ಸಾರಾಂಶ
- ಅಧಿವೇಶನದಲ್ಲಿ ಪಕ್ಷಾತೀತ ಚರ್ಚೆಗೆ ರಂಗಪ್ಪ ಆಗ್ರಹ
- - - ದಾವಣಗೆರೆ: ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನದ ದುರ್ಬಳಕೆ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಎಲ್ಲ ಮೀಸಲು ಕ್ಷೇತ್ರಗಳ ಶಾಸಕರು ಪಕ್ಷಾತೀತವಾಗಿ ಚರ್ಚಿಸಿ, ಕಾಯ್ದೆ ಸದುದ್ದೇಶ ಕಾರ್ಯರೂಪಕ್ಕೆ ತರಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ ಆಗ್ರಹಿಸಿದ್ದಾರೆ.ರಾಜ್ಯ ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ 2014-2015 ರಿಂದ 2022- 2023ರವರೆಗೆ ₹15,553 ಕೋಟಿ ಎಸ್‌ಸಿಎಸ್‌ಪಿ -ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿರುವುದು ದಲಿತರ ಮೇಲಿನ ಸರ್ಕಾರಗಳ ಕಾಳಜಿ ಎತ್ತಿತೋರಿಸುತ್ತದೆ. 2023-2024ರ ಪ್ರಸಕ್ತ ಸಾಲಿನಲ್ಲಿ ಇದೇ ನಿಧಿಯಿಂದ (ಪರಿಶಿಷ್ಟರ ನಿಖರ ಅಂಕಿ ಸಂಖ್ಯೆಗಳಿಲ್ಲದೆ) ಗ್ಯಾರಂಟಿ ಯೋಜನೆಗಳಿಗೆ ₹25,396 ಕೋಟಿ ಹಂಚಿಕೆ ಪರಿಶಿಷ್ಟ ಸಮುದಾಯಗಳಿಗೆ ಮಾಡಿರುವ ಬಹುದೊಡ್ಡ ವಂಚನೆ ಎಂದಿದ್ದಾರೆ.
ಎಸ್‌ಸಿಎಸ್‌ಪಿ- ಟಿಎಸ್‌ಪಿ-2013ರ ಕಾಯಿದೆ ಪ್ರಕಾರ ಪ್ರತಿ ವರ್ಷ ಸರ್ಕಾರ ಮಂಡಿಸುವ ಬಜೆಟ್‌ನ ಶೇ.24.10ರಷ್ಟು ಮೊತ್ತವನ್ನು ಕಾಯ್ದಿರಿಸಿ ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕೆ ಖರ್ಚು ಮಾಡಬೇಕು. ಈ ಕಾಯ್ದೆಯಡಿ 2023-2024 ರವರೆಗೆ ಒಟ್ಟು ₹2.56 ಲಕ್ಷ ಕೋಟಿ ಅನುದಾನ ನಿಗದಿಯಾಗಿದೆ. ಅದರಲ್ಲಿ ₹2.47 ಲಕ್ಷ ಕೋಟಿ ಬಿಡುಗಡೆಯಾಗಿ ₹2.41 ಕೋಟಿ ಬಳಕೆಯಾಗಿದೆ ಎಂಬ ವರದಿ ಇದೆ. ಈ ಕಾಯ್ದೆಯ 7ಡಿ ಅನ್ವಯ ಪರಿಭಾವಿತ ವೆಚ್ಚದ ಅವಕಾಶವನ್ನು ತಮಗೆ ಇಷ್ಟ ಬಂದಂತೆ ಬಳಸಿಕೊಂಡ ಸರ್ಕಾರಗಳು, ರಸ್ತೆ ದುರಸ್ತಿ, ನೀರಾವರಿ, ಕುಡಿಯುವ ನೀರು ಪೂರೈಕೆ, ವರ್ತುಲ ರಸ್ತೆ, ಮೇಲ್ಸೇತುವೆ ಮುಂತಾದ ಕಾಮಗಾರಿಗಳಿಗೆ ಇವುಗಳನ್ನು ಪರಿಶಿಷ್ಟ ಸಮುದಾಯಗಳೂ ಬಳಸುತ್ತವೆಂಬ ನೆಪವೊಡ್ಡಿ ದುರ್ಬಳಕೆ ಮಾಡಿಕೊಂಡಿವೆ ಎಂದು ಆರೋಪಿಸಲಾಗಿದೆ.ಅಲ್ಲದೇ ಸಾಮಾಜಿಕ ನ್ಯಾಯದ ಪರವಾಗಿ ಇದ್ದೇವೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಎಸ್‌ಸಿಎಸ್‌ಪಿ- ಟಿಎಸ್ ಪಿ ಕಾಯ್ದೆಯ 7ಡಿ ಯನ್ನು ರದ್ದುಗೊಳಿಸಿರುವುದು ಸ್ವಾಗತಾರ್ಹ. ಆದರೂ ಈ ಕಾಯ್ದೆಯ 7ಸಿ ನಿಯಮವನ್ನೂ ರದ್ದುಗೊಳಿಸಬೇಕಾದ ಅವಶ್ಯಕತೆ ಇದೆ. 13ರಂದು ಬೆಂಗಳೂರಿನಲ್ಲಿ ನಡೆದ ₹107 ಕೋಟಿ ವೆಚ್ಚದ ಡಾ. ಬಾಬು ಜಗಜೀವನರಾಂ ಸಂಶೋಧನಾ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ 7ಸಿ ನಿಯಮ ರದ್ದುಗೊಳಿಸಲು ಮುಖ್ಯಮಂತ್ರಿ ಅವರನ್ನು ಆಗ್ರಹಿಸಲಾಗಿದೆ ಎಂದಿದ್ದಾರೆ.
- - -(ಸಾಂದರ್ಭಿಕ ಚಿತ್ರ)