ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕೇಂದ್ರದಲ್ಲಿ ಮಂತ್ರಿಗಿರಿ ನನಗೋಸ್ಕರ ಅಲ್ಲ, ಜನರ ಒತ್ತಡಕ್ಕಾಗಿ ಬೇಕಾಗಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಂತ್ರಿಗಿರಿ ಆಸೆಯನ್ನು ಹೊರಹಾಕಿದರು.ನಗರದ ಹಳೆ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ತಮ್ಮ ಸಾರ್ವಜನಿಕ ಸಂಪರ್ಕ ಕಚೇರಿ ಉದ್ಘಾಟಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನನಗೆ ಮಂತ್ರಿ ಕೊಡುವ ಅವಶ್ಯಕತೆ ಇಲ್ಲ. ನನಗೆ ಅವಶ್ಯಕತೆ ಇರೋದು ಜನರದ್ದು. ಆದರೆ, ಜನರು ನಾನು ಮರಳಿ ಬಂದ ಮೇಲೆ ಥೂ ಥೂ ಅಂತಾ ನನ್ನ ಉಗುಳಿದರು. ನಾವು ಮೊದಲೇ ಹೇಳಿದ್ದೆವು ನಿಮಗೆ, ದಲಿತರಿಗೆ ಈ ಪಕ್ಷ ವಿರೋಧಿ ಇದೆ ಅಂತಾ ಎಂದು ಜನ ಹೇಳಿದ್ದರು ಎಂದು ಸಚಿವ ಸ್ಥಾನ ಸಿಗದ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.ಎಲ್ಲ ಮೇಲ್ವರ್ಗದವರು ಆಗಿದ್ದಾರೆ. ದಕ್ಷಿಣ ಭಾರತದಲ್ಲಿ ನಾನೊಬ್ಬನೇ ದಲಿತ ಗೆದ್ದು ಬಂದಿದ್ದೇನೆ. 7 ಚುನಾವಣೆಯಲ್ಲಿ ಆಯ್ಕೆ ಆಗಿ ಬಂದಿದ್ದೇನೆ. ದಲಿತರೇನು ಬಿಜೆಪಿಗೆ ಸಪೋರ್ಟ್ ಮಾಡಿಲ್ವಾ? ಇದು ಎಂತಹ ಅನ್ಯಾಯ? ಒಬ್ಬ ದಲಿತ ಮನುಷ್ಯನಿಗೆ ಅನ್ಯಾಯ. ನನಗೆ ಇದರ ಬಗ್ಗೆ ತುಂಬಾ ನೋವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಖರ್ಗೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 60 ಎಕರೆ ಅಲಾಟ್ ಆಗಿದೆಯಂತೆ:
ಮುಡಾ ಹಗರಣ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದು ಒಂದೇ ಹಗರಣನಾ? ಇನ್ನೂ ಎಷ್ಟು ಇದಾವೆ ಬಿಚ್ಚಲಾ? ಇದಾವೆ ಸಂದರ್ಭ ಬರಲಿ ಹೇಳುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದರು.ಇನ್ನು ಸಿದ್ದರಾಮಣ್ಣಂದು ನನಗೆ ಗೊತ್ತಿಲ್ಲ. ಸಚಿವ ಮಹಾದೇವಪ್ಪ ಹೇಳಿಕೆ ನೋಡಿದ್ದೇನೆ. ಅದು ಬೇರೆ ಲ್ಯಾಂಡ್ ಇದೆ ಅಂತಾ ಹೇಳಿದ್ದಾರೆ ಎಂದ ಅವರು, ಇನ್ನೊಂದು ವಿಷಯ ನನಗೆ ರಾತ್ರಿ ಗೊತ್ತಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲೆ ಗ್ರೇಟ್ ಅಪವಾದ ಬಂದಿದೆ. ನನ್ನ ಕಡೆ ರೆಕಾರ್ಡ್ ಇಲ್ಲ, ಅವರಿಗೆ ಎಲ್ಲೋ ಒಂದು ಲ್ಯಾಂಡ್ ಅಲಾಟ್ ಆಗಿದೆಯಂತೆ. ಶಿವಮೊಗ್ಗ ಜಿಲ್ಲೆಯಲ್ಲಿ 60 ಎಕರೆ ಅಲಾಟ್ ಆಗಿದೆಯಂತೆ. ಕೋರ್ಟನಲ್ಲೂ ಅದು ಎಡವರ್ಸ್ (ಅವರ ವಿರುದ್ಧ) ಆಗಿದೆ ಅಂತಾರೆ. ನನ್ನ ಹತ್ತಿರ ಅದರ ಪೇಪರ್‌ಗಳಿಲ್ಲ. ಅದು ಆಗಬಾರದಿತ್ತು. ಅದರ ಡಿಟೇಲ್ ನೋಡಿ ಹೇಳುತ್ತೇನೆ ಎಂದು ಖರ್ಗೆ ವಿರುದ್ಧ ಬಾಂಬ್ ಸಿಡಿಸಿದರು.ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ಸುರಿಮಳೆ:ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಗರಣ ಇವರ ಹುಟ್ಟು ಜನ್ಮದಲ್ಲಿದೆ ಎಂದು ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತಿ ಮಂತ್ರಿಗಳದ್ದು ಹಗರಣ ಇತ್ತು. ಇದೆ ಚಾಳಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮುಂದುವರೆದಿದೆ. ನೂರಾರು ಅವ್ಯವಹಾರಗಳು ಕರ್ನಾಟಕದಲ್ಲಿ ಆಗುತ್ತಿವೆ. ಕಾಂಗ್ರೆಸ್‌ನವರು ನಾಚಿಕೆಗೇಡಿ ಜನ, ಒಂದು ವರ್ಷವಾದರೂ ಒಂದೇ ಒಂದು ಅಭಿವೃದ್ಧಿ ಕೆಲಸ ಇಲ್ಲ. ಇವರಿಗೆ ನಾಚಿಕೆ ಆಗಲ್ವಾ? ಎಲ್ಲ ದುಡ್ಡು ಒಯ್ದು ಗ್ಯಾರಂಟಿಗೆ ಹಾಕಿದ್ದಾರೆ. ದಲಿತರ ಹಣವನ್ನು ನುಂಗಿ ಕುಳಿತಿದ್ದೀರಿ, ವರ್ಷದಿಂದ ಅಭಿವೃದ್ಧಿ ಇಲ್ಲ, ಸರ್ಕಾರ ಅಭಿವೃದ್ಧಿಗೆ ಕತ್ತರಿ ಹಾಕಿದೆ ಎಂದು ದೂರಿದರು.ಒಂದೇ ಒಂದು ರುಪಾಯಿ SCP ಯಿಂದ ಬಂದಿಲ್ಲ:
ವಾಲ್ಮೀಕಿ ನಿಗಮದಲ್ಲಿ ಆಗಿರುವ ಹಗರಣದ ಕುರಿತು ವಾಗ್ದಾಳಿ ನಡೆಸಿದ ಅವರು, ಈವರೆಗೂ ದೇಶದಲ್ಲಿ ಇಂತಹ ಹಗರಣ ನಡೆದಿರಲಿಲ್ಲ. ನನಗೂ SCP ಯಿಂದ ₹5 ಕೋಟಿ ಬರ್ತಿತ್ತು. ದಲಿತ, ಹಿಂದುಳಿದವರಿಗೆ ಖರ್ಚು ಮಾಡುತ್ತಿದ್ದೆ. ಈ ವರ್ಷ ನನಗೆ ಒಂದೇ ಒಂದು ರುಪಾಯಿ SCP ಯಿಂದ ಬಂದಿಲ್ಲ. ಸಿಎಂ ಸಿದ್ದರಾಮಯ್ಯ ಕೈಗೊಂಡ ನಿರ್ಣಯವನ್ನು ಖಂಡಿಸುತ್ತೇನೆ. ಹಿಂದೆಂದೂ ಈ ಹಣವನ್ನು ಸರ್ಕಾರದವರು ತೆಗೆದುಕೊಂಡಿರಲಿಲ್ಲ. ನಿಮಗೇನು ದಾಢಿಯಾಗಿದೆ? ಅದೆ ಹಣ ನಿಮಗೆ ಬೇಕಿತ್ತಾ? ಬೇರೆ ಬೇರೆ ಇಲಾಖೆಯಲ್ಲಿ ಸಾಕಷ್ಟು ಹಣ ಇತ್ತು ಅದನ್ಯಾಕೆ ಮುಟ್ಟಲಿಲ್ಲ? ಇದರ ಬಗ್ಗೆ ಸಚಿವ ಮಹಾದೇವಪ್ಪ ಪ್ರತಿಭಟನೆ ಮಾಡಬೇಕು ಎಂದು ಒತ್ತಾಯಿಸಿದರು.