸಾರಾಂಶ

ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರ ನೀಡಲು ಕಲಾಪಕ್ಕೆ ಹಾಜರಾಗದೆ ಸಚಿವರೇ ಸರ್ಕಾರದ ಮರ್ಯಾದೆ ಕಳೆಯುತ್ತಿದ್ದಾರೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರ ನೀಡಲು ಕಲಾಪಕ್ಕೆ ಹಾಜರಾಗದೆ ಸಚಿವರೇ ಸರ್ಕಾರದ ಮರ್ಯಾದೆ ಕಳೆಯುತ್ತಿದ್ದಾರೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ತರಾಟೆಗೆ ತೆಗೆದುಕೊಂಡರು.

ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡುವ ಸಂದರ್ಭದಲ್ಲಿ, ಸಚಿವರಾದ ಕೆ.ಎಚ್‌. ಮುನಿಯಪ್ಪ, ಆರ್‌.ಬಿ.ತಿಮ್ಮಾಪೂರ್‌, ಕೃಷ್ಣ ಬೈರೇಗೌಡ ಮಾತ್ರ ಹಾಜರಿದ್ದರು. ಉಳಿದ ಸಚಿವರು ಕಲಾಪಕ್ಕೆ ಬಾರದೇ ಇರುವ ಬಗ್ಗೆ ಪ್ರತಿಪಕ್ಷದ ಶಾಸಕರು ಆಕ್ಷೇಪಿಸಿದರು.

ಅದಕ್ಕೆ ಧ್ವನಿಗೂಡಿಸಿದ ಯು.ಟಿ.ಖಾದರ್‌, ಕಲಾಪ ಆರಂಭವಾದಾಗ ಸಚಿವರು ಹಾಜರಿರಬೇಕು. ಎಷ್ಟೇ ಉತ್ತಮ ಕೆಲಸ ಮಾಡಿದರೂ ಸರಿಯಾದ ಸಮಯಕ್ಕೆ ಕಲಾಪಕ್ಕೆ ಬಾರದೇ ಸರ್ಕಾರದ ಮರ್ಯಾದೆ ಅವರೇ ತೆಗೆಯುತ್ತಿದ್ದಾರೆ ಎಂದರು.

ಆಗ ಮಧ್ಯಪ್ರವೇಶಿಸಿದ ಸಚಿವರಾದ ಕೆ.ಎಚ್‌.ಮುನಿಯಪ್ಪ, ಕೃಷ್ಣ ಬೈರೇಗೌಡ, ಸಚಿವರು ಬರುತ್ತಿದ್ದಾರೆ. ಕಲಾಪ ಆರಂಭವಾಗಿದೆಯಲ್ಲ. ಅದನ್ನು ನಡೆಸಿ ಎಂದು ಮನವಿ ಮಾಡಿದರು.

ಕಲಾಪಕ್ಕೆ ಬರುವವರು ಮಾತ್ರ ಸಚಿವರಾಗಲಿ:

ಇಕ್ಕೆ ಆಕ್ಷೇಪಿಸಿದ ಖಾದರ್‌, ಸೋಮವಾರ ಸಂಜೆ ನಂತರ ಸಚಿವ ಕೃಷ್ಣ ಬೈರೇಗೌಡ ಒಬ್ಬರೇ ಸಚಿವರಾಗಿ ಸದನದಲ್ಲಿ ಹಾಜರಿದ್ದರು. ಅವರು ಇದ್ದಿದ್ದಕ್ಕಾಗಿ ಕಲಾಪ ನಡೆಯಿತು. ಬೇರೆ ಸಚಿವರು ಕಲಾಪದಲ್ಲಿರಲೇ ಇಲ್ಲ. ಕಲಾಪಕ್ಕೆ ಬರದೇ, ಸದನಕ್ಕೆ ಉತ್ತರ ನೀಡವರು ಏತಕ್ಕೆ ಬೇಕು? ಉತ್ತರ ಕೊಡುವವರು, ಕಲಾಪಕ್ಕೆ ಹಾಜರಾಗುವವರನ್ನು ಸಚಿವರನ್ನಾಗಿ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿ ಅವರು ಸದನಕ್ಕೆ ಬಂದಾಗ ಎಲ್ಲರೂ ಇರುತ್ತಾರೆ. ಸಿಎಂ ಸಮರ್ಥವಾಗಿ ನಿಭಾಯಿಸುತ್ತಾರೆ. ಆಗ ಎಲ್ಲ ಸಚಿವರು ಬರುವ ಅಗತ್ಯವಿಲ್ಲ. ಆದರೆ, ಅವರಿಲ್ಲದಿದ್ದಾಗ ಯಾರೂ ಬರುವುದಿಲ್ಲ ಎಂದರು.

