ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದದ ವತಿಯಿಂದ ಮಂಗಳವಾರ ತಹಶೀಲ್ದಾರ್ ರಾಜೇಶ್ ಕುಮಾರ್ ರವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಕ್ಕೊತ್ತಾಯಗಳ ಮನವಿ ಸಲ್ಲಿಸಲಾಯಿತು.ಎಸ್ ಸಿಎಸ್ಪಿ ಮತ್ತು ಟಿಎಸ್ ಪಿ ಕಾಯ್ದೆ ಕಲಂ 7 ನ್ನು ರದ್ದುಗೊಳಿಸಿದ್ದು, ಸದರಿ ಕಲಂನಿಂದಾಗಿ ಕಳೆದ ದಶಕದಲ್ಲಿ ಸುಮಾರು 70 ಕೋಟಿಯಷ್ಟು ಅನುದಾನ ದುರ್ಬಳಕೆ ಯಾಗಿದೆ. ಸದರಿ ಅನುದಾನವನ್ನು ರಾಜ್ಯ ಸರ್ಕಾರ ಪರಿಶಿಷ್ಟರಿಗೆ ಮರು ಮಂಜೂರಾತಿ ಮಾಡಬೇಕು. ಪರಿಶಿಷ್ಟರ ಅನುದಾನವನ್ನು ಅನ್ಯ ಧರ್ಮದವರು ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು. ಪಿಟಿಸಿಎಲ್ ಕಾಯ್ದೆಗೆ ಕೆಲ ವ್ಯತಿರಿಕ್ತ ತೀರ್ಪುಗಳು ಬಂದಿದ್ದು, ಇದರಿಂದಾಗಿ ಸಾವಿರಾರು ಪರಿಶಿಷ್ಟರು ಭೂಮಿ ಕಳೆದುಕೊಂಡಿದ್ದಾರೆ. ಸದರಿ ಕಲಂನಲ್ಲಿನ ಗ್ರಾಂಟೆಡ್ ಲ್ಯಾಂಡ್ ಪದ ಕೈಬಿಟ್ಟು ಸರ್ಟನ್ ಲ್ಯಾಂಡ್ ಪದ ಬಳಕೆಯಾಗಬೇಕು. ರಾಜ್ಯ ಸರ್ಕಾರ ಹೊರ ಮೂಲ ಗುತ್ತಿಗೆ ಉದ್ಯೋಗ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಸಲ್ಲಿಸಿ ಆದೇಶ ಹೊರಡಿಸಬೇಕು. ಬುದ್ಧ ಪೂರ್ಣಿಮೆಗೆ ಸರ್ಕಾರಿ ರಜೆ ಘೋಷಿಸಬೇಕು. ರಾಜ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭೇಟಿ ನೀಡಿ ಭಾಷಣ ಮಾಡಿದ ಸುಮಾರು ಹತ್ತು ಜಿಲ್ಲೆಗಳಲ್ಲಿ ಸ್ಮಾರಕ ನಿರ್ಮಿಸಲು ಹೆಚ್ಚಿನ ಅನುದಾನ ಮಂಜೂರು ಮಾಡಬೇಕು. ಕೇಂದ್ರ ಸರ್ಕಾರವು ಕೋಮುವಾದ, ಜಾತಿವಾದ ರದ್ದುಪಡಿಸಲು ಕಾನೂನು ರೂಪಿಸಬೇಕು. ಶೋಷಿತ ಜಾತಿಗಳ ಮೀಸಲಾತಿ ಪ್ರಮಾಣವು ಶೇ.56 ರಷ್ಟಿದ್ದು ಇದನ್ನು ಕೇಂದ್ರವು ಸಂವಿಧಾನದ 9 ನೇ ಶೆಡ್ಯೂಲ್ ಗೆ ಸೇರಿಸಬೇಕು ಎಂಬ ವಿವಿಧ ಹಕ್ಕೊತ್ತಾಯಗಳ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಹೆಗ್ಗೆರೆ ಮಂಜುನಾಥ್, ತಾಲೂಕು ಪ್ರಧಾನ ಸಂಚಾಲಕ ಕಣುಮಪ್ಪ ಭರಮಗಿರಿ, ಕಲಾ ಮಂಡಳಿ ರಾಜ್ಯ ಸಂಘಟನಾ ಸಂಚಾಲಕ ಹೆಚ್ ಎಸ್ ಮಾರುತೇಶ್, ಬಿದರಕೆರೆ ರಾಘು, ಕೇಶವಮೂರ್ತಿ, ಆದಿವಾಲ ಮಂಜುನಾಥ್, ನರಸಿಂಹಮೂರ್ತಿ,ಸಿದ್ದಣ್ಣ,ಯೋಗೇಶ್, ಕೀರ್ತಿಕುಮಾರ್ ಮುಂತಾದವರು ಹಾಜರಿದ್ದರು.