ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಪಟ್ಟಣದ ಬಳೇಪೇಟೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಷೇರು ರೂಪದಲ್ಲಿ ಕೊಟ್ಟಿರುವ ಹಣವನ್ನು ಬ್ಯಾಂಕಿನಲ್ಲಿ ಜಮಾವಣೆ ಮಾಡದೆ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಆರೋಪಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ೨೦೨೪-೨೫ ನೇ ಸಾಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರೈತರಿಂದ ₹೨೮ ಲಕ್ಷ ಷೇರು ಹಣ ಇಲ್ಲಿದೆ. ಈ ಹಣವನ್ನು ಬ್ಯಾಂಕಿನಲ್ಲಿ ಜಮಾವಣೆ ಮಾಡಬೇಕು. ಇದರಿಂದ ಬಡ್ಡಿ ಬರುತ್ತದೆ. ಆದರೆ ಈ ಸಂಘದಲ್ಲಿ ಇದು ಹೀಗಾಗಿಲ್ಲ. ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ.೩ ಸಾವಿರ ಷೇರುದಾರರು ಇದ್ದಾರೆ. ಇವರಿಗೆ ಸಂಘದಿಂದ ಇದುವರೆವಿಗೂ ಷೇರು ಹಣಕ್ಕೆ ಬಡ್ಡಿಯನ್ನೇ ನೀಡಿಲ್ಲ. ಇಲ್ಲಿರುವ ಆಡಳಿತ ಮಂಡಳಿಯವರೇ ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ರೈತರಿಗೆ ನೀಡಿರುವ ಸಾಲವನ್ನು ಮರುಪಾವತಿ ಮಾಡಬೇಕು. ಆದರೆ ಇಲ್ಲಿ ಬೇರೆಯವರು ಹಣವನ್ನು ಕಟ್ಟಿ ಇದಕ್ಕೆ ರೈತರಿಂದ ಶೇ. ೩ ರಿಂದ ಶೇ. ೪ ರಷ್ಟು ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ ಈ ರೈತರೇ ನಿರಂತರವಾಗಿ ಸಾಲವನ್ನು ಪಡೆದುಕೊಳ್ಳುತ್ತಿದ್ದಾರೆ. ಹೊಸಬರಿಗೆ ಸಾಲ ಸಿಗುತ್ತಿಲ್ಲ. ಸಂಘದಿಂದ ₹೫ ಲಕ್ಷದವರೆಗೂ ಸಾಲವನ್ನು ನೀಡಲು ಅವಕಾಶವಿದ್ದರೂ ಇದುವರೆವಿಗೂ ೧ ಲಕ್ಷ ರು. ಮೀರಿ ಸಾಲವನ್ನು ನೀಡುತ್ತಿಲ್ಲ. ಇಲ್ಲಿ ಸರ್ಕಾರದ ನಿಮಯಗಳನ್ನು ಗಾಳಿಗೆ ತೂರಲಾಗಿದೆ. ಅಲ್ಲದೆ ಈ ಸಂಘದಲ್ಲಿ ೯೨ ಕ್ವಿಂಟಾಲ್ ೨೫ ಕಿಲೋ, ೮೦೦ ಗ್ರಾಂನಷ್ಟು ಪಡಿತರ ಅಕ್ಕಿ ನಾಪತ್ತೆಯಾಗಿ ವರ್ಷಗಳೇ ಕಳೆದಿವೆ. ಆದರೆ ಈ ಹಗರಣ ಸಂಬಂಧ ಇಲ್ಲಿನ ನೌಕರರೊಬ್ಬರನ್ನು ಅಮಾನತು ಮಾಡಲಾಗಿದೆ ಹೊರತು ಯಾವುದೇ ಕ್ರಮ ವಹಿಸಿಲ್ಲ. ಅವರಿಗೆ ಅಮಾನತು ಮಾಡುವ ಬದಲು ನೋಟೀಸ್ ನೀಡಿ ಅವರಿಂದಲೇ ಹಣವನ್ನು ವಸೂಲಿ ಮಾಡಲು ಅವಕಾಶವಿದ್ದರೂ ಸಹ ಇದರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಲಾಗಿದೆ ಎಂದು ಆರೋಪಿಸಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಪುಟ್ಟರಾಜು ೨೦೨೪-೨೫ ನೇ ಸಾಲಿನ ವ್ಯಯದ ಪಟ್ಟಿಯನ್ನು ಓದಿದರು. ೨೦೨೫-೨೬ ನೇ ಸಾಲಿನ ಆಯ-ವ್ಯಯದ ಅಂದಾಜು ಪಟ್ಟಿಯನ್ನು ಓದಿದರು. ಇದರಲ್ಲಿ ೫೬ ಲಕ್ಷ ರು.ಗಳ ಖರ್ಚು, ವೆಚ್ಚ ಸೇರಿದಂತೆ ೪ ಲಕ್ಷ ರು. ಲಾಭದ ಆಯವ್ಯಯ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.ಅಧ್ಯಕ್ಷ ವೈ.ಬಿ. ಮಹೇಶ್ ಉಪಾಧ್ಯಕ್ಷ ಎಂ. ಅನಿಲ, ನಿರ್ದೇಶಕರಾದ ಬಿ. ಮಲ್ಲಿಕಾರ್ಜುನಸ್ವಾಮಿ, ಎಂ. ರಾಜಶೇಖರ್, ವೈ.ಎಂ. ಜಯರಾಮು, ಸಿದ್ದನಾಯಕ, ಸಿದ್ದಪ್ಪಸ್ವಾಮಿ, ಕೆ. ದೊರೆಸ್ವಾಮಿ, ವೈ.ಎನ್. ಮಂಜುನಾಥ್, ಎಸ್. ರಾಜಮ್ಮ, ಚಿಕ್ಕಮ್ಮಣಿ, ಮಾದೇಶ್ ಜಿಲ್ಲಾ ಬ್ಯಾಂಕ್ ಮೇಲ್ವಿಚಾರಕ ಯಾಮನ್ನ ಲೆಕ್ಕಿಗ ಡಿ.ಪಿ. ರವಿಕುಮಾರ್, ಎಸ್. ರಾಕೇರ್ಶ, ಕೆ. ಶಿವಕುಮಾರ್ ಸೇರಿದಂತೆ ಅನೇಕರು ಇದ್ದರು.