ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಜಲಪಾತ ಬಳಿ 15 ವರ್ಷದ ಬಾಲಕಿ ನಿಗೂಢ ನಾಪತ್ತೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪ್ರವಾಸಕ್ಕೆ ಚಿಕ್ಕಮಗಳೂರಿಗೆ ಬಂದಿದ್ದ ಕೇರಳ ಮೂಲದ ಬಾಲಕಿ ಪತ್ತೆ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಯಾವುದೇ ಸಣ್ಣ ಸುಳಿವು ಸಿಕ್ಕಿಲ್ಲ.

ಬೇಸಿಗೆ ರಜೆ ಪ್ರವಾಸಕ್ಕೆಂದು ಮಂಗಳವಾರ ಚಿಕ್ಕಮಗಳೂರಿಗೆ 40 ಮಂದಿಯ ಕುಟುಂಬ ಆಗಮಿಸಿತ್ತು. ದತ್ತಪೀಠದ ತಪ್ಪಲಿ ನ ಪ್ರಸಿದ್ಧ ಮಾಣಿಕ್ಯಾಧಾರ ಜಲಪಾತದ ಬಳಿ 15 ವರ್ಷದ ಬಾಲಕಿ ಅಂದು ಸಂಜೆ 5.30ರ ಸುಮಾರಿಗೆ ನಿಗೂಢವಾಗಿ ನಾಪತ್ತೆ ಯಾಗಿದ್ದಳು. ಪೊಲೀಸರಿಗೆ ಮಾಹಿತಿ ನೀಡುತ್ತಿದಂತೆ ರಾತ್ರಿಯಿಂದಲೇ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟು ಶೋಧ ನಡೆಸುತ್ತಿದ್ದಾರೆ.

ಪೊಲೀಸರಿಗೆ, ಅರಣ್ಯ ಇಲಾಖೆ, ಅಗ್ನಿ ಶಾಮಕ ಇಲಾಖೆ, ಡಾಗ್‌ ಸ್ಕ್ವಾಡ್, ಎಸ್‌ಡಿಆರ್‌ಎಫ್‌ ಅಧಿಕಾರಿ, ಸಿಬ್ಬಂದಿ ಸಾಥ್‌ ನೀಡುತ್ತಿದ್ದಾರೆ. ಸತತ 24 ಗಂಟೆಗಳ ಕಾಲ ಶೋಧ ನಡೆಸಿದರೂ ಈವರೆಗೆ ಯಾವುದೇ ಸಣ್ಣ ಸುಳಿವು ದೊರೆಯದಿರುವುದು ಅಚ್ಚರಿ ಉಂಟು ಮಾಡಿದೆ. ಶೋಧ ಕಾರ್ಯಕ್ಕೆ ಅರಣ್ಯ ಇಲಾಖೆಯಿಂದ ಥರ್ಮಲ್ ಡೋನ್ ಕ್ಯಾಮೆರಾಗಳನ್ನು ಬಳಸಲಾಗಿದೆ.


ಬುಧವಾರ ಬೆಳಗಿನಜಾವ 5ದಿಂದಲೇ ಕಾರ್ಯಾಚರಣೆ ಚುರುಕುಗೊಂಡಿದೆ. ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ 5 ಪ್ರತ್ಯೇಕ ತಂಡಗಳಾಗಿ ಕಾಡಿನೊಳಗೆ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿ ಕಾಡಿನೊಳಗೆ ಎಲ್ಲಾದರೂ ಅವಿತಿದ್ದಲ್ಲಿ ಪತ್ತೆ ಹಚ್ಚಲು ''''''''ಥರ್ಮಲ್ ಡ್ರೋನ್'''''''' (ಉಷ್ಣಾಂಶದ ಆಧಾರದ ಮೇಲೆ ಪತ್ತೆ ಹಚ್ಚುವ ಡ್ರೋನ್) ಬಳಸಲಾಗುತ್ತಿದೆ.

ಕ್ಷಣಾರ್ಧದಲ್ಲಿ ಮಾಯವಾದ ಬಾಲಕಿ

ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಮಾಣಿಕ್ಯಾಧಾರದ ಮೆಟ್ಟಿಲುಗಳನ್ನು ಇಳಿಯುತ್ತಿದ್ದರು. ಕುಟುಂಬದ ಸದಸ್ಯರೆಲ್ಲಾ ಮುಂದೆ ಹೋಗುತ್ತಿದ್ದರೆ, ಬಾಲಕಿ ಶ್ರೀನಂದ ಅವರ ಹಿಂದೆಯೇ ಬರುತ್ತಿದ್ದಳು. ಆದರೆ, ಒಂದು ತಿರುವಿನಲ್ಲಿ ನೋಡುವಷ್ಟರಲ್ಲಿ ಆಕೆ ಅಲ್ಲಿರ ಲಿಲ್ಲ. ಕ್ಷಣಾರ್ಧದಲ್ಲಿ ಬಾಲಕಿ ದಟ್ಟ ಕಾನನದ ನಡುವೆ ನಾಪತ್ತೆಯಾಗಿದ್ದಾಳೆ. ತಕ್ಷಣವೇ ಕುಟುಂಬಸ್ಥ ಸುತ್ತಮುತ್ತ ಗಾಬರಿಯಿಂದ ಹುಡುಕಾಡಿದರೂ ಆಕೆಯ ಯಾವುದೇ ಸುಳಿವು ಸಿಗಲಿಲ್ಲ.

ನಿಗೂಢತೆಗೆ ಕಾರಣವೇನು?ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಲು ಜಾರಿ ಅಥವಾ ಮಂಜು ಮುಸುಕಿದ ವಾತಾವರಣದಲ್ಲಿ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಆದರೆ, ಈಗ ಕಡು ಬೇಸಿಗೆ ಇರುವುದರಿಂದ ನೆಲ ಒಣಗಿದೆ. ಬಾಲಕಿ ನಾಪತ್ತೆಯಾದ ಒಂದು ಗಂಟೆ ಒಳಗೇ ಹತ್ತಾರು ಜನರು ಆ ಭಾಗದಲ್ಲಿ ಹುಡುಕಾಡಿದರೂ ಸಿಗದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಬಾಲಕಿ ಕಾಡು ಪ್ರಾಣಿಗಳ ದಾಳಿಗೆ ಒಳಗಾಗಿದ್ದಾಳೋ ಅಥವಾ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದಿದ್ದಾಳೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಮಾಣಿಕ್ಯಾಧಾರದ ಸುತ್ತಮುತ್ತಲಿನ 2-3 ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ಶೋಧ ಮುಂದುವರಿದಿದೆ.

ವಾಹನಗಳ ಪರಿಶೀಲನೆ: ಬಾಲಕಿ ಕಾಣೆಯಾದ ಸಮಯದಲ್ಲಿ ಆ ಸ್ಥಳದಿಂದ ತೆರಳಿದ ವಾಹನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮುಖ್ಯವಾಗಿ ಬಾಲಕಿ ಇನ್ನೂ 10ನೇ ತರಗತಿ ಆಗಿರುವುದರಿಂದ ಯಾವುದೇ ಮೊಬೈಲ್‌ ಫೋನ್‌ ಬಳಕೆ ಮಾಡುತ್ತಿರಲಿಲ್ಲ. ಇದು ಬಾಲಕಿ ಪತ್ತೆಗೆ ದೊಡ್ಡ ಸವಾಲಾಗಿದೆ.