ಸಾರಾಂಶ
ಕನಕಪುರ: ಮೃತಪಟ್ಟವರು, ಬೇರೆ ಕಡೆ ವಾಸವಿರುವವರ ಹೆಸರಿನಲ್ಲಿ ಪಾವತಿಯಾಗಿರುವ ಕೂಲಿ ಹಣ, ಎರಡು ಬಾರಿ ಒಂದೇ ಕಾಮಗಾರಿಗೆ ಬಿಡುಗಡೆಯಾಗಿರುವ ಹಣ, ಫಲಾನುಭವಿಗಳು ಕೆಲಸ ಮಾಡದೆ ಇದ್ದರೂ ಬಿಡುಗಡೆಯಾಗಿರುವ ಕೂಲಿಹಣವನ್ನು ಸರ್ಕಾರಕ್ಕೆ ಮರುಪಾವತಿ ಮಾಡುವಂತೆ ನರೇಗಾ ಜಿಲ್ಲಾ ಸಂಯೋಜಕ ಶ್ರೀನಿವಾಸ್ ಸೂಚಿಸಿದರು. ತಾಲೂಕಿನ ಕೋಡಿಹಳ್ಳಿ ಹೋಬಳಿಯ ಅರಕೆರೆ ಗ್ರಾಪಂ 2023-24ನೇ ಸಾಲಿನ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಬಚ್ಚಲ ಗುಂಡಿ ಕಾಮಗಾರಿಗೆ ಎರಡು ಬಾರಿ ಹಣ ಪಾವತಿ ಮಾಡಲಾಗಿದೆ. ಗ್ರಾಮದಿಂದ ಹೊರಗಿರುವವರು ಮತ್ತು ಮೃತಪಟ್ಟಿರುವ ಹೆಸರಿನಲ್ಲಿ ಕೂಲಿ ಹಣ ಪಾವತಿಯಾಗಿದೆ. 2019ರಲ್ಲಿ ಮೃತಪಟ್ಟಿರುವ ವ್ಯಕ್ತಿಯ ಹೆಸರಿಗೆ 2022ರಲ್ಲಿ ಕೆಲಸ ಮಾಡಿದ್ದಾರೆಂದು ಕೂಲಿ ಹಣ ಬಿಡುಗಡೆ ಮಾಡಲಾಗಿದೆ. 2021ರಲ್ಲಿ ಮೃತಪಟ್ಟಿರುವ ವ್ಯಕ್ತಿ ಹೆಸರಿಗೆ ಕೂಲಿ ಹಣ ಬಿಡುಗಡೆ ಮಾಡಲಾಗಿದೆ. 190 ಕಾಮಗಾರಿಗಳಿಗೆ ನಾಮಫಲಕ ಹಾಕದಿದ್ದರೂ 5.7೦ ಲಕ್ಷ ಹಣ ಬಿಡುಗಡೆ ಮಾಡಿದ್ದಾರೆ. 2.68 ಲಕ್ಷ ವೆಚ್ಚದ ಬಚ್ಚಲ ಗುಂಡಿ, ಮೇಕೆ ಶೆಡ್ಡು, ಕುರಿ ಶೆಡ್ಡು, ಕಾಮಗಾರಿಗಳು ಸ್ಥಳದಲ್ಲಿ ಕಂಡು ಬಂದಿಲ್ಲ, ಸಾಧ್ಯತೆ ಇರುವ ಲೋಪಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಹಣ ಮರುಪಾವತಿ ಮಾಡಬೇಕು ಎಂದು ಸೂಚನೆ ನೀಡಿದರು.
ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 16 ಜನರಿಗೆ ಕೆಲಸ ಕೊಟ್ಟಿಲ್ಲ, ಅವರಿಗೆ ನಿರುದ್ಯೋಗ ಭತ್ಯೆ ಕೊಡಬೇಕು, 94 ಕಾಮಗಾರಿಗಳಿಗೆ 1,2,3 ಹಂತದ ಭಾವಚಿತ್ರ ಇಲ್ಲ. 16 ಕಾಮಗಾರಿಗಳಿಗೆ ಆರ್‌ಟಿಸಿ ಇಲ್ಲ, ಒಂದು ದನದ ಕೊಟ್ಟಿಗೆಯನ್ನು ಹೊಡೆದು ಹಾಕಲಾಗಿದೆ. 99 ಬಚ್ಚಲ ಗುಂಡಿ ಕಾಮಗಾರಿಗೆ ಪೈಪ್ ಸಂಪರ್ಕ ಇಲ್ಲ, ನಿರ್ದಿಷ್ಟ ಸರ್ವೇ ನಂಬರ್‌ನಲ್ಲಿ ಕೆಲಸ ಮಾಡದೆ ಇರುವುದು ಕಂಡು ಬಂದಿದೆ. 12 ಕಾಮಗಾರಿಗಳನ್ನು ಉಪಯೋಗಿಸುತ್ತಿಲ್ಲ. ಮೇಕೆ ಶೆಡ್ಡು, ದನದ ಕೊಟ್ಟಿಗೆ ಕಾಮಗಾರಿ ಜಾಗದಲ್ಲಿ ಕಾಮಗಾರಿಗಳು ಕಂಡು ಬಂದಿಲ್ಲ ಎಂದು ಕಾಮಗಾರಿ ಗಳಲ್ಲಿರುವ ಲೋಪಗಳನ್ನು ಸಭೆಗೆ ತಿಳಿಸಿದರು.ಗ್ರಾಪಂನಲ್ಲಿ ಒಟ್ಟು 862 ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಗ್ರಾಪಂನಿಂದ 719 ಕಾಮಗಾರಿಗಳನ್ನು ಕೈಗೊಳ್ಳ ಲಾಗಿದೆ. 1.66 ಕೋಟಿ ಖರ್ಚು ಮಾಡಲಾಗಿದೆ. ಅರಣ್ಯ ಇಲಾಖೆಯಿಂದ 4೦ ಕಾಮಗಾರಿಗಳಿಗೆ 36,37 ಲಕ್ಷ, ತೋಟಗಾರಿಕೆ ಇಲಾಖೆಯಿಂದ 55 ಕಾಮಗಾರಿಗಳಿಗೆ 10.57 ಲಕ್ಷ, ರೇಷ್ಮೆ ಇಲಾಖೆಯಿಂದ 48 ಕಾಮಗಾರಿಗಳಿಗೆ 10 .96 ಲಕ್ಷ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನೋಡಲ್ ಅಧಿಕಾರಿಯಾಗಿ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಆಶಾ, ಪಿಡಿಒ ವೆಂಕಟರಾಜು, ಅಧ್ಯಕ್ಷ ರಾಮಚಂದ್ರ, ಕರವಸೂಲಿಗಾರ ಮೆಹಬೂಬ್ ಪಾಷಾ, ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿ ರಘು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ01 :
ಕನಕಪುರ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿಯಲ್ಲಿ ನಡೆದ 2023-24ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯನ್ನು ಜಿಲ್ಲಾ ಸಂಯೋಜಕ ಶ್ರೀನಿವಾಸ ಮಂಡಿಸಿದರು.