ಟಿಎಸ್‌ಎಸ್‌ ಹಣ ದುರ್ಬಳಕೆ: ನಾಲ್ವರ ವಿರುದ್ಧ ದೂರು

| Published : May 17 2024, 12:43 AM IST

ಸಾರಾಂಶ

ರವೀಶ ಅಚ್ಯುತ ಹೆಗಡೆ, ರಾಮಕೃಷ್ಣ ಶ್ರೀಪಾದ ಹೆಗಡೆ, ಅನಿಲಕುಮಾರ ಸಿದ್ದಪ್ಪ ಮುಷ್ಟಗಿ, ವಿಶಾಲಾ ಅನಿಲಕುಮಾರ ಮುಷ್ಟಗಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿರಸಿ: ವೈಯಕ್ತಿಕ ಲಾಭಕ್ಕೊಸ್ಕರ ಟಿಎಸ್ಎಸ್‌ನ ಹಣ ದುರುಪಯೋಗ ಮಾಡಿಕೊಂಡ ನಾಲ್ವರ ವಿರುದ್ಧ ನಗರದ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರವೀಶ ಅಚ್ಯುತ ಹೆಗಡೆ, ರಾಮಕೃಷ್ಣ ಶ್ರೀಪಾದ ಹೆಗಡೆ, ಅನಿಲಕುಮಾರ ಸಿದ್ದಪ್ಪ ಮುಷ್ಟಗಿ, ವಿಶಾಲಾ ಅನಿಲಕುಮಾರ ಮುಷ್ಟಗಿ ವಿರುದ್ಧ ಪ್ರಕರಣ ದಾಖಲಾಗಿದೆ.

ಟಿಎಸ್ಎಸ್ ಪ್ರಭಾರಿ ವ್ಯವಸ್ಥಾಪಕ ವಿಜಯಾನಂದ ಸುಬ್ರಹ್ಮಣ್ಯ ಭಟ್ಟ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಟಿಎಸ್ಎಸ್ ಸಂಘದ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ರವೀಶ ಅಚ್ಯುತ ಹೆಗಡೆ ಮತ್ತು ಹಿಂದಿನ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಸಂಘದ ಆಗಿನ ಸಿಬ್ಬಂದಿ ಅನಿಲಕುಮಾರ ಸಿದ್ದಪ್ಪ ಮುಷ್ಟಗಿಯೊಂದಿಗೆ ಶಾಮೀಲಾಗಿ ಸ್ವಂತಕ್ಕಾಗಿ ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಅನಿಲಕುಮಾರ ಸಿದ್ದಪ್ಪ ಮುಷ್ಟಗಿ ಪತ್ನಿ ವಿಶಾಲಾ ಅನಿಲಕುಮಾರ ಮುಷ್ಟಗಿ ಅವರೊಂದಿಗೆ ಸಂಘದ ವಿವಿಧ ಘಟಕಗಳಲ್ಲಿ ಕಾರ್ಯ ನಿರ್ವಹಿಸಲು ಹತ್ತಿರದ ಹಳ್ಳಿಗಳಿಂದ ಬರುವ ಕಾರ್ಮಿಕರನ್ನು ಕರೆತರಲು ಮತ್ತು ಕಳುಹಿಸಲು ವಾಹನಗಳ ವ್ಯವಸ್ಥೆ ಕುರಿತು ತಮಗೆ ಲಾಭವಾಗುವಂತೆ ಮತ್ತು ಸಂಘಕ್ಕೆ ಹಾನಿಯಾಗುವಂತೆ ಕರಾರು ಮಾಡಿಕೊಂಡಿದ್ದರು. ಅಲ್ಲದೇ ಅವರಿಗೆ ಬಡ್ಡಿ ರಹಿತವಾಗಿ ವಾಹನ ಖರೀದಿಸಲು ಸಂಘದಿಂದ ಧನಸಹಾಯ ಮಾಡಿ ಮತ್ತು ಅನಂತರ ಪೂರ್ವಾನ್ವಯವಾಗುವಂತೆ ವಿಶಾಲಾ ಅನಿಲಕುಮಾರ ಮುಷ್ಟಗಿ ಅವರಿಗೆ ಹೆಚ್ಚಿನ ಬಾಡಿಗೆ ಪಾವತಿ ಮಾಡುವುದರ ಮೂಲಕ 2011ರ ಅ. 15ರಿಂದ 2021ರ ಮಾ. 31ರ ವರೆಗಿನ ಅವಧಿಯಲ್ಲಿ ಟಿಎಸ್ಎಸ್ ಸಂಘಕ್ಕೆ ಒಟ್ಟು ₹2,83,48,803 ಹಣವನ್ನು ವಂಚಿಸಿದ್ದಾರೆ ಎಂದು ದೂರಿದ್ದಾರೆ. ಪಿಎಸ್ಐ ರತ್ನಾ ಕುರಿ ತನಿಖೆ ಕೈಗೊಂಡಿದ್ದಾರೆ.ಗೋಕರ್ಣ ಮಹಾಬಲೇಶ್ವರ ಮಂದಿರದ

ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಿಂದ ಸಭೆ

ಕಾರವಾರ: ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ಗುರುವಾರ ಮಂದಿರಕ್ಕೆ ಆಗಮಿಸಿ ಸಮಿತಿ ಸಭೆ ನಡೆಸಿದರು.ಹಲವು ದಿನಗಳಿಂದ ಪೂಜಾ ಕೈಂಕರ್ಯ ನಡೆಸುವ ಅರ್ಚಕರ ಹಕ್ಕಿನ ವಿವಾದ, ಮಂದಿರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದ್ದು, ಆದರೆ ಯಾವುದೇ ನಿರ್ಧಾರ ಪ್ರಕಟಿಸಲು ಕಾಲಾವಕಾಶ ಪಡೆಯಲಾಗಿದೆ ಎನ್ನಲಾಗಿದೆ.

ಸಭೆಯಲ್ಲಿ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಸಮಿತಿ ಕಾರ್ಯದರ್ಶಿಯಾದ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಸದಸ್ಯರಾದ ವೇ. ದತ್ತಾತ್ರೇಯ ಹಿರೇಗಂಗೇ, ವೇ. ಪರಮೇಶ್ವರ ಮಾರ್ಕಾಂಡೆ, ವೇ. ಮಹಾಬಲ ಉಪಾಧ್ಯ, ಮುರಳಿಧರ ಪ್ರಭು ಉಪಸ್ಥಿತರಿದ್ದರು.