ಅದಕ್ಕೆ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್, ಕಾಂಗ್ರೆಸ್‌ನಲ್ಲಿ 2 ಗುಂಪುಗಳಿವೆ. ಸಿಎಂ ಮಾತನಾಡುವಾಗ ಡಿಸಿಎಂ ಇರುವುದಿಲ್ಲ. ಡಿಸಿಎಂ ಇದ್ದಾಗ ಸಿಎಂ ಗೈರಾಗುತ್ತಾರೆ ಎಂದು ಕಾಲೆಳೆದರು.

ಅದಕ್ಕೆ ಕೃಷ್ಣ ಬೈರೇಗೌಡ, ವಿಜಯೇಂದ್ರ ಮಾತನಾಡುವಾಗ ನೀವು ಗೈರಾಗುತ್ತೀರಲ್ಲಾ ಏಕೆ? ಎಂದು ಕಿಚಾಯಿಸಿದರು.

-ಬಾಕ್ಸ್‌-

ಸಾಕಾಗಿದೆ ರಾಜೀನಾಮೆ

ನೀಡುತ್ತೇನೆ: ಅಶೋಕ್‌ ಪಟ್ಟಣ್

ಭೋಜನ ವಿರಾಮದ ನಂತರ ಸದನ ಸಮಾವೇಶಗೊಂಡಾಗಲೂ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರು ಕಲಾಪಕ್ಕೆ ಬಂದಿರಲಿಲ್ಲ. ಅದಕ್ಕೆ ಪ್ರತಿಪಕ್ಷ ಸದಸ್ಯರ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಶಾಸಕರನ್ನು, ಸಚಿವರನ್ನು ಸದನಕ್ಕೆ ಕರೆತರಲಾಗದಿದ್ದರೆ ಸರ್ಕಾರದ ಮುಖ್ಯ ಸಚೇತಕ ಅಶೋಕ್‌ ಪಟ್ಟಣ್‌ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು. ಅದಕ್ಕುತ್ತರಿಸಿದ ಅಶೋಕ್‌ ಪಟ್ಟಣ್‌, ಸದನಕ್ಕೆ ಬರುವಂತೆ ಹೇಳಿ ನನಗೂ ಸಾಕಾಗಿದೆ. ರಾಜೀನಾಮೆ ನೀಡುತ್ತೇನೆ ಬಿಡಿ ಎಂದರು.

ಕೊನೆಗೆ ಶಾಸಕರು ಬರಲಿ ಎಂದು ಸ್ಪೀಕರ್‌ ಖಾದರ್‌, ಕಲಾಪವನ್ನು 10 ನಿಮಿಷ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ, ಬಹುತೇಕ ಸಚಿವರು ಹಾಜರಿದ್ದರು. ಅದಕ್ಕೆ ವಿಪಕ್ಷ ಸದಸ್ಯರು, ನಿಮ್ಮ ಕ್ರಮಕ್ಕೆ ಪ್ರತಿಫಲ ದೊರೆತಿದೆ ಎಂದು ಸ್ಪೀಕರ್‌ ಅವರನ್ನು ಅಭಿನಂದಿಸಿದರು.

-ಬಾಕ್ಸ್‌-

ಕೃಷ್ಣ ಊರಿಗೊಬ್ಬಳೇ

ಪದ್ಮಾವತಿ: ಅಶೋಕ್‌

ಸಚಿವರ ಗೈರಿನ ವಿಚಾರ ಚರ್ಚೆಯಾಗುವ ವೇಳೆ ವಿಪಕ್ಷ ನಾಯಕ ಆರ್‌.ಅಶೋಕ್‌, ಊರಿಗೊಬ್ಬಳೇ ಪದ್ಮಾವತಿ ಎನ್ನುವಂತೆ ಕೃಷ್ಣ ಬೈರೇಗೌಡ ಒಬ್ಬರೇ ಕಲಾಪದಲ್ಲಿ ಹಾಜರಿರುತ್ತಾರೆ ಎಂದು ವ್ಯಂಗ್ಯವಾಡಿದರು. ಅದಕ್ಕೆ ಕೃಷ್ಣ, ಊರಿಗೊಬ್ಬನೇ ಗೌಡ ಎಂಬುದನ್ನು ಕೇಳಿದ್ದೆ. ಆದರೆ, ಊರಿಗೊಬ್ಬಳೇ ಪದ್ಮಾವತಿ ಎಂಬ ನಾಣ್ನುಡಿ ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ ಎಂದು ನಗುತ್ತಲೇ ಉತ್ತರಿಸಿದರು.