ಮಾವತ್ತೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನ ದುರುಪಯೋಗ

| Published : Sep 12 2024, 01:51 AM IST

ಸಾರಾಂಶ

ದಲಿತರಿಗೆ, ನಿರ್ಗತಿಕರಿಗೆ, ಮದುವೆ, ಶುಭ ಸಮಾರಂಭ ಹಾಗೂ ಸರ್ಕಾರಿ ಕಾರ್ಯಕ್ರಮಕ್ಕೆ ಬಳಕೆ ಆಗಬೇಕಿದ್ದ ಕೊರಟಗೆರೆ ತಾಲೂಕಿನ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಗ್ರಾಪಂ ಅಧಿಕಾರಿಗಳು ನಕಲಿ ವೈದ್ಯನಿಗೆ ತಿಂಗಳಿಗೆ 500 ರು.ಯಂತೆ ಬಾಡಿಗೆ ನೀಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಮಾವತ್ತೂರು ಗ್ರಾಮದಲ್ಲಿ ದಲಿತರಿಗೆ, ನಿರ್ಗತಿಕರಿಗೆ, ಮದುವೆ, ಶುಭ ಸಮಾರಂಭ ಹಾಗೂ ಸರ್ಕಾರಿ ಕಾರ್ಯಕ್ರಮಕ್ಕೆ ಬಳಕೆ ಆಗಬೇಕಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಗ್ರಾಪಂ ಅಧಿಕಾರಿಗಳು ನಕಲಿ ವೈದ್ಯನಿಗೆ ತಿಂಗಳಿಗೆ 500 ರು.ಯಂತೆ ಬಾಡಿಗೆ ನೀಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಪ್ರತಿಯೊಂದು ಗ್ರಾಮಗಳಲ್ಲಿ ಅಂಬೇಡ್ಕರ್, ಬಾಬು ಜಗಜೀವನ್ ಭವನ ನಿರ್ಮಾಣ ಮಾಡಿದೆ. ಭವನವನ್ನು ಬಾಡಿಗೆ ನೀಡುತ್ತಿರುವ ಗ್ರಾಪಂ ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆ, ