ಹಣ ದುರ್ಬಳಕೆ: ಪಶು ವೈದ್ಯಾಧಿಕಾರಿ ಪ್ರವೀಣ್‌ಕುಮಾರ್ ಅಮಾನತು...!

| Published : Jan 09 2024, 02:00 AM IST

ಸಾರಾಂಶ

ಡಾ.ಬಿ.ಬಿ. ಪ್ರವೀಣ್‌ಕುಮಾರ್ ಅವರು ಪಾಂಡವಪುರ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರಾಗಿದ್ದ ಅವಧಿಯಲ್ಲಿ ೨೦೧೮-೧೯ನೇ ಸಾಲಿನ ಆರ್‌ಕೆವಿವೈ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿರಿಸಿದ್ದ ೫೦೦ ಮಾಂಸದ ಕೋಳಿ ಘಟಕಗಳನ್ನು ಸ್ಥಾಪಿಸಲು ಫಲಾನುಭವಿಗಳನ್ನು ಆಯ್ಕೆ ಮಾಡದೆ, ಮಂಜೂರು ಮಾಡದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಹಣ ದುರುಪಯೋಗಪಡಿಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪರಿಶಿಷ್ಟ ಜಾತಿಗೆ ಮೀಸಲಿರಿಸಿದ್ದ ಯೋಜನಾ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮದ್ದೂರು ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಿ.ಬಿ.ಪ್ರವೀಣ್‌ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಆರೋಪಿ ಪ್ರವೀಣ್‌ಕುಮಾರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ೧೯೯೮ ಸಾರ್ವಜನಿಕ ಹಕ್ಕು ರಕ್ಷಣೆ ೧೯೭೬-೭೭, ಪಿಒಎ ಕಾಯಿದೆ-೧೯೮೯೯ ಮತ್ತು ಐಪಿಸಿ ಸೆಕ್ಷನ್ ೧೬೬ ಕೆಸಿಎಸ್‌ಆರ್ ನಿಯಮಗಳು ೧೯೬೬ ಮತ್ತು ಕೆಸಿಎಸ್‌ಆರ್ ಕಾಯಿದೆ ೧೯೭೮ನ್ನು ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿರುವ ಗಂಭೀರ ಆರೋಪದಡಿ ಸೂಕ್ತ ಕಾನೂನು ಕ್ರಮ ಕೈಗೊಂಡು ತಕ್ಷಣವೇ ಸೇವೆಯಿಂದ ವಜಾಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶರಣಬಸಪ್ಪ ಅವರು ಜಿಪಂ ಸಿಇಒಗೆ ಸೂಚಿಸಿದ್ದಾರೆ.

ಏನಾಗಿತ್ತು?

ಡಾ.ಬಿ.ಬಿ. ಪ್ರವೀಣ್‌ಕುಮಾರ್ ಅವರು ಪಾಂಡವಪುರ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರಾಗಿದ್ದ ಅವಧಿಯಲ್ಲಿ ೨೦೧೮-೧೯ನೇ ಸಾಲಿನ ಆರ್‌ಕೆವಿವೈ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿರಿಸಿದ್ದ ೫೦೦ ಮಾಂಸದ ಕೋಳಿ ಘಟಕಗಳನ್ನು ಸ್ಥಾಪಿಸಲು ಫಲಾನುಭವಿಗಳನ್ನು ಆಯ್ಕೆ ಮಾಡದೆ, ಮಂಜೂರು ಮಾಡದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಹಣ ದುರುಪಯೋಗಪಡಿಸಿಕೊಂಡಿದ್ದರು.

ಪರಿಶಿಷ್ಟ ಜಾತಿಗೆ ಮೀಸಲಿರಿಸಿದ್ದ ಯೋಜನಾ ಹಣ ಫಲಾನುಭವಿಗಳ ಖಾತೆಗೆ ಬಂದಿರುವುದಿಲ್ಲವೆಂದು ವಂಚಿತ ಫಲಾನುಭವಿಗಳು ಸಲ್ಲಿಸಿದ ದೂರಿನ ನೈಜತೆಯ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ಸಲ್ಲಿಸಸುವಂತೆ ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಅಧ್ಯಕ್ಷತೆಯಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡ ಸಲ್ಲಿಸಿರುವ ವರದಿಯಲ್ಲಿ ಡಾ.ಬಿ.ಬಿ. ಪ್ರವೀಣ್‌ಕುಮಾರ್ ಅವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳದ ಕ್ರಿಯಾ ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದಲ್ಲದೇ, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್‌ನಿಂದ ಸಾಲ ಮಂಜೂರು ಮಾಡುವ ಹಾಗೂ ಮಾಡಿರುವ ಬಗ್ಗೆ ಯಾವುದೇ ಮಾಹಿತಿಯನ್ನೂ ಪಡೆಯದೆ ಸರ್ಕಾರದಿಂದ ಫಲಾನುಭವಿಗಳಿಗೆ ಬಿಡುಗಡೆಯಾಗಿರುವ ಸಹಾಯ ಧನದ ಮೊತ್ತವನ್ನು ಏಕ ಪಕ್ಷೀಯವಾಗಿ ಧನಾದೇಶದ ಮೂಲಕ ಬ್ಯಾಂಕ್‌ಗೆ ಬಿಡುಗಡೆ ಮಾಡಿರುವುದು ಕಂಡುಬಂದಿದೆ.

