ಸಾರಾಂಶ
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ದಲಿತರ ಕೋಟ್ಯಂತರ ರು.ಗಳನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
ಹಾಸನ : ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ದಲಿತರ ಕೋಟ್ಯಂತರ ರು.ಗಳನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಸಂಸದ ಯದುವೀರ್ ಕೃಷ್ಣ ದತ್ತ ಒಡೆಯರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ೨೦೨೩ರ ವಿಧಾನಸಭೆಯ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷವು ಅಧಿಕಾರದ ದುರಾಸೆಗೆ ಬಿದ್ದು ಐದು ಗ್ಯಾರಂಟಿಗಳನ್ನು ಘೋಷಿಸಿತು. ಅದನ್ನು ಮತದಾರರಿಗೆ ನಂಬಿಸಲು ಹರಸಾಹಸ ನಡೆಸಿತು. ಆಗ ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಎಸ್.ಸಿ., ಎಸ್.ಪಿ. ಮತ್ತು ಟಿ.ಎಸ್.ಪಿ. ಹಣ ಬಳಸುವುದಾಗಿ ಹೇಳಿರಲಿಲ್ಲ. ಆದರೆ ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ನಂತರ ಮಾಡಿದ್ದೇನು? ಎಂದು ಪ್ರಶ್ನಿಸಿದರು.
೨೦೨೩ರಲ್ಲಿ ಎಸ್.ಸಿ., ಎಸ್.ಪಿಯಿಂದ ೭೭೧೩.೧೫ ಸಾವಿರ ಕೋಟಿ ರು. ಮತ್ತು ಟಿ.ಎಸ್.ಪಿ. ಯಿಂದ ೩೪೩೦.೮೫ ಸಾವಿರ ಕೋಟಿ ರು. ಒಟ್ಟಾರೆ ೧೧,೧೪೪.೦೦ ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿತು ಎಂದು ದೂರಿದರು.
ಮೊದಲ ಸಲ ದಲಿತರ ಮೀಸಲು ನಿಧಿಗೆ ಅನೈತಿಕವಾಗಿ ಕೈ ಹಾಕುವಾಗ ಮುಖ್ಯಮಂತ್ರಿಗಳು ಹಿಂಜರಿಕೆ ತೋರ್ಪಡಿಸಿದ್ದರು. ಸಚಿವ ಸಂಪುಟ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸರ್ಕಾರ ಎಮ್ಮೆ ಚರ್ಮ ಬೆಳಸಿಕೊಂಡು, ಸಂವೇದನೆ ಕಳೆದುಕೊಂಡು ಎಸ್.ಸಿ./ ಎಸ್.ಟಿ. ಸಮುದಾಯದ ಹಣ ನುಂಗಿ ದುರಹಂಕಾರದ ಸ್ಥಿತಿ ತಲುಪಿದೆ ಎಂದು ಕಿಡಿಕಾರಿದರು.
ಕಳೆದ ವರ್ಷವೂ ಸರ್ಕಾರ ಇದೇ ಚಾಳಿಯನ್ನು ಮುಂದುವರಿಸಿತು. ಈಗ ಭಂಡ ಕಾಂಗ್ರೆಸ್ ಸರ್ಕಾರ ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದೆ. ಆದರೆ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ, ಎಸ್ಟಿ ಸಮುದಾಯದವರ ‘ದಲಿತರ ಮೀಸಲು ನಿಧಿ’ಗೆ ಕನ್ನ ಹಾಕುತ್ತಿದೆ. ಇದನ್ನು ಸಾಮಾಜಿಕ ನ್ಯಾಯವೆನ್ನಲು ಸಾಧ್ಯವೇ ಎಂದರು.
ಈ ಸರ್ಕಾರ ಈಗ ದಲಿತ ದ್ರೋಹಿ ಅಲ್ಲದೆ ಮತ್ತೇನು? ವಾಸ್ತವದಲ್ಲಿ ಎಸ್.ಸಿ.ಎಸ್.ಪಿ. ( ಪರಿಶಿಷ್ಟ ಜಾತಿಗಳ ವಿಶೇಷ ಘಟಕ ಯೋಜನೆ ) ಮತ್ತು ಟಿ.ಎಸ್.ಪಿ. (ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಯೋಜನೆ ) ಎಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಬಲೀಕರಣ, ಶಿಕ್ಷಣ, ಉದ್ಯೋಗ, ಸ್ವಾವಲಂಬನೆ ಮೂಲಕ ಪ್ರತಿ ವ್ಯಕ್ತಿ, ಕುಟುಂಬವನ್ನು ಸಶಕ್ತಗೊಳಿಸುವುದು, ಆದರೆ ಈಗ ಏನಾಗಿದೆ? ಕಾಂಗ್ರೆಸ್ ಸರ್ಕಾರ ಏನುಮಾಡುತ್ತಿದೆ? ಯಾವುದೇ ನೀತಿ, ನಿಯಮ ಇಲ್ಲದೆ, ಪೂರ್ವ ಯೋಜನೆ ಇಲ್ಲದೆ ಇದ್ದಬದ್ದವರಿಗೆಲ್ಲ ಗ್ಯಾರಂಟಿ ಘೋಷಿಸಿ ತನ್ನ ಕೈಗೆ ತಾನೇ ಹಗ್ಗ ಕಟ್ಟಿಕೊಂಡ ಸರ್ಕಾರವು ‘ದಲಿತರ ಮೀಸಲು ನಿಧಿ’ ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಸ್.ಸಿ.ಎಸ್.ಟಿ ಕಲ್ಯಾಣಕ್ಕೆ ಇರುವ ಅನುದಾನದಲ್ಲಿ ಕಾಂಗ್ರೆಸ್ ಗ್ಯಾರಂಟಿ ಜಾತ್ರೆ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದರು.
ಎಸ್ಪಿ, ಎಸ್ಪಿ ಸಮುದಾಯಗಳ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಭವ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ. ವಾಲ್ಮೀಕಿ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಈ ಎಲ್ಲಾ ನಿಗಮಗಳು ಸರ್ಕಾರದ ಹಣಕಾಸಿನ ನೆರವಿಲ್ಲದೆ ಸೊರಗಿವೆ. ಯಾವ ನಿಗಮದಲ್ಲಿಯೂ ಯಾವ ಯೋಜನೆಯೂ ಜಾರಿಯಾಗುತ್ತಿಲ್ಲ. ಇದು ದಲಿತ ಸಮುದಾಯಗಳಿಗೆ ಮಾಡಿರುವ ದ್ರೋಹವಾಗಿದೆ ಎಂದು ಆರೋಪಿಸಿದರು. ಸಾರಿಗೆ ಸಂಬಳಕ್ಕೂ ಸಹ ಕಾಸಿಲ್ಲದ ದಿವಾಳಿ ಸ್ಥಿತಿಯಿದೆ. ಹಣ ವರ್ಗಾವಣೆಗೆ ಅವಕಾಶ ಇಲ್ಲದಂತೆ ೭ಡಿ ರದ್ದು ಮಾಡಿದ್ದು ತಾನೇ ಎಂದು ಬೆನ್ನು ತಟ್ಟಿಕೊಳ್ಳುವ ಈ ಸರ್ಕಾರ ಈಗ ೭ಸಿ ಕಾಯ್ದೆ ರದ್ದು ಮಾಡಿಲ್ಲ ಎಂದು ಪಿಸುಗುಟ್ಟುತ್ತಿದೆ. ೭ಸಿ ರದ್ದು ಮಾಡಿ ದಲಿತರ - ಅದಿವಾಸಿಗಳ ಮೀಸಲು ಹಣ ಸಂಪೂರ್ಣವಾಗಿ ಅವರಿಗೆ ಸಲ್ಲುವಂತೆ ಮಾಡಿ ಎಂದು ಆಗ್ರಹಿಸಿದರು.
ಮುಂಬರಲಿರುವ ಬಜೆಟ್ ನಲ್ಲಿ ಮತ್ತೆ ೧೪,೪೮೮.೮೬ ಸಾವಿರ ಕೋಟಿ ರು.ಗಳನ್ನು ದುರ್ಬಳಕೆ ಮಾಡಲು ಹೊಂಚು ಹಾಕಿ ಕುಳಿತಿದೆ ಎಂದು ಅನುಮಾನಿಸಿದರು. ಕಾಂಗ್ರೆಸ್ ಸರ್ಕಾರದ ಈ ಬೇಜವಾಬ್ದಾರಿ, ದಲಿತ ವಿರೋಧಿ ನೀತಿಯನ್ನು ನಾವು ಒಪ್ಪುವುದಿಲ್ಲ. ಸದನದ ಹೊರಗೆ ಮತ್ತು ಒಳಗೆ ನಾವು ಗಂಭೀರ ಹೋರಾಟ ಮಾಡುತ್ತೇವೆ, ಅದಕ್ಕಾಗಿ ಈ ಜನಾಂದೋಲನ. ರಾಜ್ಯದ ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಜನ ಬೀದಿಗಿಳಿದು ಪ್ರತಿಭಟಿಸಲಿದ್ದಾರೆ. ಸರ್ಕಾರ ತಾನು ತುಳಿದಿರುವ ಅನೈತಿಕ ದಾರಿಯಿಂದ ಹಾಗೂ ದಲಿತ ಸಮುದಾಯಗಳಿಗೆ ಮಾಡುತ್ತಿರುವ ದ್ರೋಹ, ಅನ್ಯಾಯದಿಂದ ಹಿಂದೆ ಸರಿಯಲಿ, ಇದು ನಮ್ಮ ಹಕ್ಕೊತ್ತಾಯ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಚಾಮರಾಜನಗರ ಮಾಜಿ ಶಾಸಕ ಬಾಲರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಬೆಳ್ಳಿ ಗಂಗಾಧರ್, ವಕೀಲ ಅರುಣ್ ಕುಮಾರ್, ಸಂಯೋಜಕ ಎಸ್.ಪಿ. ಲಿಂಬನಾಯ್ಡು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಗಿರೀಶ್, ರೇಣುಕುಮಾರ್, ದೇವರಾಜೇಗೌಡ, ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್, ಎಸ್.ಡಿ. ಚಂದ್ರು, ಪರ್ವತಯ್ಯ ಇತರರು ಉಪಸ್ಥಿತರಿದ್ದರು.