ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಾನು ಅಹಿಂದ ನಾಯಕ, ಅಹಿಂದ ವರ್ಗಕ್ಕೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಗ್ಯಾರಂಟಿಗೆ ಹಣ ಬೇಕೆಂದು ಎಸ್‌ಸಿಇಪಿ, ಟಿಎಸ್‌ಪಿಯ ₹25 ಸಾವಿರ ಕೋಟಿ ಹಣವನ್ನೇ ದುರುಪಯೋಗಪಡಿಸಿಕೊಂಡರು. ಇದರಲ್ಲೇ ಮುಖ್ಯಮಂತ್ರಿ ಸಿದ್ದರಾಮಣ್ಣನವರು ಎಷ್ಟು ಕೆಟ್ಟವರಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ ಟೀಕಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಹಣಕ್ಕೆ ಕೈ ಹಾಕಿದ ಸಿದ್ರಾಮಣ್ಣಾ, ನಿನಗೆ ತಾಕತ್ ಇದ್ದರೆ ಅಲ್ಪಸಂಖ್ಯಾತರ ಕಮಿಟಿ ಮುಟ್ಟಬೇಕಿತ್ತಪಾ? ಆಗ ನಿಮ್ಮ ಅಧಿನಾಯಕಿ ಸೋನಿಯಾಗಾಂಧಿಯೇ ನಿನ್ನ ತಲೆಮೇಲೆ ಇಕ್ಕುತ್ತಿದ್ದರು. ಕಾಂಗ್ರೆಸ್ ಪಕ್ಷ ರಚನೆ ಆದಾಗಿನಿಂದಲೂ ದಲಿತ ಸಮುದಾಯದ ಮತಗಳನ್ನು ಓಟ್‌ಬ್ಯಾಂಕ್ ಮಾಡಿಕೊಂಡಿದ್ದೀರಿ. ದಲಿತರನ್ನು ಕೇವಲ ಚುನಾವಣೆಗೆ ಬಳಸಿಕೊಳ್ಳುತ್ತಿದ್ದೀರಿ. ನಿಮಗೆ ಅಷ್ಟು ದಲಿತರ ಮೇಲೆ ಅಭಿಮಾನ ಇದ್ದರೆ, ನೀವು ಗ್ಯಾರಂಟಿಗೆ ಬಳಸಿಕೊಂಡ ಎಸ್‌ಸಿಇಪಿ, ಟಿಎಸ್‌ಪಿಯ ₹ 25ಸಾವಿರ ಕೋಟಿ ಹಣವನ್ನು ಮರಳಿ ಅದೇ ಯೋಜನೆಗೆ ಹಾಕಿ ಪ್ರಮಾದ ಸರಿಪಡಿಸಿ ನೊಡೋಣ ಎಂದು ಸವಾಲು ಹಾಕಿದರು. ನೀವು ದಲಿತರ ಹಣ ದಲಿತರಿಗೆ ಕೊಡುವವರೆಗೂ ನಾನು ಬಿಡೋದಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್‌ನಲ್ಲಿ ಖರ್ಗೆಗೆ ಅನ್ಯಾಯ:ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆಗೆ ಒಳಗೆ ಹೋಗುವ ವೇಳೆ ಪ್ರಿಯಾಂಕಾ ಗಾಂಧಿ, ರಾಹುಲಗಾಂಧಿ, ಸೋನಿಯಾಗಾಂಧಿ, ಮತ್ತಿಬ್ಬರು ಅವರ ಸಂಬಂಧಿಕರೇ ಒಳಗೆ ಹೋದರು. ಪಾಪ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಿಟಕಿಯಲ್ಲಿ ನಿಂತು ನೋಡುತ್ತಿದ್ದರು. ಇದು ಕಾಂಗ್ರೆಸ್‌ನಲ್ಲಿ ಖರ್ಗೆ ಅವರಿಗೆ ಮಾಡಿದ ಅನ್ಯಾಯವಲ್ಲವೇ? ಅಮಿತ್ ಶಾ ಅಂಬೇಡ್ಕರ ಅವರಿಗೆ ಒಂದು ಶಬ್ದ ಅಂದಿದ್ದಕ್ಕೆ ದೇಶಾದ್ಯಂತ 70 ದಲಿತ ಸಂಘಟನೆಗಳೆಲ್ಲ ಸೇರಿ ಹೋರಾಟ ಮಾಡಿದಿರಿ. ಅದೇ ಕಾಂಗ್ರೆಸ್ ಖರ್ಗೆಗೆ ಅನ್ಯಾಯ ಮಾಡಿದರೆ ಯಾಕೆ ಸುಮ್ಮನೆ ಕುಳಿತಿದ್ದೀರಿ? ಈಗ ಅವರ ವಿರುದ್ಧ ಹೋರಾಟ ಮಾಡುವುದಿಲ್ಲವೇ ಎಂದು ದಲಿತ ಸಮುದಾಯವನ್ನು ಪ್ರಶ್ನಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಈ ಬಜೆಟ್‌ನಲ್ಲಿ ₹15 ಸಾವಿರ ಕೋಟಿ ದಲಿತರ ಹಣ ನುಂಗಲು ಹೊರಟಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ದಲಿತದ್ರೋಹಿ ಸರ್ಕಾರ. ಈ ಮೊದಲು ದಲಿತರ ಹಣ ಬೇರೆಡೆ ಉಪಯೋಗ ಮಾಡಬಾರದು ಎಂಬ ಕಾಯ್ದೆ ಇತ್ತು. ಆದರೆ ಸಿದ್ಧರಾಮಯ್ಯನವರು 7ಡಿ ಎಂಬ ಕಾಯ್ದೆ ತೆಗೆದು 7ಸಿನಲ್ಲಿ ತಮಗೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಮಾ.7ರಂದು ಮಂಡಿಸಲಿರುವ ಬಜೆಟ್‌ನಲ್ಲಿ ದಲಿತರಿಗೆ ಹಣ ಇಡದೆ, ಅವರ ಹಣಕ್ಕೆ ಕೈ ಹಾಕಿದರೆ ದಲಿತಾಂದೋಲನ, ಜನಾಂದೋಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರತಾಪಗೌಡ ಪಾಟೀಲ, ಬಳ್ಳಾರಿ ಹನುಮಂತಪ್ಪ, ರಾಮಣ್ಣ ಬನ್ನಹುಣ್ಸೆ, ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಸಂಜೀವ ಐಹೊಳ್ಳಿ, ಕಾಸುಗೌಡ ಬಿರಾದಾರ, ವಿಜಯ ಜೋಶಿ ಉಪಸ್ಥಿತರಿದ್ದರು.
------------ಕೋಟ್....
ದಲಿತ ಸಮುದಾಯಕ್ಕೆ ಸೇರಿದ ಮುನಿಯಪ್ಪ, ಪರಮೇಶ್ವರ, ಇನ್ನೋರ್ವ ಕ್ಯಾಬಿನೆಟ್ ಮಂತ್ರಿ ಇದ್ದಾರೆ. ಇವರೆಲ್ಲ ಯಾಕೆ ವಿರೋಧಿಸಲಿಲ್ಲ? ದಲಿತ ನಾಯಕರು ಬಾಯಲ್ಲಿ ಕಲ್ಲು ಇಟ್ಟುಕೊಂಡಿದ್ರಾ? ದಲಿತರಿಗೆ ಅನ್ಯಾಯ ಮಾಡಿ ನಾನು ಅಹಿಂದ ನಾಯಕ ಅಂತೀರಿ ನಿಮಗೆ ನಾಚಿಕೆ ಆಗೋದಿಲ್ವಾ ಸಿದ್ರಾಮಣ್ಣ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಾದರೂ ಇವರಿಗೆ ಬುದ್ಧಿ ಹೇಳಬೇಕಿತ್ತು. ಹೀಗೆಲ್ಲ ದಲಿತರ ಹಣ ದುರುಪಯೋಗ ಮಾಡಿಕೊಳ್ಳಬೇಡಿ ಎಂದು ಹೇಳಬಹುದಿತ್ತಲ್ಲವೇ.- ರಮೇಶ ಜಿಗಜಿಣಗಿ, ಸಂಸದ