ಹುಬ್ಬಳ್ಳಿ: ಇಲ್ಲಿನ ಕೋರ್ಟ್ ವೃತ್ತದಲ್ಲಿರುವ ಶ್ರೀ ಸಾಯಿ ಮಂದಿರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಭಕ್ತರ ಹಣ ಲೂಟಿ ಹೊಡೆಯುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಬುಧವಾರ ಶ್ರೀರಾಮ ಸೇನೆ ಕಾರ್ಯಕರ್ತರು ಸಾಯಿ ಮಂದಿರದ ಎದುರು ಪ್ರತಿಭಟನೆ ನಡೆಸಿದರು.

ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿಯು ಭಕ್ತರ ಹಣವನ್ನು ಅನಾಥಾಶ್ರಮ- ವೃದ್ಧಾಶ್ರಮದ ಹೆಸರಿನಲ್ಲಿ ದರೋಡೆ ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕೆ ಹೊರತು ಟೇಬಲ್ ಟೆನ್ನಿಸ್ ಆಟವಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಇಲ್ಲಿ ಟೇಬಲ್ ಟೆನ್ನಿಸ್ ಆಟವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ದೇವಸ್ಥಾನದ ಎದುರು ಅಳವಡಿಸಲಾಗಿದ್ದ ದೇಣಿಗೆ ಬೋರ್ಡ್, ಕ್ಯೂಆರ್ ಕೋಡ್ ಸ್ಟಿಕ್ಕರ್ ಹರಿದು ಆಕ್ರೋಶ ಹೊರಹಾಕಿದ ಶ್ರೀರಾಮ ಸೇನೆಯ ಕಾರ್ಯಕರ್ತರು, ತನಿಖೆ ಮುಗಿಯುವ ವರೆಗೆ ಕಾಣಿಕೆ ಪೆಟ್ಟಿಗೆ ತೆರೆಯಬಾರದು ಎಂದು ದೇವಸ್ಥಾನದ ಆವರಣದಲ್ಲಿದ್ದ ಎರಡೂ ಕಾಣಿಕೆ ಪೆಟ್ಟಿಗೆಗಳಿಗೆ ಬೀಗ ಜಡಿದು, ಸೀಜ್ ಮಾಡಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ದೇವಸ್ಥಾನದ ಆಡಳಿತ ಮಂಡಳಿಯ ಜೊತೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡಿತು.

ಪ್ರತಿಭಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಶ್ರೀ ಸಾಯಿಬಾಬಾ ಮಂದಿರದಲ್ಲಿ ಅನೈತಿಕತೆ ನಡೆಯುತ್ತಲೇ ಇದೆ. ಇದನ್ನು ಪ್ರಶ್ನಿಸಿ ಈ ಹಿಂದೆಯೂ ಹೋರಾಟ ಮಾಡಲಾಗಿತ್ತು. ನಾವು ನೀಡಿದ ದಾಖಲೆಗಳ ಆಧಾರದ ಮೇಲೆ ಜಿಲ್ಲಾಧಿಕಾರಿ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ತನಿಖೆಗೆ ಆದೇಶಿಸಿದ್ದರು. ಇನ್ನು 2 ತಿಂಗಳಲ್ಲಿ ತನಿಖಾ ವರದಿ ಹೊರ ಬರಲಿವೆ. ಆದರೆ, ತನಿಖೆ ನಡೆಯುತ್ತಿರುವ ಸಮಯದಲ್ಲೂ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಹುಂಡಿಗೆ ಬಿದ್ದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆಡಳಿತ ಮಂಡಳಿಯವರ ಲೂಟಿ ನಿಲ್ಲಿಸಬೇಕು. ದೇವಸ್ಥಾನದ ಪಾವಿತ್ರ್ಯತೆ ಉಳಿಸಬೇಕಿದೆ. ಕಾನೂನು ಬದ್ಧ ಪ್ರಕ್ರಿಯೆಗೆ ಗೌರವ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಬೀಗ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರಾದ ಮಂಜುನಾಥ ಕಾಟಕರ್, ರಘು ಯಲ್ಲಕ್ಕನವರ, ಗುಣಧರ ಧಡೂತಿ, ಅಣ್ಣಪ್ಪ ದಿವಟಗಿ, ಮಹಾಂತೇಶ ತೊಂಗಳಿ, ಬಸು ದುರ್ಗದ್, ಪ್ರವೀಣ ಮಾಳಡಕರ್ ಸೇರಿದಂತೆ ಹಲವರಿದ್ದರು.