ಈ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಅವರ ಮನೆ ಸೇರಿದಂತೆ ೭ ಕಡೆ ದಾಳಿ ನಡೆಸಿ ಭ್ರಷ್ಟಾಚಾರ ಬಯಲಿಗೆಳೆದಿದ್ದಾರೆ.
ಶಿರಹಟ್ಟಿ: ಕಳೆದ ೨೦೨೩- ೨೪ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದ ಅಡಿ ಶಿರಹಟ್ಟಿ ತಾಪಂಗೆ ಮಂಜೂರಾದ ಒಟ್ಟು ₹೨.೧೬ ಕೋಟಿಗೂ ಹೆಚ್ಚು ಮೊತ್ತದಲ್ಲಿ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಕಳಪೆ ಸಾಮಗ್ರಿ ಪೂರೈಕೆ ಹಾಗೂ ಕಳಪೆ ಕಾಮಗಾರಿಯನ್ನು ಕೈಗೊಂಡು ₹೧.೯೭ ಕೋಟಿ ದುರ್ಬಳಕೆ ಮಾಡಿಕೊಂಡಿದ್ದು, ಇದು ಲೋಕಾಯುಕ್ತ ಅಧಿಕಾರಿಗಳ ತನಿಖೆಯಿಂದ ಪತ್ತೆಯಾಗಿದೆ.ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕ ವಿಜಯ ಬಿರಾದಾರ, ಪೊಲೀಸ್ ನಿರೀಕ್ಷಕ ಎಸ್.ಎಸ್. ತೇಲಿ ಹಾಗೂ ಪರಮೇಶ್ವರ ಜಿ. ಕವಟಗಿ ತಂಡದವರು ಪಟ್ಟಣದ ಪಶು ಆಸ್ಪತ್ರೆ ಹಾಗೂ ಈ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಅವರ ಮನೆ ಸೇರಿದಂತೆ ೭ ಕಡೆ ದಾಳಿ ನಡೆಸಿ ಭ್ರಷ್ಟಾಚಾರ ಬಯಲಿಗೆಳೆದಿದ್ದಾರೆ.ಹಾಲಿ ಹಿರಿಯ ಪಶು ವೈದ್ಯಾಧಿಕಾರಿ ಈ ಹಿಂದೆ ನಿಯೋಜನೆ ಮೇರೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಾ. ಎನ್.ಎಚ್. ಓಲೇಕಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಿರಿಯ ಎಂಜಿನಿಯರ್ ಆರೀಫ್ ಹಿರೇಹಾಳ, ಗಂಗಪ್ಪ ಬಸವಣ್ಣೆಪ್ಪ ತಡಹಾಳ, ಸಂಜಯ್ ಎಂಟರ್‌ಪ್ರೈಸಸ್ ಮತ್ತು ವಿ.ವಿ. ಸೇಲ್ಸ್ ಸರ್ವಿಸಸ್, ನಂದಿ ಇನ್ಪಾಸ್ಟ್ರಕ್ಚರ್ ವಿಜಯನಗರ ಈ ಏಜೆನ್ಸಿ ಹೆಸರಿನಲ್ಲಿರುವ ಅನಧಿಕೃತ, ಖೊಟ್ಟಿ ಥರ್ಡ್ ಪಾರ್ಟಿ ಪರಿಶೀಲನಾ ವರದಿ ನೀಡಿದ ಖಾಸಗಿ ವ್ಯಕ್ತಿ ಪ್ರದೀಪಕುಮಾರ ಬಸವರಾಜಯ್ಯ ಹಿರೇಮಠ ಹಾಗೂ ಇತರರ ಮೇಲೆ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಾಳಿ ವೇಳೆ ಲೋಕಾಯುಕ್ತ ಪೊಲೀಸ್ ಇಲಾಖೆಯ ಸಿಎಚ್‌ಸಿಗಳಾದ ಎಂ.ಎಂ. ಅಯ್ಯನಗೌಡರ, ವಿ.ಎಸ್. ದೀಪಾಲಿ, ಯು.ಎನ್. ಸಂಗನಾಳ, ಎನ್.ಪಿ. ಅಂಬಿಗೇರ, ಎಂ.ಎಸ್. ಗಾರ್ಗಿ, ಟಿ.ಎನ್. ಜವಳಿ ಮತ್ತು ಸಿಪಿಸಿಗಳಾದ ಎಚ್.ಐ. ದೇಪುರವಾಲಾ, ಎಂ.ಬಿ. ಬಾರಡ್ಡಿ, ಪಿ.ಎಲ್. ಪಿರಮಾಳ, ಎಪಿಸಿಗಳಾದ ಎಸ್.ವಿ. ನೈನಾಪೂರ, ಐ.ಎಸ್. ಸೈಪಣ್ಣವರ ಹಾಗೂ ಎಂ.ಆರ್. ಹಿರೇಮಠ ಸೇರಿ ಧಾರವಾಡ, ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಬೆಳಗಾವಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ ಕೆ. ಯಡಹಳ್ಳಿ ಅವರು ಪಟ್ಟಣದ ಹಿರಿಯ ಪಶು ವೈದ್ಯಾಧಿಕಾರಿ ಡಾ. ನಿಂಗಪ್ಪ ಓಲೇಕಾರ ಅವರ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದರು. ಮನೆಯಲ್ಲಿನ ದಾಖಲೆ ಹಾಗೂ ಕಾರಿನ ತಪಾಸಣೆ ನಡೆಸಿದರು.