ಸಾರಾಂಶ
ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ಕಳೆದ ಹಲವು ವರ್ಷಗಳಿಂದ ನಡೆದಿರುವ ಅವ್ಯವಹಾರ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ದಾಳಿ ನಡೆದಿದೆ.
ಲೋಕಾಯುಕ್ತ ಡಿವೈಎಸ್‌ಪಿ ಡಾ. ಗಾನಾ ಪಿ. ಕುಮಾರ್ ನೇತೃತ್ವದಲ್ಲಿ ನಾಲ್ಕೈದು ಅಧಿಕಾರಿಗಳು, 20ಕ್ಕೂ ಅಧಿಕ ಸಿಬ್ಬಂದಿಗಳ ಮೂಲಕ ಈ ದಾಳಿ ನಡೆದಿದೆ.ಗುರುವಾರ ಬೆಳಗ್ಗಿನಿಂದ ಸಂಜೆವರೆಗೆ ಪ್ರಾಧಿಕಾರದ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತದಲ್ಲಿ ಅನೇಕ ಲೋಪದೋಷಗಳು ಕಂಡುಬಂದಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯವಾಗಿ ಪಿಲಿಕುಳದ ಮೃಗಾಲಯ ವಿಚಾರದಲ್ಲಿ ಪರಿಶೀಲನೆ ನಡೆದಿದೆ. ನಂತರ ಗುತ್ತು ಮನೆ, ಮಾನಸ ವಾಟರ್ ಪಾರ್ಕ್, ಲೇಕ್ ಗಾರ್ಡನ್, ಸೈನ್ಸ್ ಮ್ಯೂಸಿಯಂ ಮುಂತಾದ ಘಟಕಗಳಲ್ಲಿ ಕೂಡ ಪರಿಶೀಲನೆ ನಡೆಸಿದ್ದಾರೆ.ನಿಸರ್ಗಧಾಮದಲ್ಲಿ ನಡೆದಿರಬಹುದಾದ ಯಾವುದೇ ಅಕ್ರಮ ಅಥವಾ ಅವ್ಯವಹಾರ ಕಂಡುಬಂದರೆ, ಸಾರ್ವಜನಿಕರು 0824-2950997 ಗೆ ಅಥವಾ ನೇರವಾಗಿ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದು ಎಂದು ಲೋಕಾಯುಕ್ತ ತಿಳಿಸಿದೆ.ಕಳೆದ ಹಲವು ವರ್ಷಗಳಿಂದ ಮೃಗಾಲಯದ ನಿರ್ವಹಣೆಯಲ್ಲಿ ಭಾರೀ ಲೋಪದೋಷಗಳು, ಅನುದಾನ ದುರುಪಯೋಗ ಆರೋಪ, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ, ಮೃಗಾಲಯದ ಪ್ರಾಣಿಗಳ ಆಹಾರ ಸರಬರಾಜಿನಲ್ಲಿನಡೆದಿರುವ ಅವ್ಯವಹಾರ ಆರೋಪಗಳ ಹಿನ್ನೆಲೆಯಲ್ಲಿ ಆದಾಯ ಮತ್ತು ವೆಚ್ಚದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ಈ ಹಿಂದೆ ಮೇ 23 ರಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಕಚೇರಿಗೆ ದಿಡೀರ್ ಭೇಟಿ ನೀಡಿ ಪರಿಶೋಧನೆ ನಡೆಸಿದ್ದರು. ಅದರ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಿದ್ದು, ಕೇಂದ್ರದ ಸೂಚನೆ ಮೇರೆಗೆ ಸರ್ಚ್ ವಾರಂಟ್ ನೊಂದಿಗೆ ಮತ್ತೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಮಗ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.