ರಾಜ್ಯಪಾಲರಿಂದ ಅಧಿಕಾರ ದುರ್ಬಳಕೆ: ಮಂಜುನಾಥ ಭಂಡಾರಿ

| Published : Aug 18 2024, 01:50 AM IST

ಸಾರಾಂಶ

ಬಿಜೆಪಿ ಹೈಕಮಾಂಡ್‌ ರಾಜ್ಯಪಾಲರ ಹುದ್ದೆಯನ್ನು ಏಜೆಂಟ್‌ ಥರ ಉಪಯೋಗಿಸಿ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ರಾಜ್ಯಪಾಲರ ಈ ನಿರ್ಧಾರದ ಹಿಂದೆ ರಾಜಕೀಯ ಕಾರಣ ಇದೆಯೇ ಹೊರತು ಸತ್ಯಾಂಶ ಇಲ್ಲ ಎಂದು ಮಂಜುನಾಥ ಭಂಡಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಎಂಎಲ್ಸಿ ಮಂಜುನಾಥ ಭಂಡಾರಿ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಆರೋಪಿಸಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್‌ ರಾಜ್ಯಪಾಲರ ಹುದ್ದೆಯನ್ನು ಏಜೆಂಟ್‌ ಥರ ಉಪಯೋಗಿಸಿ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ರಾಜ್ಯಪಾಲರ ಈ ನಿರ್ಧಾರದ ಹಿಂದೆ ರಾಜಕೀಯ ಕಾರಣ ಇದೆಯೇ ಹೊರತು ಸತ್ಯಾಂಶ ಇಲ್ಲ ಎಂದು ಹೇಳಿದರು.

ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಐದೂ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿ ಜನರ ಪ್ರೀತಿ ಗಳಿಸಿದೆ. ಇದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್‌ ಸರ್ಕಾರಕ್ಕೆ ಮಸಿ ಬಳಿಯಲು ನಿರ್ಧಾರ ಮಾಡಿದ್ದು, ರಾಜ್ಯಪಾಲರನ್ನು ಉಪಯೋಗಿಸಿ ಸುಳ್ಳು ತನಿಖೆಗೆ ಅನುಮತಿ ಕೊಡಿಸಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

ಈ ಹಿಂದೆ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತವೇ ವರದಿ ನೀಡಿ 9 ತಿಂಗಳಾದರೂ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರು ಮುಂದಾಗಿಲ್ಲ. ಶಶಿಕಲಾ ಜೊಲ್ಲೆ, ಮುರುಗೇಶ್‌ ಪ್ರಕರಣದಲ್ಲೂ ಮಾತನಾಡದ ರಾಜ್ಯಪಾಲರು, ಇದೀಗ ಖಾಸಗಿ ವ್ಯಕ್ತಿಯೊಬ್ಬರ ದೂರಿನ ಮೇರೆಗೆ 24 ಗಂಟೆಯಲ್ಲಿ ನೋಟಿಸ್‌ ನೀಡಿ ವಾರದಲ್ಲೇ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.

ಮುಖಂಡರಾದ ಪದ್ಮರಾಜ್‌ ಆರ್‌., ಸದಾಶಿವ ಉಳ್ಳಾಲ್‌, ವಿಶ್ವಾಸ್‌ ಕುಮಾರ್‌ ದಾಸ್‌, ಜೆ. ಅಬ್ದುಲ್‌ಸಲೀಂ, ನೀರಜ್‌ಪಾಲ್‌, ಸುಭಾಶ್ಚಂದ್ರ ಶೆಟ್ಟಿ, ಟಿ.ಕೆ. ಸುಧೀರ್‌, ಲಾರೆನ್ಸ್‌ ಡಿಸೋಜ, ತನ್ವೀರ್‌ ಶಾ, ಶುಭೋದಯ ಆಳ್ವ, ಪ್ರೇಮ್‌ ಬಳ್ಳಾಲ್‌ಬಾಗ್‌, ವಿಕಾಸ್‌ ಶೆಟ್ಟಿ ಇದ್ದರು.