ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ಮೀರಾಸಾಬಿಹಳ್ಳಿಯ ರಾಣೀಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಬುಧವಾರ ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ಸಹಯೋಗದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.ಮೀರಾಸಾಬಿಹಳ್ಳಿಯ ರಾಣೀಕೆರೆ ಸುಮಾರು ನಾಲ್ಕು ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ವಿಸ್ತರಿಸಿಕೊಂಡಿದೆ. ಇದರಲ್ಲಿ ಕೆರೆಯ ಅಂಚಿನಲ್ಲಿ ಇರುವ ಜಮೀನುಗಳ ಮಾಲೀಕರು ಕೆರೆಯ ವ್ಯಾಪ್ತಿಯ ಜಮೀನಿಗೂ ಒತ್ತುವರಿಯ ಬೇಲಿ ಹಾಕಿಕೊಂಡು ಫಸಲು ನೆಟ್ಟಿದ್ದರು.
ಕೆರೆ ತುಂಬಿದಾಗ ಮುಳುಗಡೆ ಆಗುತ್ತಿದ್ದ ಬೆಳೆ ನೀರು ಬತ್ತಿದ ಮೇಲೆ ಯಥಾಸ್ಥಿತಿಯಂತೆ ಒತ್ತುವರಿ ಮುಂದುವರೆಯುತ್ತಿತ್ತು. 2022-23ರಲ್ಲಿ ನೀರಾವರಿ ಇಲಾಖೆ ಭೂಮಾಪನ ಇಲಾಖೆಗೆ ಕೆರೆಯ ಜಾಗದ ಸರ್ವೇ ಮಾಡಿಕೊಡುವಂತೆ ಮನವಿ ಮಾಡಿತ್ತು.ಆರಂಭದ ಹಂತದಲ್ಲಿ ಭರಮಸಾಗರ ವ್ಯಾಪ್ತಿಯಿಂದ ಅಳತೆ ಕಾರ್ಯ ಶುರು ಮಾಡಿದ ಭೂಮಾಪನ ಇಲಾಖೆ ಸುಮಾರು 10 ಎಕರೆ 10 ಗುಂಟೆ ಒತ್ತುವರಿ ಆಗಿರುವುದನ್ನು ಗುರುತಿಸಿತ್ತು. ಇಂತಹ ಒತ್ತುವರಿಯ ಜಾಗವನ್ನು ಒತ್ತುವರಿದಾರರಿಂದ ಬಿಡಿಸಿಕೊಳ್ಳಲು ತಾಲೂಕು ಆಡಳಿತ ಸೂಕ್ತ ತಿಳುವಳಿಕೆ ಹಾಗೂ ನೋಟಿಸ್ ನೀಡಿ ರೈತರನ್ನು ಮನವೊಲಿಸಿ ಯಾವುದೇ ಸಂಘರ್ಷಕ್ಕೆ ಎಡೆಮಾಡಿಕೊಡದೇ ತೆರವು ಕಾರ್ಯಕ್ಕೆ ಕೈ ಹಾಕಿಯೇ ಬಿಟ್ಟಿತು. ಈ ಕುರಿತು ಏ.7ರಂದು ಮಂಗಳವಾರ ಕನ್ನಡಪ್ರಭ ವಿವರವಾದ ವರದಿ ಮಾಡಿತ್ತು. ವರದಿ ಬಂದ ಮರುದಿನವೇ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಭರಮಸಾಗರ ವ್ಯಾಪ್ತಿಯ ಕೆಲವು ರೈತರು ಅಡಕೆ ತೋಟ, ಬಾಳೆ ತೋಟ ಮಾಡಿಕೊಂಡಿದ್ದರು. ಇದೀಗ ಇಂತಹ ಒತ್ತುವರಿಗೆ ಜೆಸಿಬಿಗಳಿಂದ ಟ್ರಂಚ್ ಹೊಡೆಸಲಾಗಿದೆ. ಇದಾದ ನಂತರ ಮೀರಾಸಾಬಿಹಳ್ಳಿ ಬೊಮ್ಮಸಮುದ್ರ, ದೊಡ್ಡೇರಿ ಸರ್ವೇ ನಂಬರ್‌ಗಳಲ್ಲೂ ಅಳತೆ ಕಾರ್ಯ ನಡೆಯುತ್ತಿದೆ. ಅಳತೆ ಕಾರ್ಯ ಮುಗಿದ ಮೇಲೆ ಆ ಭಾಗಗಳಲ್ಲೂ ಒತ್ತುವರಿ ಮಾಡಿದ ಕೆರೆಯ ಜಾಗವನ್ನು ಉಳಿಸಿಕೊಳ್ಳಲಾಗುವುದು ಎಂದು ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.
ಭರಮಸಾಗರ ವ್ಯಾಪ್ತಿಯ ಸುಮಾರು 8 ರೈತರು ಕೆರೆಯ ಜಮೀನು ಒತ್ತುವರಿ ಮಾಡಿರುವುದು ಅಧಿಕಾರಿಗಳ ಮಾಹಿತಿಯಿಂದ ತಿಳಿದು ಬಂದಿದೆ. ಮುಂದಿನ ಸರ್ವೇ ಕಾರ್ಯದಲ್ಲಿ ಇನ್ನಷ್ಟು ರೈತರು ಒತ್ತುವರಿ ಮಾಡಿದ್ದಾರೆ ಎಂಬುದು ತಿಳಿಯಲಿದೆ. ಅಂತೂ, ರಾಣೀಕೆರೆಯ ಒತ್ತುವರಿಗೆ ದಿಟ್ಟ ಹೆಜ್ಜೆ ಇಟ್ಟ ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಈ ಭಾಗದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ತೆರವು ಕಾರ್ಯಾಚರಣೆ ವೇಳೆ ತಹಸೀಲ್ದಾರ್ ರೇಹಾನ ಪಾಷಾ, ಸಣ್ಣ ನೀರಾವರಿ ಇಲಾಖೆ ಎಇಇ ಅಣ್ಣಪ್ಪ, ಎಇ ರವಿಕುಮಾರ್, ಸಿಪಿಐ ಕೆ.ಕುಮಾರ್, ನೀರಾವರಿ ಇಲಾಖೆ ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು.