ಸಾಗ್ಯ ಗ್ರಾಮದಲ್ಲಿ ಪವಾಡ ಪುರುಷ ಬಸಪ್ಪ ನಿಧನ

| Published : Jan 01 2025, 12:00 AM IST

ಸಾಗ್ಯ ಗ್ರಾಮದಲ್ಲಿ ಪವಾಡ ಪುರುಷ ಬಸಪ್ಪ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಅನೇಕ ಪವಾಡಗಳನ್ನು ಮಾಡಿ ಹೆಸರು ವಾಸಿಯಾಗಿದ್ದು, ರೈತರಿಗೆ ಬೋರ್ವೆಲ್ ಕೊರೆಸಲು ಸ್ಥಳ ಸೂಚಿಸುವುದು, ಸಂತಾನವಿಲ್ಲದ ಜನರಿಗೆ ತನ್ನ ಕಾಲುಗಳ ಮೂಲಕ ಆಶೀರ್ವಾದ ನೀಡಿ ಸಂತಾನ ಪ್ರಾಪ್ತಿಗೆ ಹಾಗೂ ಜಮೀನಿನ ವಿವಾದಗಳನ್ನು ಬಗೆಹರಿಸುವಲ್ಲಿ ತುಂಬಾ ಹೆಸರುವಾಸಿಯಾಗಿತ್ತು. ಈಗ ಅದನ್ನು ಕಳೆದುಕೊಂಡು ಸಾಗ್ಯ ಗ್ರಾಮಸ್ಥರು ದುಃಖ ತಪ್ತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಸಾಗ್ಯ ಗ್ರಾಮದಲ್ಲಿ ಹಲವು ಪವಾಡಗಳನ್ನು ಮಾಡುತ್ತಾ ನಡೆದಾಡುವ ದೇವರು ಎಂದೇ ಹೆಸರುವಾಸಿಯಾಗಿದ್ದ ಬಸಪ್ಪ ವಯಸ್ಸಾಗಿದ್ದ ಕಾರಣ ಮಂಗಳವಾರ ಬೆಳಗ್ಗೆ ಮೃತಪಟ್ಟಿದೆ.

ಬಸಪ್ಪ ಮೃತಪಟ್ಟ ವಿಷಯ ತಿಳಿದು ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಬಂದು ಬಸವ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಗ್ರಾಮದ ಮುಖಂಡರಾದ ನಾಡಗೌಡ ಮಾದೇಗೌಡ ಮಾತನಾಡಿ, ನಮ್ಮ ಬಸಪ್ಪ ಚಿಕ್ಕ ಕರುವಿದ್ದಾಗ ತಂದು ನಮ್ಮ ಗ್ರಾಮದಲ್ಲಿ ಬಸವನಾಗಿ ಮಾಡಲಾಗಿತ್ತು. ಅದು ಈಗ ವಯಸ್ಸಾದ ಕಾರಣ ಮಂಗಳವಾರ ಬೆಳಗ್ಗೆ ಮರಣ ಹೊಂದಿದೆ. ನಮಗೆ ತುಂಬಾ ನೋವಿನ ಸಂಗತಿಯಾಗಿದೆ ಎಂದರು.

ಇದು ಅನೇಕ ಪವಾಡಗಳನ್ನು ಮಾಡಿ ಹೆಸರು ವಾಸಿಯಾಗಿದ್ದು, ರೈತರಿಗೆ ಬೋರ್ವೆಲ್ ಕೊರೆಸಲು ಸ್ಥಳ ಸೂಚಿಸುವುದು, ಸಂತಾನವಿಲ್ಲದ ಜನರಿಗೆ ತನ್ನ ಕಾಲುಗಳ ಮೂಲಕ ಆಶೀರ್ವಾದ ನೀಡಿ ಸಂತಾನ ಪ್ರಾಪ್ತಿಗೆ ಹಾಗೂ ಜಮೀನಿನ ವಿವಾದಗಳನ್ನು ಬಗೆಹರಿಸುವಲ್ಲಿ ತುಂಬಾ ಹೆಸರುವಾಸಿಯಾಗಿತ್ತು. ಈಗ ಅದನ್ನು ಕಳೆದುಕೊಂಡು ಸಾಗ್ಯ ಗ್ರಾಮಸ್ಥರು ದುಃಖ ತಪ್ತರಾಗಿದ್ದಾರೆ ಎಂದು ನೋವಿನಿಂದ ಹೇಳಿದರು.

ಮುಂದೆ ದೇವರು ನಮಗೆಲ್ಲ ಧೈರ್ಯ ನೀಡಿ ನಮ್ಮ ಗ್ರಾಮದ ಅಭಿವೃದ್ಧಿಗೆ ದಾರಿ ತೋರುವವಂತಾಗಲಿ, ಬೆಳಗಿನಿಂದ ಗ್ರಾಮದ ಪ್ರತಿಯೊಂದು ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೊನೇ ಬಾರಿ ಪವಾಡ ಬಸಪ್ಪನ ದರ್ಶನ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ನಂತರ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. 11ನೇ ದಿನಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.

ಹೂವಿನಿಂದ ಅಲಂಕಾರ ಮಾಡಿದ ತರೆದ ವಾಹನದಲ್ಲಿ ಬಸವನನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ಪ್ರತಿ ಮನೆಯಿಂದ ಆರತಿ ಮಾಡಿ ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವ ಮೆರೆದರು. ಬಸವೇಶ್ವರ ಸ್ವಾಮಿ ದೇವಾಲಯದ ಅವರಣದಲ್ಲಿ ಬಸವನ ಅಂತ್ಯಕ್ರಿಯೆ ಮಾಡಲಾಯಿತು.

ಈ ವೇಳೆ ಯಜಮಾನರಾದ ಈರೇಗೌಡ, ನಾಡಗೌಡ ಮಹದೇವ, ಸಮಾಜ ಸೇವಕ ಕೆಂಪೇಗೌಡ, ಮರಿದೇವರು ರಾಜಣ್ಣ, ನಟರಾಜ್, ಸುರೇಶ್, ಪುಟ್ಡಸ್ವಾಮಿ, ಸಾಗ್ಯ ಗ್ರಾಮದ ಮುಖಂಡರು ಭಕ್ತಾಧಿಗಳು ಭಾಗವಹಿಸಿದ್ದರು.