ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಕೇಂದ್ರ ಸರ್ಕಾರ, ರಾಜ್ಯದ ವಿರೋಧ ಪಕ್ಷದ ನಾಯಕರು ರಾಜ್ಯಪಾಲರ ಸಾಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಸರ್ಕಾರಕ್ಕೆ ಅಭದ್ರತೆ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರ್ಯಕರ್ತರು ದಿಟ್ಟ ಉತ್ತರ ನೀಡಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆ.9 ರಂದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಜರುಗುವ ಕಾಂಗ್ರೆಸ್ ಜನಾಂದೋಲನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಆಡಳಿತವಿರುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಸಿಬಿಐ, ಇಡಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಸಿಎಂ, ಸಚಿವರು, ಶಾಸಕರಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿದ್ದಾರೆ. ಇದುವರೆಗೂ ಬಿಜೆಪಿಯವರಿಗೆ ಜನರ ಆಶೀರ್ವಾದದಿಂದ ಸರ್ಕಾರ ನಡೆಸಲು ಸಾಧ್ಯವಾಗಿಲ್ಲ, ಇವರಿಗೆ ಶಾಸಕರನ್ನು ಖರೀದಿ ಮಾಡಿ ಹಿಂಬಾಗಿಲಿನಿಂದ ಅಧಿಕಾರ ಪಡೆಯುವುದೇ ಅಭ್ಯಾಸವಾಗಿದೆ ಎಂದು ಕಿಡಿಕಾರಿದರು.ಚುನಾವಣಾ ಪೂರ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದ ಐದು ಭರವಸೆಗಳನ್ನು ಸರ್ಕಾರ ಬಂದ ಆರು ತಿಂಗಳಲ್ಲಿ ಈಡೇರಿಸಿದ್ದಾರೆ. ಇದರಿಂದ ಹಿಂದುಳಿದ ವರ್ಗದವರು, ಬಡವರು, ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ. ನಮ್ಮ ರಾಜ್ಯದ ಯೋಜನೆಗಳನ್ನು ಬೇರೆ ರಾಜ್ಯಗಳು ಚುನಾವಣೆಗಳಲ್ಲಿ ಅನುಸರಿಸುತ್ತಿದ್ದಾರೆ. ಆದರೆ, ಕೇಂದ್ರದಲ್ಲಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಪಡೆದು ಬಿಜೆಪಿ ಸರ್ಕಾರ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಪ್ರಧಾನಿ ಮೋದಿ ಅವರು ಅನ್ಯ ಪಕ್ಷಗಳಿಗೆ ಅವಲಂಬಿತರಾಗಿ ಸರ್ಕಾರ ರಚನೆ ಮಾಡಿದ್ದಾರೆ.
ಇದು ಪ್ರಕೃತಿಯ ಸರ್ಕಾರವಲ್ಲ ಆಕ್ಸಿಜನ್ ಸರ್ಕಾರ ಯಾವಾಗ ಸರ್ಕಾರ ಬೀಳಲಿದೆ ಎಂದು ಪ್ರತಿನಿತ್ಯ ಚಿಂತೆ ನಡೆಸುತ್ತಿದ್ದಾರೆ. ಇವರು ದೇಶದಲ್ಲಿ ಬೇರೆ ಪಕ್ಷಗಳು ಆಡಳಿತವಿರುವ ರಾಜ್ಯಗಳನ್ನೇ ಟಾರ್ಗೆಟ್ ಮಾಡಿ ಅಭದ್ರತೆ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಅಭದ್ರತೆ ಮಾಡುವ ಬಿಜೆಪಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಬೇಕು ಎಂದು ವಾಗ್ದಾಳಿ ನಡೆಸಿದರು.