ಸಹಾಯ ಧನದ ಮೊತ್ತವನ್ನು ಬ್ಯಾಂಕ್ ವ್ಯವಸ್ಥಾಪಕರು ಮತ್ತು ಡಾ.ಬಿ.ಬಿ. ಪ್ರವೀಣ್‌ಕುಮಾರ್ ಜೊತೆಗೆ ಪಶುಪಾಲನಾ ಇಲಾಖೆ ಮತ್ತು ಮೈಸೂರಿನ ಕುಕ್ಕುಟ ಮಹಾಮಂಡಳಿ ಅಧಿಕಾರಿಗಳು ಸೇರಿ ಬೇರೆ ಜಿಲ್ಲೆಯ ಬ್ಯಾಂಕ್ ಶಾಖೆಯಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಮೂಲಕ ಸಹಾ ಯಧನದ ಮೊತ್ತವನ್ನು ೪.೪.೨೦೧೯ ಮತ್ತು ೫.೪.೨೦೧೯ರ ಎರಡು ದಿವಸಗಳಲ್ಲಿ ಆರ್‌ಟಿಜಿಎಸ್ ಮೂಲಕ ಬೇರೆಯವರಿಗೆ ವರ್ಗಾವಣೆ ಮಾಡಿರುವುದು ಮತ್ತು ಸ್ವಂತಕ್ಕೆ ಡ್ರಾ ಮಾಡಿಸಿರುವುದನ್ನು ಗಮನಿಸಿದಾಗ ಸರ್ಕಾರದ ಹಣ ದುರುಪಯೋಗವಾಗಿರುವುದು ಕಂಡುಬಂದಿದೆ.

ಮಂಡ್ಯ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ೨೦.೩.೨೦೨೩ರಲ್ಲಿ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳ ಮನೆಗೆ ಖುದ್ದು ತೆರಳಿ ಪರಿಶೀಲನೆ ನಡೆಸಿದಾಗ ಕೋಳಿ ಘಟಕ ಸ್ಥಾಪನೆ ಮಾಡಲು ಸರ್ಕಾರದಿಂದ ಯಾವುದೇ ಹಣ ಬಂದಿಲ್ಲದಿರುವುದು, ಘಟಕಗಳನ್ನು ಸ್ಥಾಪನೆ ಮಾಡಿಲ್ಲವೆಂದು ಮೌಖಿಕವಾಗಿ ತಿಳಿದುಬಂದಿದೆ.

ಅಮಾನತಿನ ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಲ್ಲಿನ ನಿಯಮ ೯೮ರನ್ವಯ ಜೀವನಾಧಾರ ಭತ್ಯೆಯನ್ನು ಪಡೆಯಲು ಮಾತ್ರ ಅರ್ಹರಿರುತ್ತಾರೆ ಎಂದು ತಿಳಿಸಲಾಗಿದೆ.

----------

ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮೀಸಲಿಟ್ಟ ಯೋಜನಾ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಡಾ.ಬಿ.ಬಿ. ಪ್ರವೀಣ್‌ಕುಮಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಎಂ.ಸುಮಿತ್ರಾ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ರವಾನಿಸಿದ್ದಾರೆ.

ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಯುವ ಘಟಕದ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ನೀಡಿದ ದೂರಿನನ್ವಯ ೨೦೧೮-೧೯ನೇ ಸಾಲಿನಲ್ಲಿ ನೀಡಿರುವ ಅನುದಾನವನ್ನು ದುರುಪಯೋಗ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ೧೧.೧೦. ೨೦೨೩ರಂದು ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ನೋಡಲ್ ಏಜೆನ್ಸಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಅದರಂತೆ ಮದ್ದೂರು ಪಶು ವೈದ್ಯಾಧಿಕಾರಿ ಡಾ.ಬಿ.ಬಿ. ಪ್ರವೀಣ್‌ಕುಮಾರ್ ವಿರುದ್ಧ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಲಂ ೨೪ರಂತೆ ಕ್ರಿಮಿನಲ್ ಮೊಕದ್ದಮೆ (ಎಫ್‌ಐಆರ್) ಮತ್ತು ಐಪಿಸಿ ಸೆಕ್ಷನ್ಗ್‌ಳನ್ನು ಸೇರಿಸಿ ೨೪ ಗಂಟೆಯೊಳಗೆ ಪ್ರಕರಣ ದಾಖಲಿಸಿ ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.