ಧಾರವಾಡ:

ರಸ್ತೆ ಬದಿಯಲ್ಲಿ ಕಸ ವಿಲೇವಾರಿ ಮಾಡಬಾರದು, ಒಂದು ವೇಳೆ ಕಸ ವಿಲೇವಾರಿ ಮಾಡಿದರೆ ದಂಡ ವಿಧಿಸಲಾಗುವುದು ಎಂಬ ನಿಯಮ ಇದ್ದರೂ ಈ ರಾಜ್ಯ ಹೆದ್ದಾರಿಯಲ್ಲಿ ನಿರಂತರ ಕಸ ವಿಲೇವಾರಿ ಮಾಡುತ್ತಿರುವುದು ವಾಹನ ಸವಾರರಿಗೆ ತಲೆ ನೋವಾಗಿ ಪರಿಣಮಿಸಿದೆ.

ಧಾರವಾಡದಿಂದ ಕಮಲಾಪುರ ಮಾರ್ಗವಾಗಿ ಯಾದವಾಡ ರಸ್ತೆಯಲ್ಲಿಯೇ ಎರಡು ದಿನಗಳ ಅಂತರದಲ್ಲಿ ಸುತ್ತಲಿನ ಪ್ರದೇಶದ ಜನರು ತಮ್ಮ ಕಟ್ಟಡ ಹಾಗೂ ಮನೆ ತ್ಯಾಜ್ಯ ವಿಲೇವಾರಿ ಮಾಡಿದ್ದು ಇದೀಗ ಈ ರಸ್ತೆಯಲ್ಲಿ ಸಂಚಾರ ಮಾಡುವ ಜನರಿಗೆ ಅತೀವ ತೊಂದರೆ ಆಗಿದೆ. ಅದರಲ್ಲೂ ಶುಕ್ರವಾರ ರಾತ್ರಿ ಆ ಕಸಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಅದರಿಂದ ಎದ್ದಿರುವ ಹೊಗೆಯಿಂದ ವಾಹನ ಚಾಲನೆ ಅಸಾಧ್ಯ ಎನ್ನುವಂತಾಗಿದೆ.

ಕಮಲಾಪುರ ದಾಟಿದ ನಂತರ ಹಾದಿ ಬಸವಣ್ಣ ಗುಡಿ ದಾಟುತ್ತಿದ್ದಂತೆ ಬಲ ಭಾಗದಲ್ಲಿ ಮಳೆ ನೀರು ಹರಿದು ಹೋಗುವ ದೊಡ್ಡ ಕಂದಕಗಳು ಇವೆ. ಕೆಲ ದಿನಗಳಿಂದ ಈ ಕಂದಕದಲ್ಲಿ ಕಸ ಎಸೆಯಲಾಗುತ್ತಿತ್ತು. ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ, ಜಿಲ್ಲಾಡಳಿತದಿಂದ ಯಾವುದೇ ಕ್ರಮ ವಹಿಸದ ಹಿನ್ನೆಲೆಯಲ್ಲಿ

ಎರಡು ದಿನಗಳಿಂದ ರಸ್ತೆಯಲ್ಲಿಯೇ ಕಸ ವಿಲೇವಾರಿ ಆಗುತ್ತಿದೆ. ಈ ರಸ್ತೆ ಮಾರ್ಗವಾಗಿ ಲಕಮಾಪುರ, ದಾಸನಕೊಪ್ಪ, ಯಾದವಾಡ, ಉಪ್ಪಿನ ಬೆಟಗೇರಿ ಹಾಗೂ ಬೈಲಹೊಂಗಲ ಬಸ್ ಹಾಗೂ ನಿತ್ಯ ನೂರಾರು ಇತರೆ ವಾಹನಗಳ ಸಂಚಾರ ಇದೆ. ಇದು ಬರೀ ವಾಹನ ಸವಾರರು ಮಾತ್ರವಲ್ಲ ರಸ್ತೆ ಎರಡು ಬದಿಯ ಹೊಲಗಳ ರೈತರಿಗೂ ಸಮಸ್ಯೆ ಆಗುತ್ತಿದೆ.


ಹಲವು ವರ್ಷಗಳಿಂದ ಇಲ್ಲಿ ಕಸ ವಿಲೇವಾರಿ ಮಾಡುವ ಬಗ್ಗೆ ಆಡಳಿತ ವ್ಯವಸ್ಥೆಗೆ ದೂರು ನೀಡಲಾಗುತ್ತಿದೆ. ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದೆ. ಕಸದಿಂದಾಗಿ ರಸ್ತೆಯಲ್ಲಿ ಅಪಘಾತಗಳಾಗಿವೆ. ಕೂಡಲೇ ಕಸ ಹಾಕುತ್ತಿರುವವರ ಮೇಲೆ ಕ್ರಮಕೈಗೊಳ್ಳಬೇಕು ಅಲ್ಲದೇ ಕಸ ಮುಕ್ತ ಪ್ರದೇಶವಾಗಿ ಘೋಷಣೆ ಮಾಡಬೇಕು. ಇಲ್ಲದೇ ಹೋದಲ್ಲಿ ಹೋರಾಟ ಮಾಡುತ್ತೇವೆ ಎಂದು ಕಮಲಾಪುರ ರೈತರು ಎಚ್ಚರಿಕೆ ನೀಡಿದ್ದಾರೆ.