ಸ್ವಸ್ಥ-ಸದೃಢ ಸಮಾಜ ನಿರ್ಮಾಣ ಶಾಂತಿವನ ಟ್ರಸ್ಟ್ ಉದ್ದೇಶ

| Published : Jan 27 2024, 01:18 AM IST

ಸಾರಾಂಶ

ಆಧುನಿಕತೆಯ ಪ್ರವಾಹದಲ್ಲಿ ಪಾರಂಪಾರಿಕ ಮೌಲ್ಯಗಳು ಕೊಚ್ಚಿ ಹೋಗಬಾರದು ಎಂಬುದೇ ನಮ್ಮ ಈ ಪ್ರಯತ್ನದ ಆಶಯ. ಹೊಸಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎಂಬ ಮಾತಿನಂತೆ ಹಳತಿನಲ್ಲಿರುವ ಒಳ್ಳೆಯ ಅಂಶಗಳನ್ನು ಇಟ್ಟುಕೊಂಡು ಹೊಸತನದ ನೆಲೆಗಳನ್ನು ಕಂಡುಕೊಳ್ಳಬೇಕು ಎಂಬುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾಗಿರುವ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಟ್ರಸ್ಟ್‌ ಕುರಿತು ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪ್ರಕೃತಿ ಚಿಕಿತ್ಸೆಯ ಮೂಲಕ ಆರೋಗ್ಯ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಇತ್ಯಾದಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸುಂದರ ಸ್ವಸ್ಥ-ಸದೃಢ ಸಮಾಜ ನಿರ್ಮಾಣ ಹಾಗೂ ಪುಣ್ಯ ಭೂಮಿ ಭಾರತದ ಮಣ್ಣಿನಿಂದ ಉದಿಸಿದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ನೈತಿಕ ಮೌಲ್ಯಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಉನ್ನತ ಉದ್ದೇಶಗಳಿಂದ 1985ರಲ್ಲಿ ಸ್ಥಾಪಿಸಲ್ಪಟ್ಟ ಸಂಸ್ಥೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ.

ಇದು 5 ಕ್ಷೇತ್ರಗಳಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಇದರಲ್ಲಿ 1991ರಲ್ಲಿ ಆರಂಭವಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯೂ ಒಂದು. ಈ ಯೋಜನೆಯಡಿ ಇದುವರೆಗೆ ಒಟ್ಟು 22 ಲಕ್ಷದ 23 ಸಾವಿರ ಪುಸ್ತಕಗಳು ಪ್ರಕಟಗೊಂಡು ದಕ್ಷಿಣ ಕನ್ನಡ, ಉಡುಪಿ, ಚಿಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿತರಣೆಯಾಗಿವೆ. ಕಳೆದ 32 ವರ್ಷಗಳಿಂದ ಈವರೆಗೆ ವಿವಿಧ ಶೀರ್ಷಿಕೆಯುಳ್ಳ 52 ಮೌಲ್ಯಾಧಾರಿತ ಪುಸ್ತಕಗಳು ಪ್ರಕಟಗೊಂಡಿವೆ. ಪ್ರಸ್ತುತ ವರ್ಷ 1 ಲಕ್ಷ ಪುಸ್ತಕಗಳನ್ನು ವಿತರಿಸಲಾಗಿದೆ.2023ರಲ್ಲಿ ಪ್ರಾಥಮಿಕ ಶಾಲಾ ವಿಭಾಗದವರಿಗೆ ಜ್ಞಾನ ಶರಧಿ ಹಾಗು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜ್ಞಾನವಾರಿಧಿ ಎಂಬ ಪುಸ್ತಕಗಳನ್ನು ಪ್ರಕಟಿಸಿ ವಿತರಿಸಲಾಗಿತ್ತು. ಎರಡೂ ಪುಸ್ತಕಗಳಲ್ಲಿನ ಬರಹ ಸಂಗ್ರಹವನ್ನು ಹೇಮಾವತಿ ವೀ. ಹೆಗ್ಗಡೆಯವರು ಶ್ರಮವಹಿಸಿದ್ದಾರೆ. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಅವರು ಪುಸ್ತಕಗಳನ್ನು ರೂಪಿಸಲು ವಿಶೇಷ ಆಸಕ್ತಿ ತೋರಿ ಕೆಲಸ ಮಾಡಿದ್ದಾರೆ. ಶಾಲೆಗಳಲ್ಲಿ ಈ ಪುಸ್ತಕವನ್ನು ಕುರಿತ ಚಟುವಟಿಕೆಗಳನ್ನು ನಡೆಸಲು ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ನಿರಂತರ ಪ್ರೋತ್ಸಾಹ ನೀಡುತ್ತಿದೆ. ಪುಸ್ತಕಗಳ ಬಗ್ಗೆ ಶಾಲೆಗಳಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇಂದು ಪುರಸ್ಕಾರ ನೀಡಲಾಗುತ್ತಿದೆ. ಆಧುನಿಕತೆಯ ಪ್ರವಾಹದಲ್ಲಿ ಪಾರಂಪಾರಿಕ ಮೌಲ್ಯಗಳು ಕೊಚ್ಚಿ ಹೋಗಬಾರದು ಎಂಬುದೇ ನಮ್ಮ ಈ ಪ್ರಯತ್ನದ ಆಶಯ. ಹೊಸಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎಂಬ ಮಾತಿನಂತೆ ಹಳತಿನಲ್ಲಿರುವ ಒಳ್ಳೆಯ ಅಂಶಗಳನ್ನು ಇಟ್ಟುಕೊಂಡು ಹೊಸತನದ ನೆಲೆಗಳನ್ನು ಕಂಡುಕೊಳ್ಳಬೇಕು ಎಂಬುದು ನಮ್ಮೆಲ್ಲರ ಉದ್ದೇಶವಾಗಿದೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷರಾಗಿರುವ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು.

ಶಾಂತಿವನ ಟ್ರಸ್ಟ್ ಎಂಬುದು ಖಾವಂದರ ಉನ್ನತ ಧ್ಯೇಯೋದ್ದೇಶಗಳ ಪರಿಕಲ್ಪನೆಯನ್ನು ಸಾಕಾರಗೊಳಿಸಿಕೊಂಡು ಸಾಮಾಜಿಕ ಅಭಿವೃದ್ಧಿ ಅನ್ವೇಷಣೆಯ ದೃಷ್ಟಿಯಿಂದ ಸ್ಥಾಪಿತಗೊಂಡ ಸಂಸ್ಥೆ. ಖಾವಂದರ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ 1993ರಿಂದ 2023ರ ವರೆಗೆ ನಿರಂತರವಾಗಿ ನೈತಿಕ ಸಮಾಜ ನಿರ್ಮಾಣ ಪಥದಲ್ಲಿ ಸಾಗುತ್ತಿದೆ.

- ಸೀತಾರಾಮ ತೋಳ್ಪಾಡಿತ್ತಾಯ, ಕಾರ್ಯದರ್ಶಿ ಶಾಂತಿವನ ಟ್ರಸ್ಟ್