ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ದೇಶದಲ್ಲಿ ಮೀಸಲಾತಿ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಮೀಸಲಾತಿ ಎಂದರೆ ಬಡತನ, ಹಸಿವು, ದೂರ ಮಾಡುವುದಲ್ಲ. ಮೀಸಲಾತಿ ಸಾಮಾಜಿಕ ಪ್ರಾತಿನಿಧ್ಯವಾಗಿದೆ ಎಂದು ಸತ್ಯ ಶೋಧಕ ಸಂಘದ ರಾಜ್ಯ ಅಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.ನಗರದ ಬಸವಭವನ ಸಭಾಂಗಣದಲ್ಲಿ ಸತ್ಯ ಶೋಧಕ ಸಂಘದ ತಾಲೂಕು ಘಟಕ ಆಶ್ರಯದಲ್ಲಿ ಛತ್ರಪತಿ ಶಾಹು ಮಹಾರಾಜ, ಸಂವಿಧಾನಶಿಲ್ಪಿ ಡಾ.ಬಿರ್.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ನಡೆದ ಮೀಸಲಾತಿ ಅಂದರೆ ಸಾಮಾಜಿಕ ಪ್ರಾತಿನಿಧ್ಯ ವಿಚಾರ ಸಂಕೀರ್ಣದಲ್ಲಿ ಮಾತನಾಡಿ, ದೇಶದಲ್ಲಿರುವ ಜಾತಿ ವ್ಯವಸ್ಥೆಗೆ ಬೆಸತ್ತು ಶೂದ್ರರು, ಮುಸ್ಲಿಮ ಧರ್ಮಕ್ಕೆ ಮತಾಂತರಗೊಂಡರು. ೧೨ನೇ ಶತಮಾನದಲ್ಲಿ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದರು. ಲಿಂಗಾಯತರೂ ಮೊದಲೂ ಶೂದ್ರರಾಗಿದ್ದರು ಅವರು ಇಲ್ಲಿನ ಕೆಟ್ಟ ಜಾತಿ ವ್ಯವಸ್ಥೆಗೆ ಬೆಸತ್ತು ಸಾಮಾಜಿಕ ಪ್ರಾತಿನಿಧ್ಯಕ್ಕಾಗಿ ಬೇರೆ ಧರ್ಮಕ್ಕೆ ಹೋಗಿದ್ದಾರೆ. ಅಲ್ಲಿ ಕೂಡ ಅವರ ಜೀವನ ಮಟ್ಟ ಸುಧಾರಿಸಿಲ್ಲ. ಅದಕ್ಕಾಗಿ ಸಂವಿಧಾನದಲ್ಲಿ ಮುಸ್ಲಿಮ ಸಹಿತ ಕೆಲವು ಧರ್ಮಗಳಿಗೆ ಮೀಸಲಾತಿ ಹಕ್ಕು ನೀಡಿದ್ದಾರೆ ಎಂದರು.
ದೇಶದಲ್ಲಿ ಮೊದಲು 102 ವರ್ಷಗಳ ಹಿಂದೆ ಕೋಲ್ಹಾಹಾಪೂರದ ಛತ್ರಪತಿ ಶಾಹು ಮಹಾರಾಜರು ಮೀಸಲಾತಿ ಕಲ್ಪಿಸುವುದರೊಂದಿಗೆ, ಶೂದ್ರರ ಮಕ್ಕಳಿಗೆ ಶಿಕ್ಷಣ, ವಸತಿ ನಿಲಯ ಪದ್ಧತಿ ಜಾರಿಗೆ ತಂದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಶಾಹು ಮಹಾರಾಜರ ಮೀಸಲಾತಿ ಕನಸನ್ನು ಅಂಬೇಡ್ಕರ್‌ರು ದೇಶದ ಎಲ್ಲ ಹಿಂದುಳಿದ ಜನಾಂಗಕ್ಕೆ ಹಕ್ಕಾಗಿ ನೀಡುವ ಮೂಲಕ ನನಸು ಮಾಡಿದರು. ಪ್ರಪಂಚದ ಮುಂದುವರೆದ ದೇಶದ ಅಮೇರಿಕಾ ಸೇರಿದಂತೆ 26 ರಾಷ್ಟ್ರಗಳಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯವಿದೆ. ಆದರೆ ನಮ್ಮ ದೇಶದಲ್ಲಿ ಸರ್ಕಾರಿ ನೌಕರಿಗೆ ಮಾತ್ರ ಮೀಸಲಾತಿ ಇದೆ. ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಸೌಲಭ್ಯ ಇಲ್ಲದಿರುವುದು ದುರಂತ ಎಂದರು.ಮುಂಬರುವ ಡಿಸೆಂಬರ್‌ನಲ್ಲಿ ಬಾಗಲಕೋಟೆಯಲ್ಲಿ 10 ಸಾವಿರ ಜನರೊಂದಿಗೆ ರಾಜ್ಯ ಮತ್ತು ಕೇಂದ್ರಸರ್ಕಾರಕ್ಕೆ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ಜಾರಿಗೊಳಿಸುವಂತೆ ಹೋರಾಟ ಮಾಡಿ ಒತ್ತಾಯಿಸಲಾಗುವುದು. ದೇಶ, ರಾಜ್ಯದಲ್ಲಿ ಸರ್ಕಾರಿ ನೌಕರಿಗಳು ತುಂಬಿಕೊಳ್ಳುತ್ತಿಲ್ಲ. ದೇಶದಲ್ಲಿ 90 ಲಕ್ಷ ಬ್ಯಾಕಲಾಗ್ ಹುದ್ದೆಗಳಿವೆ. ದೇಶದಲ್ಲಿ ಶೇ.50ರಷ್ಟು ಭೂಮಿಯಲ್ಲಿ ಕೆಲಸ ಮಾಡುತಿದ್ದಾರೆ. ಶೇ.2 ರಷ್ಟು ಮಾತ್ರ ಸರ್ಕಾರಿ ನೌಕರಿ ಲಭಿಸಿದ್ದು, ಅದರಲ್ಲಿ ಶೇ.1 ರಷ್ಟು ಮಾತ್ರ ಮೀಸಲಾತಿ ದೊರೆಯುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಬಿ.ಎಸ್.ಸಿಂಧೂರ ಉದ್ಘಾಟಿಸಿ ಮಾತನಾಡಿ, ಛತ್ರಪತಿ ಶಾಹು ಮಹಾರಾಜರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತರಲ್ಲ. ಸಂವಿಧಾನದ ಮೂಲಕ ಧಮನಿತರಿಗೆ ಧ್ವನಿ ನೀಡುವ ಮೂಲಕ ಹಕ್ಕನ್ನು ನೀಡಿ ಸಮಾನತೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.ಜಿಪಂ ಮಾಜಿ ಉಪಾಧ್ಯಕ್ಷ ಸುಶಿಲಕುಮಾರ ಬೆಳಗಲಿ ಅವರು ಉಚಿತವಾಗಿ ಸಂವಿಧಾನ ಪುಸ್ತಕ ವಿತರಿಸಿದರು. ವೇದಿಕೆಯಲ್ಲಿ ಗಿರೀಶ ಕಡಕೋಳ, ಡಾ.ವಿನಯಕುಮಾರ ಬಬಲೇಶ್ವರ, ಪ್ರಶಾಂತ ಜಂಬಗಿ, ದಶರಥ ಮಾದರ, ವಿಜಯ ಹಲಗಿಮನಿ, ಪೀರ ಕೊಡತಿ, ಶರಣಪ್ಪ ಆರ್ಯವಗೋಳ, ಉಸ್ಮಾನಶಾ ಮಕಾಂದಾರ, ಶಂಕರಾನಂದ ಕುಂಚನೂರ, ಸಂಗಮೇಶ ನಾಗನೂರ, ಪ್ರಭು ಬಿದರಿ, ಜಯವಂತ ದಬಾಣಿ, ಆನಂದ ಖರಾತ, ರಾಜೇಸಾಬ ಗೋರೆಖಾನ, ಶಂಭುಲಿಂಗ ಕಾಂಬಳೆ ಇದ್ದರು.
ರಮೇಶ ಹಾದಿಮನಿ ಸಂವಿಧಾನ ಪೀಠಿಕೆ ಪಠಿಸಿದರು. ಸುಭಾಷ ಹಾದಿಮನಿ ನಿರೂಪಿಸಿದರು. ಸತ್ಯಪ್ಪ ಕಾಂಬಳೆ ವಂದಿಸಿದರು.