ಬಾಗಲಕೋಟೆ ನವನಗರದ ಮೊರಾರ್ಜಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರನ್ನು ತ್ವರಿತ ಕಾರ್ಯಾಚರಣೆ ಮೂಲಕ ಪೊಲೀಸರು ಪತ್ತೆ ಮಾಡಿ ರಕ್ಷಿಸಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಮೊರಾರ್ಜಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರನ್ನು ತ್ವರಿತ ಕಾರ್ಯಾಚರಣೆ ಮೂಲಕ ಪೊಲೀಸರು ಪತ್ತೆ ಮಾಡಿ ರಕ್ಷಿಸಿರುವ ಘಟನೆ ನಡೆದಿದೆ.ನವನಗರದಲ್ಲಿರುವ ಮೊರಾರ್ಜಿ ವಸತಿ ಶಾಲೆಯಿಂದ ಡಿ.11ರ ಸಂಜೆ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರು. ಹಾಸ್ಟೆಲ್ ಸಿಬ್ಬಂದಿ ಹುಡುಕಾಟ ನಡೆಸಿದರೂ ಸಿಗದಿದ್ದಾಗ ರಾತ್ರಿ 10 ಗಂಟೆಗೆ ನವನಗರದ ಮಹಿಳಾ ಪೊಲೀಸ್ ಠಾಣೆ ಸಂಪರ್ಕಿಸಿದರು. ನಾಪತ್ತೆಯಾದ ನಾಲ್ವರು 10ನೇ ತರಗತಿ ವಿದ್ಯಾರ್ಥಿನಿಯರಾಗಿದ್ದು, ತ್ವರಿತ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು.
ವಿದ್ಯಾರ್ಥಿನಿಯರು ನವನಗರ ಬಸ್ ನಿಲ್ದಾಣ ಮೂಲಕ ಹುನಗುಂದ ಕಡೆಗೆ ತೆರಳುವ ಬಸ್ಸಿನಲ್ಲಿ ತೆರಳಿರುವ ಬಗ್ಗೆ ಮಾಹಿತಿ ತಿಳಿಯಿತು. ಆಗ ಇಳಕಲ್ ಹಾಗೂ ಹುನಗುಂದ ಪೊಲೀಸರನ್ನು ಅಲರ್ಟ್ ಮಾಡಲಾಯಿತು. ಅವರು ಬಸ್ ನಿಲ್ದಾಣದಲ್ಲಿ ಹುಡುಕಾಟ ನಡೆಸಿದ್ದು, ವಿದ್ಯಾರ್ಥಿನಿಯರು ಪತ್ತೆಯಾಗಿಲ್ಲ. ಈ ನಾಲ್ವರ ಪೈಕಿ ಓರ್ವ ವಿದ್ಯಾರ್ಥಿನಿ ಬಳಿ ಮೊಬೈಲ್ ಇರುವ ಮಾಹಿತಿ ಸಿಕ್ಕಿದೆ. ತಕ್ಷಣ ಲೋಕೇಶನ್ ಹುಡುಕಾಟ ನಡೆಸಿದ್ದು, ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಬಳಿ ಲೋಕೇಶನ್ ಪತ್ತೆಯಾಗಿದೆ.ತಕ್ಷಣ ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಲಾಗಿದ್ದು, ವಿಜಯಪುರ ಬಸ್ ನಿಲ್ದಾಣ ಹೊರಭಾಗದ ಟಿಪ್ಪು ವೃತ್ತದ ಬಳಿ ರಾತ್ರಿ 12.15ಕ್ಕೆ ನಾಲ್ವರು ವಿದ್ಯಾರ್ಥಿನಿಯರು ಸಿಕ್ಕಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಜಯಪುರ ಠಾಣೆಯಲ್ಲಿ ಇರಿಸಲಾಗಿತ್ತು. ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ವಿಜಯಪುರಕ್ಕೆ ತೆರಳಿ ವಾಪಸ್ ಕರೆತಂದು ಪಾಲಕರಿಗೆ ಒಪ್ಪಿಸಿದ್ದಾರೆ.ನವನಗರದ ಪೊಲೀಸ್ ಠಾಣೆಯ ಪಿಐ ಸಿ.ಬಿ.ಚಿಕ್ಕೋಡಿ ನೇತೃತ್ವದ ತಂಡ ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ವಿದ್ಯಾರ್ಥಿನಿಯರು ಪತ್ತೆಯಾಗಿದ್ದು, ವಿರ್ಪೀಪಿರ್ ಗಾಂಧಿ ಚೌಕ್ ಪೊಲೀಸರ ಕಾರ್ಯವನ್ನು ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಶ್ಲಾಘಿಸಿದ್ದಾರೆ.
ನಿಖರ ಕಾರಣ ತಿಳಿಸುತ್ತಿಲ್ಲ:ವಿದ್ಯಾರ್ಥಿನಿಯರು ಹೇಗೆ ಕಾಣೆಯಾದರು ಎಂಬುವುದಕ್ಕೆ ವಸತಿ ಶಾಲೆಯ ಪ್ರಾಂಶುಪಾಲ, ವಾರ್ಡನ್ ಬಳಿ ಸ್ಪಷ್ಟ ಉತ್ತರವಿಲ್ಲ. ವಾರ್ಡನ್ ಚನ್ನಪ್ಪ ಮೇತ್ರಿ ಅವರು ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಅದಕ್ಕೆ ವಿದ್ಯಾರ್ಥಿನಿಯರು ಹಾಸ್ಟೇಲ್ ತೊರೆದಿದ್ದರು ಎಂಬ ಒಂದು ಆರೋಪವಿದ್ದರೆ, ಮೊಬೈಲ್ ಬಳಸಲು ಅವಕಾಶ ನೀಡದ್ದರಿಂದ ವಿದ್ಯಾರ್ಥಿನಿಯರು ಹೀಗೆ ಮಾಡಿದ್ದಾರೆಂಬ ಮಾತುಗಳಿವೆ. ಪೊಲೀಸ್ ತನಿಖೆಯಿಂದಷ್ಟೇ ಇದಕ್ಕೆ ಉತ್ತರ ಸಿಗಲಿದೆ.
