ಅಭಿವೃದ್ಧಿ ಹೆಸರಲ್ಲಿ ಎಸ್‌ಸಿ, ಎಸ್ಟಿ ಅನುದಾನ ದುರುಪಯೋಗ

| Published : Jan 12 2024, 01:45 AM IST

ಸಾರಾಂಶ

ಪಾಲಿಕೆ ಎದುರು ಪ್ರತಿಭಟನೆ ನಡೆಸಿದ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸದಸ್ಯರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲು ನಿಧಿಯನ್ನು ಅಭಿವೃದ್ಧಿ ಹೆಸರಿನಲ್ಲಿ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿ ಬುಧವಾರ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಪದಾಧಿಕಾರಿಗಳು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ವಾರ್ಡ್‌ ನಂ.28 ನಿವಾಸಿಗಳಿಗೆ ನಗರ ಸೇವಕ ಚುನಾವಣೆ ಮೊದಲು ಕ್ಷೇತ್ರದ ಜನರಿಗೆ ನೀಡಿರುವ ಆಶ್ವಾಸನೆಯಂತೆ ಕಾರ್ಯ ಕೈಗೊಂಡಿಲ್ಲ. ಪೌರಕಾರ್ಮಿಕರ ವಸತಿ ಗೃಹದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮಾಡಿಲ್ಲ. ಜನರ ಅಭಿವೃದ್ಧಿಗಾಗಿ ಇರುವ ಮೀಸಲು ನಿಧಿಯನ್ನು ದೇವಸ್ಥಾನದ ಕಾರ್ಯಕ್ಕೆ ಬಳಸಿಕೊಂಡಿರುವುದಾಗಿ ಅವರು ಆರೋಪಿಸಿದರು.

ಚುನಾವಣೆ ನಂತರ ಪೌರಕಾರ್ಮಿಕರ ವಸತಿ ಗೃಹಕ್ಕೆ ಭೇಟಿ ನೀಡುವುದಾಗಲಿ ಹಾಗೂ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿಲ್ಲ. ಕೆಲಸ ಕೊಡಿಸುವುದಾಗಿ ಆಶ್ವಾಸನೆ ನೀಡಿದ ಜನರಿಗೆ ಉದ್ಯೋಗ ಕೂಡ ಒದಗಿಸಿಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಜಯಂತಿ, ಮಹಾಪರಿನಿರ್ವಾಣ ದಿವಸ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಕಾರ್ಯಕ್ರಮದಲ್ಲಿ ಭಾಗವಹಿಸದೇ ಅಂಬೇಡ್ಕರ ಅವರಿಗೆ ಅವಮಾನಿಸಿದ್ದಾರೆ ಎಂದು ದೂರಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲು ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ನಗರ ಸೇವಕನ ಸದಸ್ಯತ್ವ ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಗೌರವಾಧ್ಯಕ್ಷ ಮುನಿಸ್ವಾಮಿ ಭಂಡಾರಿ, ಜಿಲ್ಲಾಧ್ಯಕ್ಷ ದೀಪಕ ವಾಘೇಲಾ, ಪ್ರಧಾನ ಕಾರ್ಯದರ್ಶಿ ವಿಜಯ ನೀರಗಟ್ಟಿ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.