ಕಾಂಗ್ರೆಸ್ಸಿಗರಿಂದ ಸಂವಿಧಾನದ ದುರುಪಯೋಗ: ಅಮೀನರೆಡ್ಡಿ ಯಾಳಗಿ

| Published : Dec 01 2024, 01:33 AM IST

ಸಾರಾಂಶ

Misuse of Constitution by Congressmen: Amin Reddy Yalagi

-ಬಿಜೆಪಿಯಿಂದ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಸ್ವಾತಂತ್ರ್ಯ ಬಂದಾಗಿನಿಂದ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಹಲವಾರು ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. ಅಲ್ಲದೆ, ಸಂವಿಧಾನದ ದುರುಪಯೋಗಪಡಿಸಿಕೊಂಡು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಹೇಯಕೃತ್ಯಕ್ಕೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಆಗಿದೆ ಎಂಬುದನ್ನು ದೇಶ ರಾಜ್ಯದ ಜನರು ಮರೆತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಹೇಳಿದರು.

ನಗರದ ಹೊರವಲಯದ ನಿವೇದಿತ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ನಡೆದ ಸಂವಿಧಾನ ಸನ್ಮಾನ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಕಾನೂನು ದಿನವನ್ನಾಗಿ ಇದನ್ನು ಆಚರಿಸಲಾಗುತ್ತಿತ್ತು. ಇದನ್ನು ಸಂವಿಧಾನ ಸಮರ್ಪಣಾ ದಿನವಾಗಿ ಅರ್ಥಪೂರ್ಣವಾಗಿ ಆಚರಿಸುವ ಅಭಿಲಾಷೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರದ್ದು ಎಂದರು.

ನ.26 ರಿಂದ ಜ.26ರವರೆಗೆ 2 ತಿಂಗಳ ಕಾಲ ದೇಶಾದ್ಯಂತ ಸಂವಿಧಾನ ಸನ್ಮಾನ ಅಭಿಯಾನ ಆಚರಿಸಲಾಗುತ್ತಿದೆ. ಸಂವಿಧಾನಕ್ಕೆ ಅವಹೇಳನ ಮಾಡಿದ ಕಾಂಗ್ರೆಸ್ಸಿಗರು ಸಂವಿಧಾನ ಪ್ರತಿಪಾದಕರಂತೆ ಕಪಟ ನಾಟಕವನ್ನು ದಶಕಗಳಿಂದ ನಿರಂತರ ಮಾಡುತ್ತಾ ಬಂದಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದವರು ಸಂವಿಧಾನಕ್ಕೆ ಧಕ್ಕೆ ತರುವಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಸಂವಿಧಾನಕ್ಕೆ ಗೌರವ ತರುವಲ್ಲಿ, ಸಂವಿಧಾನವನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವದಿಂದ ಕಾಣುವ ಮತ್ತು ಪಾಲಿಸುವ ಕಡೆ ಬಿಜೆಪಿ ಮುಂದಾಗಿದೆ ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ಸಂವಿಧಾನ ರಚನೆ ದೊಡ್ಡ ಸವಾಲಾಗಿತ್ತು. ಆಗ ಸಂವಿಧಾನ ಸಮಿತಿಯು ಸುದೀರ್ಘವಾಗಿ ಎಲ್ಲ ಆಯಾಮಗಳಲ್ಲಿ ಚರ್ಚೆ ಮಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಾನವೀಯ ತತ್ವಗಳನ್ನು ಸೇರಿಸಿದ್ದರಿಂದ ನಮ್ಮ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವೆನಿಸಿದೆ ಎಂದರು.

ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಇತಿಹಾಸವನ್ನು ಮರೆಮಾಚುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ, ಬಂದಿದ್ದಾರೆ. ಅದನ್ನು ತೊಡೆದು ಹಾಕಿ, ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಿದ ಸಂವಿಧಾನಕ್ಕೆ ಸಂಪೂರ್ಣ ಗೌರವ ತಂದು ಕೊಡುವ ಪ್ರಾಮಾಣಿಕ ಕೆಲಸವನ್ನು ಮೋದಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರವಿಚಂದ್ರ ಕ್ರಾಂತಿಕಾರ ಸಂವಿಧಾನ ಪೀಠಿಕೆ ಪಠಣ ಮಾಡಿಸಿದರು. ಉಪನ್ಯಾಸಕ ಮೌನೇಶ್ ಹಯ್ಯಾಳ ವಿಶೇಷ ಉಪನ್ಯಾಸ ನೀಡಿದರು. ನಿವೇದಿತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಖಂಡಪ್ಪ ದಾಸನ್‌, ದೇವಿಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಮೇಲಪ್ಪ ಗುಳಗಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಚನ್ನಾರಡ್ಡಿ ಬಿಳ್ಹಾರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಬಸವರಾಜ ವಿಭೂತಹಳ್ಳಿ, ಸದಾಶಿವಪ್ಪಗೌಡ ರೊಟ್ನಡಗಿ, ಮಹಾದೇವಪ್ಪ ಯಲಸತ್ತಿ, ಭೀಮಾಶಂಕರ ಬಿಲ್ಲವ ಇದ್ದರು.

-----

30ವೈಡಿಆರ್8: ಯಾದಗಿರಿ ನಗರದ ಹೊರವಲಯದ ನಿವೇದಿತ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮ ನಡೆಯಿತು.