ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಫಸಲ್ ಬಿಮಾ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದೆ. ಸರ್ಕಾರ ತನಿಖಾ ತಂಡ ರಚಿಸಿ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡಿ ನಷ್ಟಗೊಂಡ ಎಲ್ಲ ರೈತರಿಗೂ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ರೈತ ಮುಖಂಡರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಬೀಗ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ ಅವರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಂದಾಯ ಇಲಾಖೆ ಸಹಾಯಕ ಆಯುಕ್ತರು ಹಾಗೂ ಸಂಖ್ಯಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡಬೇಕೆಂದು ರೈತರು ಪಟ್ಟುಹಿಡಿದರು.ಬೆಳಗ್ಗೆಯಿಂದಲೇ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಜಮಾಯಿಸಿದ ರೈತರು ಮಧ್ಯಾಹ್ನದ ಹೊತ್ತಿಗೆ ನೂರಾರು ಜನ ಜಮಾಯಿಸಿ ಫಸಲ್ ಬಿಮಾ ಯೋಜನೆಯಲ್ಲಿ ಒಂದು ದೊಡ್ಡಮಟ್ಟದ ಅನ್ಯಾಯವಾಗಿದೆ. ರಾಜ್ಯ ಸರ್ಕಾರವೇ ಬರಗಾಲ ಎಂದು ಘೋಷಣೆ ಮಾಡಿ ₹೪೩೧ ಕೋಟಿ ಪರಿಹಾರ ನೀಡಿದ್ದರು. ಫಸಲ್ ಬಿಮಾ ಯೋಜನೆಯಡಿ ಕೇವಲ ₹೧೩೧ ಕೋಟಿ ನೀಡಿದ್ದಾರೆ. ಇನ್ನೂ ಸಾವಿರಾರು ರೈತರಿಗೆ ಪರಿಹಾರ ಬಂದಿಲ್ಲ ಎಂದು ಆರೋಪಿಸಿದರು.ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ ಮಾತನಾಡಿ, ಫಸಲ್ ಬಿಮಾ ಯೋಜನೆ ಅವೈಜ್ಞಾನಿಕವಾಗಿದೆ. ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವು ಪದ್ಧತಿಯಲ್ಲಿ ರೈತರಿಗೆ ಅನ್ಯಾಯ ಮಾಡುವ ಪದ್ಧತಿಯಾಗಿ ಇದು ಬದಲಾಗಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರ್‍ಯಾರು ನಷ್ಟಗೊಂಡಿದ್ದಾರೆ. ಅವರೆಲ್ಲರಿಗೂ ನ್ಯಾಯ ಸಿಗಬೇಕು. ಇಲ್ಲವಾದಲ್ಲಿ ಈ ಫಸಲ್ ಬಿಮಾ ಯೋಜನೆ ನಮ್ಮ ರಾಜ್ಯಕ್ಕೆ ಬೇಕಿಲ್ಲ. ಜಿಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ವಿಮೆ ಕಂಪನಿಯ ಕಚೇರಿ ಆರಂಭಿಸಬೇಕು. ಇಲ್ಲವೇ ಒಳ್ಳೆಯ ವಿಮೆ ಕಂಪನಿಗೆ ಅನುಮತಿ ನೀಡಿ ರೈತರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡಿ, ಫಸಲ್ ಬಿಮಾ ಜಿಲ್ಲೆಯಲ್ಲಿ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆ ಕಟಾವ್ ಹಾಗೂ ಬೆಳೆ ಸಮೀಕ್ಷೆ ಮಾಡಿರುವ ವಿವಿಧ ಇಲಾಖೆ ಅಧಿಕಾರಿಗಳ ಮಾಹಿತಿ ಹಾಗೂ ರ್‍ಯಾಂಡಮ್ ಆಗಿ ಇಲಾಖೆಯಿಂದ ಆಗಮಿಸಿದ ಜಮೀನುಗಳ ಸರ್ವೆ ನಂಬರ್‌ಗಳ ಮಾಹಿತಿ ಹಾಗೂ ಅದು ಯಾವಾಗ ಬಂದಿದೆ ಎಂಬುದರ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ ಅವರು, ಸರ್ಕಾರದಿಂದಲೇ ಒಂದು ತನಿಖಾ ತಂಡ ನೇಮಿಸಿ ಮರು ಸಮೀಕ್ಷೆ ಮಾಡಬೇಕು ಎಂದೂ ಒತ್ತಾಯಿಸಿದರು.ಫಸಲ್ ಬಿಮಾ ಹಣ ಬಾರದೇ ಚಿಂತೆಗೀಡಾದ ರೈತರು, ಈ ಕುರಿತು ಅಧಿಕಾರಿಗಳನ್ನು ವಿಚಾರಿಸಿದರೆ, ಮುಂಗಡ ವಿಮೆ ಹಣ ಶೇ.೨೫ ನೀಡಿದ್ದೇವೆ. ಉಳಿದ ಹಣ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ಕೂಡ ಒಬ್ಬರ ಮೇಲೆ ಒಬ್ಬರು ಹಾಕುತ್ತಿದ್ದಾರೆ. ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ವರ್ಷ ರಾಜ್ಯ ಸರ್ಕಾರವೇ ಜಿಲ್ಲೆಯ ಎಲ್ಲಾ ೧೩ ತಾಲೂಕುಗಳು ಸಂಪೂರ್ಣ ಬರ ಎಂದು ಘೋಷಣೆ ಮಾಡಿದೆ. ಆದರೆ ಫಸಲ ಬಿಮಾ ಯೋಜನೆಯಲ್ಲಿ ಅಧಿಕಾರಿಗಳು ವಿಮೆ ಕಂಪನಿಯವರ ಜೊತೆ ಸೇರಿ ರೈತರಿಗೆ ದೊಡ್ಡದಾದ ಮೋಸ ಮಾಡಿದ್ದಾರೆ. ಈ ಕುರಿತು ಸಂಪೂರ್ಣ ತನಿಖೆ ಮಾಡಬೇಕು. ನಷ್ಟಗೊಂಡ ಎಲ್ಲರಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಶಿ ಆನಂದ ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ವಿಮೆಯಲ್ಲಿ ಆಗುತ್ತಿರುವ ಅವೈಜ್ಞಾನಿಕ ಹಾಗೂ ಪಾರದರ್ಶಕತೆ ಕೊರತೆ ಇದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜತೆಗೆ ನಿಯಮ ಸರಳೀಕರಣಗೊಳಿಸಲು ನಿರ್ಣಯಿಸಲಾಗಿದೆ. ಇನ್ನೊಮ್ಮೆ ಎಲ್ಲ ಅಧಿಕಾರಿಗಳು ಸೇರಿಕೊಂಡು ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಲು ಸಮಯಾವಕಾಶ ಬೇಕು. ನಾವೆಲ್ಲರೂ ರೈತರ ಪರವಾಗಿಯೇ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.ರೈತ ಮುಖಂಡರಾದ ದೇವಿಂದ್ರಪ್ಪಗೌಡ ಮಾಲಗತ್ತಿ, ಶಿವರಾಜ ಕಲಕೇರಿ, ದೇವರ ಹಿಪ್ಪರಗಿ ಅಧ್ಯಕ್ಷ ಈರಪ್ಪ ಕುಳೆಕುಮಟಗಿ, ಸುರೇಶ ಗರಸಂಗಿ, ಚಂದ್ರಕಾಂತ ಪ್ಯಾಟಿ, ಅನಿಮಿಶ ಜಮಖಂಡಿ, ಸಂಪತ್ತ ಜಮಾದಾರ, ಅಶೋಕ ಅಗಸಿಮನಿ, ಮಲ್ಲಿಕಾರ್ಜುನ ಬಿರಾದಾರ, ತಿಕೋಟಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಶಿವಾನಂದಯ್ಯ ಹಿರೇಮಠ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಮಹಾಂತೇಶ ಮಮದಾಪುರ, ತಾಲೂಕ ಅಧ್ಯಕ್ಷ ಮಹಾದೇವಪ್ಪ ತೇಲಿ, ವಿಜಯಪುರ ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ, ತಾಳಿಕೋಟಿ ಅಧ್ಯಕ್ಷ ಶ್ರೀಶೈಲ ವಾಲಿಕಾರ, ನಿಡಗುಂದಿ ಅಧ್ಯಕ್ಷರಾದ ಕೆ.ಎಂ ಗುಡ್ನಾಳ ತಾಳಿಕೋಟಿ ಮಹಿಳಾ ಅಧ್ಯಕ್ಷರಾದ ಸುಜಾತಾ ಅವಟಿ, ಬಬಲೇಶ್ವರ ಅಧ್ಯಕ್ಷ ಮಕಬುಲ ಕೀಜಿ, ಶಾನೂರ ನಂದರಗಿ, ಅಲ್ಲಾಭಕ್ಷ ಲಷ್ಕರಿ, ಇಬ್ರಾಹಿಂ ಕಮತಗಿ, ಸಂಗಪ್ಪ ಟಕ್ಕೆ, ಮಹಿಬೂಬ ಬಾಷಾ ಮನಗೂಳಿ, ನಜೀರ ನಂದರಗಿ, ಸತ್ಯಪ್ಪ ಕುಲ್ಲೋಳ್ಳಿ, ವಿರೇಶ ಗೊಬ್ಬುರ, ಎಸ್.ಡಿ. ಹೆಬ್ಬಾಳ, ರಾಜುಗೌಡ ಬಿರಾದಾರ, ಸಂಗಮೆಶ ಹುಣಸಗಿ, ಶಾಂತಯ್ಯ ಗಣಾಚಾರಿ, ಅಶೋಕ ತಳವಾರ ಸೇರಿದಂತೆ ಮುಂತಾದವರು ಇದ್ದರು.