ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಮೀಪದ ಸಮೀರವಾಡಿಯ ಸೋಮಯ್ಯ ಸಕ್ಕರೆ ಕಾರ್ಖಾನೆಗೆ ಆಗಮಿಸುತ್ತಿದ್ದ ಮತ್ತು ಆವರಣದಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಗಳಿಗೆ ಕಿಡಿಗೇಡಿಗಳು ಗುರುವಾರ ಸಂಜೆ ಬೆಂಕಿ ಹಚ್ಚಿದ ಘಟನಾ ಸ್ಥಳಕ್ಕೆ ಸಕ್ಕರೆ ಸಚಿವ ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಆರ್.ಬಿ. ತಿಮ್ಮಾಪೂರ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು.ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದಿರುವ ಈ ಘಟನೆ ಬಗ್ಗೆ ಸರ್ಕಾರ ಸೂಕ್ತ ತನಿಖೆ ಮಾಡಲಿದೆ. ಇದು ರೈತರ ಹೆಸರಿನ ಮೇಲೆ ಕಿಡಿಗೇಡಿಗಳು ಮಾಡಿರುವ ಕೃತ್ಯ. ಹೀಗಾಗಿ ಹಾನಿಯಾದ ರೈತರಿಗೆ ಸರ್ಕಾರದಿಂದ ಪರಿಹಾರ ಸಿಗಲಿದೆ. ಜೊತೆಗೆ ಕಬ್ಬು ನುರಿಯುವ ಪ್ರಕ್ರಿಯೆ ಶುರು ಮಾಡಿ ₹೭.೩೦ ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಬೇಕಿದೆ. ಹೀಗಾಗಿ ರೈತರು ಸ್ವಯಂ ಪ್ರೇರಿತರಾಗಿ ಕಾರ್ಖಾನೆಗಳಿಗೆ ಕಬ್ಬು ಕಳುಹಿಸಬೇಕು. ಸಕ್ಕರೆ ಕಾರ್ಖಾನೆಗೆ ಸ್ವಲ್ಪ ಸಮಸ್ಯೆಯಾಗಿದೆ. ಅದಕ್ಕೆ ವಿಷಾದಿಸುತ್ತೇನೆ. ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮವಾಗುತ್ತದೆ. ಆದ್ದರಿಂದ ಕಾರ್ಖಾನೆ ಮಾಲೀಕರು ಹಿಂಜರಿಯದೆ ಕಾರ್ಖಾನೆ ಆರಂಭಿಸಬೇಕು. ಈಗಾಗಲೇ ₹೩೩೦೦ ಕೊಡಬೇಕು ಎಂದು ಆಗ್ರಹಿಸಿದರು. ₹೨೩೫೦ ಕೊಡಲು ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ. ಕಾರ್ಖಾನೆ ಮಾಲೀಕರು ಹಾಗೂ ರೈತರ ಮಧ್ಯೆ ಸಂಧಾನ ನಡೆಯುತ್ತಲೇ ಇದೆ. ರೈತರು ಕಬ್ಬು ಕಳಿಸ್ತೀವಿ ಎಂದು ಒಂದು ಕಡೆ ಆದರೆ ಇನ್ನೊಂದು ಕಡೆ ದರ ನಿಗದಿ ಮಾಡಿಯೇ ಕಾರ್ಖಾನೆ ಆರಂಭ ಮಾಡಿ ಎನ್ನುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ನಾನು ಈಗಾಗಲೇ ನಾಲ್ಕು ಮೀಟಿಂಗ್ ಮಾಡಿದ್ದೇನೆ. ರೈತ ಹೋರಾಟಗಾರರು ₹೩೫೦೦ ಕೊಡಲೇ ಬೇಕು ಎಂದು ಆಗ್ರಹಿಸಿದರು. ರಿಕವರಿ ಬೇಡ, ಏಕರೂಪ ದರ ನಿಗದಿ ಮಾಡಿ ಎಂದರು. ಜೊತೆಗೆ ₹೩೨೫೦ ಒಮ್ಮಲೇ ಕೊಡಬೇಕು ಎಂದು ಬೇಡಿಕೆ ಇಟ್ಟರು. ಈ ಬಗ್ಗೆ ನಾನೂ ರೈತ ಹೋರಾಟಗಾರರು ಹಾಗೂ ಕಾರ್ಖಾನೆ ಮಾಲೀಕರೊಂದಿಗೆ ಮಾತನಾಡಿದ್ದೆ. ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ. ಇತ್ತೀಚೆಗೆ ಒಂದು ಕಾರ್ಖಾನೆಯಲ್ಲಿ ಗಲಾಟೆ ಆಯ್ತು. ಸಮೀರವಾಡಿ ಕಾರ್ಖಾನೆಯಲ್ಲಿ ಈ ರೀತಿ ಆಗಿದೆ. ಕಾರ್ಖಾನೆಯವರು ಎಲ್ಲವನ್ನೂ ಕೊಡ್ತೀವಿ ಅಂದಾಗಲೂ ಈ ರೀತಿ ಆಗಿದ್ದು ವಿಷಾದಕರ ಸಂಗತಿ. ಕಬ್ಬಿಗೆ ಬೆಂಕಿ ಇಟ್ಟಿರುವುದು ಬಹಳ ನೋವಾಗಿದೆ. ಸರ್ಕಾರ ಇದನ್ನು ಗಮನಿಸುತ್ತೆ. ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರನ್ನ ಕರೆದು ಮಾತಾಡ್ತೇನೆ. ಇದು ಸರ್ಕಾರ ಹಾಗೂ ರೈತರ ಸಮಸ್ಯೆ ಅಲ್ಲ. ಕಾರ್ಖಾನೆಗಳು ಹಾಗೂ ರೈತರ ಮಧ್ಯೆ ಇರುವ ಸಮಸ್ಯೆ ಎಂದು ಹೇಳಿದರು.ಸ್ಥಳೀಯ ರೈತರ ಆಕ್ರೋಶ:
ನಮ್ಮ ಬೈಕ್, ಕಬ್ಬಿಗೆ ಹಾಗೂ ಟ್ರ್ಯಾಕ್ಟರ್ ಟ್ರೇಲರ್ ಮತ್ತು ಎಂಜಿನ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಾನಿಗೀಡಾದ ರೈತರು ಮತ್ತು ಮಾಲೀಕರಿಗೆ ಸೂಕ್ತ ಪರಿಹಾರ ಸರ್ಕಾರದಿಂದ ಒದಗಿಸಬೇಕು. ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಸಂಗಪ್ಪ ಎಂ., ಎಸಿ ಸ್ವೇತಾ ಬೀಡಿಕರ, ತಹಸೀಲ್ದಾರ ಗಿರೀಶ ಸ್ವಾದಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ರಂಗನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಕಾರ್ಖಾನೆ ಮುಖ್ಯ ಕಾರ್ಯನಿರ್ವಾಹಕ ಬಿ.ಆರ್. ಭಕ್ಷಿ, ಶ್ರೀಶೈಲ ಕೌಜಲಗಿ, ಯಮನಪ್ಪ ಉಪ್ಪಾರ, ಟಿ.ಪಿ ನಾಯಕ, ಮುಖಂಡರಾದ ಮಹಾಲಿಂಗಪ್ಪ ತಟ್ಟಿಮನಿ, ಮಲ್ಲಪ್ಪ ಸಿಂಗಾಡಿ, ಭೀಮಶಿ ಸಸಾಲಟ್ಟಿ ಸೇರಿದಂತೆ ಇತರರಿದ್ದರು.
ಏನೇನು ಹಾನಿ?೨೪೦ ಟ್ರ್ಯಾಕ್ಟರ್ ಗಳ ಪೈಕಿ ೮೫ ಟ್ರ್ಯಾಕ್ಟರ್ ಕಬ್ಬಿಗೆ ಬೆಂಕಿ ಬಿದ್ದಿದೆ. ೩೪ ಟ್ರ್ಯಾಕ್ಟರ್ ಗಳಿಗೆ ಹಾನಿಯಾಗಿದೆ. ಒಂದು ಟ್ರ್ಯಾಕ್ಟರ್ ಎಂಜಿನ್ ಮತ್ತು ಗಾಲಿಗಳು ಸುಟ್ಟು ಕರಕಲಾಗಿವೆ. ೬ ಬೈಕ್, ೧ ಸರ್ಕಾರಿ ಬಸ್ ಗ್ಲಾಸ್, ಡಿಆರ್ ವ್ಯಾನ್, ಕಾರ್ಖಾನೆಯ ಫೈರ್ ಎಂಜಿನ್ ಗಾಡಿಗೆ ಹಾನಿಯಾಗಿದೆ.
;Resize=(128,128))
;Resize=(128,128))