ಗೆಳೆಯರ ಜತೆಗೂಡಿ ತಾಯಿ ಕೊಂದ ಅಪ್ರಾಪ್ತೆ ಮಗಳು

| N/A | Published : Nov 01 2025, 02:00 AM IST / Updated: Nov 01 2025, 07:09 AM IST

Minor Girl Mother

ಸಾರಾಂಶ

ಮನೆಯಲ್ಲಿ ರಾತ್ರಿ ‘ಸ್ನೇಹ ಕೂಟ’ಕ್ಕೆ ಆಕ್ಷೇಪಿಸಿದ್ದರಿಂದ ಸಿಟ್ಟಿಗೆದ್ದು ತಾಯಿಯನ್ನೇ ತನ್ನ ಅಪ್ರಾಪ್ತ ಗೆಳೆಯರ ಜತೆ ಸೇರಿ ಕೊಂದು ಬಳಿಕ ಆತ್ಮ*ತ್ಯೆ ಎಂದು ಮಗಳೊಬ್ಬಳು ಕತೆ ಹೆಣೆದಿದ್ದ ಕೃತ್ಯ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

 ಬೆಂಗಳೂರು :  ಮನೆಯಲ್ಲಿ ರಾತ್ರಿ ‘ಸ್ನೇಹ ಕೂಟ’ಕ್ಕೆ ಆಕ್ಷೇಪಿಸಿದ್ದರಿಂದ ಸಿಟ್ಟಿಗೆದ್ದು ತಾಯಿಯನ್ನೇ ತನ್ನ ಅಪ್ರಾಪ್ತ ಗೆಳೆಯರ ಜತೆ ಸೇರಿ ಕೊಂದು ಬಳಿಕ ಆತ್ಮ*ತ್ಯೆ ಎಂದು ಮಗಳೊಬ್ಬಳು ಕತೆ ಹೆಣೆದಿದ್ದ ಕೃತ್ಯ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಉತ್ತರಹಳ್ಳಿ ನಿವಾಸಿ ನೇತ್ರಾವತಿ (34) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಮೃತರ ಅಪ್ರಾಪ್ತ ಮಗಳು ಸೇರಿದಂತೆ ಆಕೆಯ 16-17 ವರ್ಷದ ಐವರು ಗೆಳೆಯರನ್ನು ಬಂಧಿಸಿ ಬಾಲ ಮಂದಿರಕ್ಕೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಕಳುಹಿಸಿದ್ದಾರೆ. ಕಳೆದ 4 ದಿನಗಳ ಹಿಂದೆ ಶಂಕಾಸ್ಪದವಾಗಿ ನೇತ್ರಾವತಿ ಮೃತಪಟ್ಟಿದ್ದರು. ಆದರೆ ತಾಯಿ ಸಾವಿನ ಬಳಿಕ ಅಂತ್ಯಕ್ರಿಯೆಗೆ ಬಾರದೆ ಕಾಣೆಯಾಗಿದ್ದ ಮಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದಾಗ ಹತ್ಯೆ ಸಂಚು ಬಯಲಾಗಿದೆ.

ಎಸ್‌ಎಸ್‌ಎಲ್‌ಸಿಗೆ ಶಿಕ್ಷಣ ಮೊಟಕು:

ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದ ನೇತ್ರಾವತಿ, ಉತ್ತರಹಳ್ಳಿಯಲ್ಲಿ ತಮ್ಮ ಮಗಳ ಜತೆ ನೆಲೆಸಿದ್ದರು. ಎಸ್‌ಎಸ್‌ಎಲ್‌ಸಿಗೆ ಓದು ಮೊಟಕುಗೊಳಿಸಿದ್ದ ಮಗಳು ದಾರಿ ತಪ್ಪಿದ್ದಳು. ಅದೇ ಪ್ರದೇಶದಲ್ಲಿ ಪಿಯುಸಿಗೆ ಶಿಕ್ಷಣ ತೊರೆದಿದ್ದ ನಾಲ್ವರು ಅಪ್ರಾಪ್ತರ ಜತೆ ಆಕೆಯ ಸ್ನೇಹ ಬೆಳೆದಿತ್ತು. ಈ ಗೆಳೆತನದಲ್ಲಿ ನೇತ್ರಾವತಿ ಮನೆಗೆ ಮಗಳ ಸ್ನೇಹಿತರು ಬಂದು ಹೋಗುತ್ತಿದ್ದರು. ಈ ವಿಚಾರ ತಿಳಿದ ನೇತ್ರಾವತಿ, ಮಗಳಿಗೆ ಬುದ್ಧಿ ಮಾತು ಹೇಳಿದ್ದರೂ ತಿದ್ದಿಗೊಳ್ಳಲಿಲ್ಲ. ಅ.25ರಂದು ರಾತ್ರಿ 10.30ರ ಸುಮಾರಿಗೆ ನೇತ್ರಾವತಿ ಇದ್ದಾಗಲೇ ಸ್ನೇಹಿತರನ್ನು ಮನೆಗೆ ಕರೆಸಿಕೊಂಡು ಮಗಳು ಮಾತನಾಡುತ್ತಿದ್ದಳು. ಮಗಳ ವರ್ತನೆಗೆ ಕೆರಳಿದ ತಾಯಿ, ಮಗಳ ಸ್ನೇಹಿತರ ಮೇಲೆ ಕೂಗಾಡಿದ್ದಾರೆ. ಈ ವೇಳೆ ತಾಯಿ-ಮಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ನೀವು ಮನೆಯಿಂದ ಹೋಗದಿದ್ದರೆ ತಾನು ಪೊಲೀಸರಿಗೆ ವಿಷಯ ತಿಳಿಸುವುದಾಗಿ ಮಗಳ ಸ್ನೇಹಿತರಿಗೆ ನೇತ್ರಾವತಿ ತಾಕೀತು ಮಾಡಿದ್ದಾರೆ. ಈ ಹಂತದಲ್ಲಿ ಕೆರಳಿದ ಸ್ನೇಹಿತರು, ನೇತ್ರಾವತಿ ಅವರ ಬಾಯಿ ಮುಚ್ಚಿ ಉಸಿರುಗಟ್ಟಿಸಿ ಬಳಿಕ ನೇ* ಹಾಕಿ ಪರಾರಿಯಾಗಿದ್ದರು. ಮರುದಿನ ನೇತ್ರಾವತಿ ಮನೆಗೆ ಆಕೆಯ ಸೋದರಿ ಬಂದಾಗ ನೇಣಿನ ಕುಣಿಕೆಯಲ್ಲಿ ಮೃತದೇಹ ಕಂಡು ಆತಂಕಗೊಂಡಿದ್ದಾರೆ. ಕೂಡಲೇ ಪೊಲೀಸರಿಗೆ ಅವರು ತಿಳಿಸಿದ್ದರು.

