ಮಂಡ್ಯ ಜಿಲ್ಲೆಯ ಎಲ್ಲಾ ಹೈಸ್ಕೂಲ್‌ಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 40 ಅಂಕಗಳಿಗೆ ಅಭ್ಯಾಸ ಪರೀಕ್ಷೆ ನೀಡುವಂತೆ ಸೂಚಿಸಿದ್ದು, ಡಿ.18,19 ಹಾಗೂ 20 ರಂದು ನಡೆದ ಪರೀಕ್ಷೆಯಲ್ಲಿ ಶೇ.50ಕ್ಕಿಂತ ಕಡಿಮೆ ಅಂಕ ಪಡೆದ 5221 ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಿ ವಿಶೇಷ ತರಗತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಉತ್ತಮಗೊಳಿಸಲು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವಿನೂತನ ಮಿಷನ್ 40 ಫಾರ್ 90 ಡೇಸ್ ಅಭಿಯಾನ ಕುರಿತು ಜಿಪಂ ಸಿಇಒ ಕೆ.ಆರ್.ನಂದಿನಿ ಪರಿಶೀಲನಾ ಸಭೆ ನಡೆಸಿದರು.

ನಗರದ ಜಿಪಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವಿದ್ಯಾರ್ಥಿಯು 90 ದಿನಗಳಲ್ಲಿ ಕನಿಷ್ಠ 40 ಅಂಕ ಪಡೆಯುವಂತೆ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಫಲಿತಾಂಶ ಉತ್ತಮಗೊಳಿಸಲು ನೇಮಕಗೊಂಡ 56 ನೋಡಲ್ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ಹೈಸ್ಕೂಲ್‌ಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 40 ಅಂಕಗಳಿಗೆ ಅಭ್ಯಾಸ ಪರೀಕ್ಷೆ ನೀಡುವಂತೆ ಸೂಚಿಸಿದ್ದು, ಡಿ.18,19 ಹಾಗೂ 20 ರಂದು ನಡೆದ ಪರೀಕ್ಷೆಯಲ್ಲಿ ಶೇ.50ಕ್ಕಿಂತ ಕಡಿಮೆ ಅಂಕ ಪಡೆದ 5221 ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಿ ವಿಶೇಷ ತರಗತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಅಭ್ಯಾಸ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸ ನಡೆಸಲು ನೋಟ್ ಬುಕ್‌ಗಳ ಕೊರತೆ ಎದುರಾಗುತ್ತದೆಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಸಿ.ಎಸ್.ಆರ್.ಅನುದಾನದಡಿ ನೋಟ್ ಬುಕ್ ಪಡೆದು ಶಾಲೆಗೆ ವಿತರಿಸಲು ಪ್ರಯತ್ನಿಸಲಾಗುವುದು ಎಂದು ಮಾಹಿತಿ ನೀಡಿದರು.

ಡಿಡಿಪಿಐ, ಡಯಟ್ ಪ್ರಾಂಶುಪಾಲರು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಅಧಿಕಾರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆರವರನ್ನೊಳಗೊಂಡ ಮೇಲ್ವಿಚಾರಣಾ ಸಮಿತಿ ರಚಿಸಲು ಸೂಚಿಸಲಾಗಿದೆ ಎಂದರು.

ಕಾರ್ಯನಿರ್ವಾಹಕ ಅಧಿಕಾರಿಗಳು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಕಾಲ ಕಾಲಕ್ಕೆ ವರದಿ ನೀಡಬೇಕು. ಗ್ರಾಪಂಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಅಗತ್ಯ ಸಹಕಾರ ನೀಡುವಂತೆ ನಿರ್ದೇಶನ ನೀಡಬೇಕು ಎಂದು ತಾಪಂ ಇಒಗಳಿಗೆ ಸೂಚಿಸಿದರು.

ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಶಾಲೆ ಮುಖ್ಯಶಿಕ್ಷಕರು, ನೋಡಲ್ ಅಧಿಕಾರಿಗಳು ಮತ್ತು ಬಿಇಒಗಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಅಭ್ಯಾಸ ಪರೀಕ್ಷೆಯಲ್ಲಿ ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಶಾಲೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ತಾಲೂಕುಗಳಲ್ಲಿ ವಿಶೇಷ ಗಮನ ಹರಿಸಬೇಕು ಎಂದರು.

2022ನೇ ಸಾಲಿನಿಂದ ಬಾಕಿ ಉಳಿದಿದ್ದ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ 217 ಅಡುಗೆ ಸಿಬ್ಬಂದಿಗೆ 1 ಜನವರಿ 2026ರ ಹೊಸ ವರ್ಷದಂದು ಸರ್ಕಾರದ ನಿರ್ದೇಶನದಂತೆ ನೇರವಾಗಿ ಸಂಬಂಧಪಟ್ಟವರ ಖಾತೆಗೆ ಇಡಿಗಂಟು ಪಾವತಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಿ.ಲೋಕೇಶ್, ಡಯಟ್ ಪ್ರಾಂಶುಪಾಲ ಯೋಗೇಶ್, ಮಧ್ಯಾಹ್ನದ ಬಿಸಿಯೂಟ ಯೋಜನೆ ಶಿಕ್ಷಣಾಧಿಕಾರಿ ರವಿಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಬಿಇಒಗಳು, ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.