ಅಪ್ರಾಪ್ತರು ವಾಹನ ಚಲಾಯಿಸದಿರಿ: ಕೆಜಿಎಫ್ ಪೊಲೀಸರು

| Published : Jan 29 2025, 01:31 AM IST

ಸಾರಾಂಶ

ಅಪ್ರಾಪ್ತರು ಯಾವುದೇ ಕಾರಣಕ್ಕೂ ವಾಹನಗಳನ್ನು ಚಲಾಯಿಸಬಾರದು, ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಲಾಯಿಸುವುದರಿಂದ ಉಂಟಾಗುವ ಆಗುಹೋಗುಗಳ ಕುರಿತು ಅಗತ್ಯ ಸೂಚನೆಗಳನ್ನು ನೀಡಿ, ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಲು ಕೈ ಜೋಡಿಸಬೇಕೆಂದು ವಿವರಿಸಿ, ಸಂಚಾರ ನಿಯಮಗಳು ಕುರಿತಾದ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಕೆಜಿಎಫ್

ಕೆಜಿಎಫ್ ಪೊಲೀಸ್ ಜಿಲ್ಲೆಯ ೨೦೨೫ನೇ ಸಾಲಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ, ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮ ಕುರಿತು ಕೆಜಿಎಫ್ ಪೊಲೀಸರಿಂದ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.

ಕೆಜಿಎಫ್‌ನ ಬೇತಮಂಗಲ ಸಿಪಿಐ ರಂಗಶಾಮಯ್ಯ ಮತ್ತು ಪಿಎಸ್‌ಐ ಗುರುರಾಜ್ ಚಿಂತಾಕಲ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಸುಗಮ ಸಂಚಾರ, ರಸ್ತೆ ಸುರಕ್ಷತೆ, ಅಪಘಾತಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಸ್ತುತ ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರು ಮುನ್ನೆಚ್ಚರಿಕೆಯ ಮೂಲಕ ಸಹಕಾರ ನೀಡುವುದು ಅತ್ಯವಶ್ಯಕವಾಗಿದೆಯೆಂದರು. ಸಂಚಾರ ನಿಯಮಗಳನ್ನು ಪಾಲಿಸಲು ಈಗಿನ ಯುವಜನತೆಯು ಬಹಳಷ್ಟು ಸಹಕಾರ ನೀಡಬೇಕು, ತಪ್ಪದೇ ಸಂಚಾರ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು. ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡುವಂತೆ ಹಾಗೂ ದ್ವಿಚಕ್ರ ವಾಹನಗಳಲ್ಲಿ ಎರಡಕ್ಕಿಂತ ಹೆಚ್ಚು ಜನ ಪ್ರಯಾಣ ಮಾಡುವುದು ಅಪಾಯಕಾರಿ ಹಾಗೂ ಇದು ಐಎಂವಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ಸೂಕ್ತ ದಂಡಕ್ಕೆ ಅರ್ಹವಾಗಿರುತ್ತದೆ, ರಸ್ತೆ ಸುರಕ್ಷತೆಗಾಗಿ ಅತಿವೇಗ ಮತ್ತು ಕುಡಿದು ವಾಹನ ಚಲಾಯಿಸಬಾರದೆಂದು ವಿವರಿಸಿದರು.

ಅಪ್ರಾಪ್ತರು ಯಾವುದೇ ಕಾರಣಕ್ಕೂ ವಾಹನಗಳನ್ನು ಚಲಾಯಿಸಬಾರದು, ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಲಾಯಿಸುವುದರಿಂದ ಉಂಟಾಗುವ ಆಗುಹೋಗುಗಳ ಕುರಿತು ಅಗತ್ಯ ಸೂಚನೆಗಳನ್ನು ನೀಡಿ, ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಲು ಕೈ ಜೋಡಿಸಬೇಕೆಂದು ವಿವರಿಸಿ, ಸಂಚಾರ ನಿಯಮಗಳು ಕುರಿತಾದ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಯಿತು.

ಬೆಮಲ್ ನಗರ ಪಿಎಸ್‌ಐ ವಿದ್ಯಾಶ್ರೀ ಅವರು ಬೆಮಲ್ ನಗರ ಕ್ರೀಡಾ ಸಂಕೀರ್ಣದಲ್ಲಿ ಹಾಗೂ ರಾಬರ್ಟ್ಸನ್‌ಪೇಟೆ ಪೊಲೀಸ್ ಠಾಣೆಯ ಎಎಸ್‌ಐ ಮುನೇಗೌಡ ಅವರು ರಾಬರ್ಟ್ಸನ್‌ಪೇಟೆ ಬಸ್ ನಿಲ್ದಾಣದಲ್ಲಿ ಯುವಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದರು.