ಮೋದಿ ಭೇಟಿಗೆ ಸಿಗದ ಅವಕಾಶ: ಹೋರಾಟಗಾರ ಹೂಗಾರ ಬಂಧನ

| Published : Mar 17 2024, 01:45 AM IST

ಸಾರಾಂಶ

ಎಸ್‌ಪಿ ಕಚೇರಿಯಿಂದ ದೂರವಾಣಿ ಕರೆ ಮಾಡಿ ಪ್ರಧಾನಮಂತ್ರಿಗಳ ಕಾರ್ಯಕ್ರಮವಿದೆ, ನೀವು ಮನವಿ ಸಲ್ಲಿಸುವ ಯೋಜನೆ ಇಟ್ಟುಕೊಂಡಿದ್ದೀರಾ ಎಂದು ಮಾಹಿತಿ ಕೇಳಿದಾಗ ನಾನು ಹೌದು ದೆಹಲಿ ರೈತರ ಹೋರಾಟ ಬೆಂಬಲಿಸಿ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಕಲಬುರಗಿಯ ಎನ್‌ವಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೆಹಲಿ ರೈತರ ಹೋರಾಟ ಬೆಂಬಲಿಸಿ ಮನವಿ ಸಲ್ಲಿಸಬೇಕೆಂದುಕೊಂಡಿದ್ದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಅವರನ್ನು ಅಫಜಲ್ಪುರ ತಾಲೂಕಿನ ಹಾವಳಗಾ ಗ್ರಾಮದ ಅವರ ನಿವಾಸದಿಂದ ಬೆ.6ಕ್ಕೆ ಅಫಜಲ್ಪುರ ಪಿಎಸ್‌ಐ ಮಹಿಬೂಬ ಅಲಿ ಹಾಗೂ ಸಿಬ್ಬಂದಿ ಬಂಧಿಸಿದ ಘಟನೆ ನಡೆಯಿತು.

ಈ ಕುರಿತು ರಮೇಶ ಹೂಗಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಪಿ ಕಚೇರಿಯಿಂದ ದೂರವಾಣಿ ಕರೆ ಮಾಡಿ ಪ್ರಧಾನಮಂತ್ರಿಗಳ ಕಾರ್ಯಕ್ರಮವಿದೆ, ನೀವು ಮನವಿ ಸಲ್ಲಿಸುವ ಯೋಜನೆ ಇಟ್ಟುಕೊಂಡಿದ್ದೀರಾ ಎಂದು ಮಾಹಿತಿ ಕೇಳಿದಾಗ ನಾನು ಹೌದು ದೆಹಲಿ ರೈತರ ಹೋರಾಟ ಬೆಂಬಲಿಸಿ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದೆ. ಇದನ್ನು ಕೇಳಿದ ಪೊಲೀಸರು ನನ್ನ ಮನೆಯಿಂದಲೇ ಬೆ.6 ಗಂಟೆಗೆ ಬಂಧಿಸಿ ಠಾಣೆಗೆ ಕರೆತಂದು ಮೋದಿ ಅವರ ಕಾರ್ಯಕ್ರಮ ಮುಗಿದ ಬಳಿಕ ಬಿಡುಗಡೆಗೊಳಿಸಿದ್ದಾರೆ. ಇದನ್ನು ನೋಡಿದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರದವರಿಗೆ ರೈತರ ಮೇಲೆ ಎಂತ ಕಾಳಜಿ ಇದೆ ಎನ್ನುವುದು ಸಾಬೀತಾಗುತ್ತದೆ. ರೈತರನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಇದು ಖಂಡನೀಯವಾಗಿದ್ದು ದೆಹಲಿ ರೈತರ ಹೋರಾಟಕ್ಕೆ ಜಯ ಸಿಗಲಿ ಎಂದು ಹೇಳಿದರು.