ಮುಡಾದಲ್ಲಿ ಕಾನೂನು ಪಾಲನೆ ಮಾಡಿಯೇ ಮುಖ್ಯಮಂತ್ರಿ ಅವರ ಪತ್ನಿಗೆ ಸೈಟ್ ವಿತರಣೆ ಮಾಡಿದ್ದಾರೆ. ಇದರಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, ವಿತರಣೆ ವೇಳೆ ಬಿಜೆಪಿ ಶಾಸಕರಾಗಿದ್ದ ರಾಮದಾಸ್, ನಾಗೇಂದ್ರ , ಜೆಡಿಎಸ್‌ನ ಸಾ.ರಾ.ಮಹೇಶ್, ಜಿ.ಟಿ. ದೇವೇಗೌಡ ಮೂಡ ಸದಸ್ಯರಾಗಿದ್ದರು. ಆದರೆ ಇವರೊಬ್ಬರು ಈ ಪ್ರಕರಣದ ಬಗ್ಗೆ ಮಾತನಾಡುತ್ತಿಲ್ಲ. ಸತ್ಯ ಏನೆಂಬುದು ಇವರಿಗೂ ತಿಳಿದಿದೆ. ರಾಜ್ಯದಲ್ಲಿ ಸರ್ಕಾರ ಉತ್ತಮವಾಗಿ ನಡೆಯುತ್ತಿರುವುದರಿಂದ ಸುಖಾಸುಮ್ಮನೆ ಮೂಡ ಹಗರಣ ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ಇವರಿಗೆ ಪಾದಯಾತ್ರೆ ಮಾಡಲು ನೈತಿಕತೆಯೇ ಇಲ್ಲ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಪ್ರವಾಹ ಬಂದು ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ಪ್ರವಾಹದಿಂದ ಹಲವಾರು ಜನರು ಮೃತಪಟ್ಟಿದ್ದಾರೆ. ಇವರ ಕಷ್ಟದ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ, ಒಂದು ವಾರ ಕಾಲ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಜನರ ಬಗ್ಗೆ ಕಾಳಜಿ ಇಲ್ಲದ ಇವರಿಗೆ ಹೋರಾಟ ಮಾಡುವ ಹಕ್ಕಿಲ್ಲ ಎಂದರು.ಹಗರಣ ಮಾಡಿ ಜೈಲಿಗೆ ಹೋಗಿ ಬಂದ ಸಿಎಂಗಳಿಗೆ ಯಾವೊಬ್ಬ ರಾಜ್ಯಪಾಲರು ನೋಟಿಸ್ ನೀಡಿಲ್ಲ. ಆದರೆ ಒಬ್ಬ ಕಾರ್ಯಕರ್ತ ದೂರು ನೀಡಿದ ತಕ್ಷಣ ರಾಜ್ಯಪಾಲರು ನೋಟಿಸ್ ನೀಡಿರುವುದು ಸರಿಯಾದ ಕ್ರಮವಲ್ಲ. ಇದುವರೆಗೂ ಕೇಂದ್ರ ಸರ್ಕಾರ ಸಿಬಿಐ, ಇಡಿ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದರು. ಇದೀಗ ರಾಜ್ಯಪಾಲರ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದರು.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯ ಹಾಗೂ ದೇಶಕ್ಕೆ ತಿಳಿಯುವಂತೆ ಯಾವುದೇ ಹಗರಣ ಮಾಡದಿದ್ದರೂ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬಂಡವಾಳ ಬಯಲು ಮಾಡಿ ನಮ್ಮ ಪಕ್ಷದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಕೈಬಲ ಪಡಿಸಲು ಜನಾಂದೋಲನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಕೆಪಿಸಿಸಿ ಉಪಾಧ್ಯಕ್ಷ ಜಿ.ಎನ್. ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಮುಕುಂದವರ್ಮ, ಮಹಿಳಾ ಘಟಕದ ಅಧ್ಯಕ್ಷ ಡಾ.ಅತೀಯಾ, ಕೆಪಿಸಿಸಿ ಸದಸ್ಯ ಬಸವರಾಜು, ಚಾಮುಲ್ ನಿರ್ದೇಶಕರು, ನಂಜುಂಡಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯ ಗಿರೀಶ್ ಇದ್ದರು.