ಮೃತಳ ಸೋದರಿ ದೂರು:

ನನ್ನ ತಂಗಿ ಮಗಳು ಶನಿವಾರ ರಾತ್ರಿ ಮನೆ ಬಿಟ್ಟು ಹೋಗಿ 3-4 ದಿನ ಎಲ್ಲಿಯೋ ತಲೆಮರೆಸಿಕೊಂಡಿದ್ದಳು. ಈಗ ಮನೆಗೆ ಬಂದು ತಾಯಿ ಸಾವಿನ ಕುರಿತು ಆಕೆ ಏನೇನೋ ಗೊಂದಲಮಯವಾಗಿ ಮಾತನಾಡುತ್ತಿದ್ದಾಳೆ. ಈಕೆಯ ವರ್ತನೆಯಿಂದ ನನ್ನ ತಂಗಿ ಸಾವಿನನಲ್ಲಿ ಮಗಳ ಪಾತ್ರದ ಬಗ್ಗೆ ಶಂಕೆ ಇದೆ ಎಂದು ಮೃತಳ ಸೋದರಿ ದೂರಿನಲ್ಲಿ ಉಲ್ಲೇಖಿಸಿದ್ದರು. ಅದರನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, ಮೃತಳ ಪುತ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆತ್ತವಳ ಅಂತ್ಯಕ್ರಿಯೆಗೂ

ಬಾರದ ಕೊಲಗಡುಕಿ ಪುತ್ರಿ

ತಾಯಿ ನೇತ್ರಾವತಿ ಅಂತ್ಯಕ್ರಿಗೂ ಮಗಳು ಬಾರದೆ ನಾಪತ್ತೆಯಾಗಿದ್ದಳು. ಆಕೆಯ ಮೊಬೈಲ್‌ಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಶಂಕೆಗೊಂಡ ಸಂಬಂಧಿಕರು, ಮರುದಿನ ಪೊಲೀಸರಿಗೆ ನೇತ್ರಾವತಿ ಸಾವಿನ ಬಗ್ಗೆ ಅನುಮಾನವಿದೆ ಎಂದು ತನಿಖೆಗೆ ಒತ್ತಾಯಿಸಿ ದೂರು ನೀಡಿದ್ದರು. ಅಷ್ಟರಲ್ಲಿ 3 ದಿನಗಳ ಬಳಿಕ ತನ್ನ ಚಿಕ್ಕಮ್ಮ ಅನಿತಾ ಮನೆಗೆ ನೇತ್ರಾವತಿ ಮಗಳು ಬಂದಿದ್ದಾಳೆ. ಆಗ ಆಕೆಯನ್ನು ವಿಚಾರಿಸಿದಾಗ ಬೇರೆ ಕತೆ ಹೇಳಿದ್ದಾಳೆ ಎನ್ನಲಾಗಿದೆ.

ಸೆ.25 ರಂದು ರಾತ್ರಿ ಸುಮಾರು 10:30 ಗಂಟೆಯ ಸಮಯದಲ್ಲಿ ಅಮ್ಮ ಮತ್ತು ನಾನು ಮನೆಯಲ್ಲಿರುವಾಗ ನನ್ನ ಸ್ನೇಹಿತರು ನಮ್ಮ ಮನೆಗೆ ಬಂದರು. ಆಗ ನನ್ನ ಸ್ನೇಹಿತರು ಮನೆಗೆ ಬಂದಿರುವ ವಿಚಾರದ ಬಗ್ಗೆ ಪೊಲೀಸ್ ಠಾಣೆಗೆ ಪೋನ್ ಮಾಡುತ್ತೇನೆಂದು ಅಮ್ಮ ತಿಳಿಸಿದರು. ಆಗ ಅಮ್ಮನ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ, ನಂತರ ರೂಮಿಗೆ ಎಳೆದುಕೊಂಡು ಸೀರೆಯಿಂದ ಪ್ಯಾನ್‌ಗೆ ನೇ* ಹಾಕಿದರು. ನನಗೆ ಚಾಕು ತೋರಿಸಿ ಯಾರಿಗೂ ಹೇಳಬೇಡ ಎಂದು ಹೆದರಿಸಿದರು. ನಂತರ ನಾನು ನನ್ನ ಸ್ನೇಹಿತೆಯ ಮನೆಗೆ ಹೋಗಿದ್ದೆ. ಮರುದಿನ ನನಗೆ ತಾಯಿ ಸತ್ತು ವಿಷಯ ತಿಳಿಯಿತು ಎಂದು ಮೃತಳ ಪುತ್ರಿ ಕತೆ ಹೇಳಿದ್ದಾಳೆ.

Read more Articles on