ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕೆಲ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಕೆಲವರು ಸ್ಥಳೀಯ ನಿವಾಸಿಗಳನ್ನು ದಾರಿತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ಆಸ್ಪದ ನೀಡದೆ ಸಾರ್ವಜನಿಕರು ಪ್ರತಿಭಟನೆಯನ್ನು ಕೈಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡುವಂತೆ ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.

ತಾಲೂಕಿನ ಗೊರವನಹಳ್ಳಿಯಲ್ಲಿ ಶನಿವಾರ 8.15 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಜನರು ತಮ್ಮ ಮೇಲೆ ವಿಶ್ವಾಸವಿಟ್ಟು ತಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದು ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳಲ್ಲ. ಕ್ಷೇತ್ರವನ್ನು ಮಾದರಿಯಾಗಿ ಮಾಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದರು.

ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮಗಳು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿದರೆ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ತಮ್ಮ ಮಕ್ಕಳ ಭವಿಷ್ಯ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಚಿಂತೆ ಇಲ್ಲದವರು ಇಂತಹ ಪ್ರತಿಭಟನೆಗಳಿಗೆ ಮುಂದಾಗುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲವಾವಣೆಯಾಗುವ ಮೂಲಕ ಕ್ಷೇತ್ರದ ಅಭಿವೃದ್ಧಿಗೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕೆಲವರು ರಾಜಕೀಯ ದುರುದ್ಧೇಶ, ಇಲ್ಲಸಲ್ಲದ ಅಪಪ್ರಚಾರದ ಹೇಳಿಕೆಗಳನ್ನು ನೀಡುವ ಮೂಲಕ ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳಿಗೆ ಒಳಗಾಗದೆ ಪ್ರತಿಭಟನಾಕಾರರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಧರಣಿಯನ್ನು ಕೈಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕೋರಿದರು.


ಗೊರವನಹಳ್ಳಿ ಗ್ರಾಮವು ನಗರಸಭೆಗೆ ಸೇರ್ಪಡೆಯಿಂದ ಡೇರಿ, ಸ್ಥಳೀಯ ಸಹಕಾರ ಸಂಘಗಳು ಮತ್ತು ಇನ್ನಿತರ ಸೌಲಭ್ಯಗಳು ಬೇರೆಡೆಗೆ ಸ್ಥಳಾಂತರವಾಗುವುದಿಲ್ಲ. ಸ್ಥಳೀಯ ನಿವಾಸಿಗಳು ಗ್ರಾಪಂನಲ್ಲಿ ಪಾವತಿಸುತ್ತಿದ್ದ ತೆರಿಗೆ ಹಣವನ್ನಷ್ಟೇ ನಗರಸಭೆಯಲ್ಲಿ ಪಾವತಿಸಬೇಕು. ಮುಂದಿನ ದಿನಗಳಲ್ಲಿ ಗ್ರಾಮಗಳ ಗ್ರಾಪಂ ಕಚೇರಿಗಳಲ್ಲಿ ಅರ್ಜಿ ವಿಲೇವಾರಿಗೆ ಮತ್ತು ಕುಂದು ಕೊರತೆಗಳ ಸಮಸ್ಯೆಗೆ ಕ್ರಮ ವಹಿಸುವ ಭರವಸೆ ನೀಡಿದರು.

ಈ ವೇಳೆ ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್‌ಬಾಬು, ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಪಿ.ರಾಘವ, ಗ್ರಾಪಂ ಮಾಜಿ ಅಧ್ಯಕ್ಷ ಮಧುಕುಮಾರ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಎಂ.ಡಿ.ಮಹಾಲಿಂಗಯ್ಯ, ದೇಶಹಳ್ಳಿ ಆರ್.ಮೋಹನ್‌ ಕುಮಾರ್, ಸಿದ್ಧರಾಮು, ಪುಟ್ಟಸ್ವಾಮಿ, ಬೋರೇಗೌಡ, ಜಿ.ಎಸ್.ಶಿವರಾಮು, ಎಂ.ಡಿ.ಮಹಾಲಿಂಗಯ್ಯ, ಜವರೇಗೌಡ, ಶಿವಪ್ಪ, ಮಹಿಳಾ ಅಧ್ಯಕ್ಷೆ ಮಮತಾಶಂಕರೇಗೌಡ, ನಗರಸಭೆ ಪೌರಾಯುಕ್ತೆ ರಾಧಿಕಾ ಇತರರಿದ್ದರು.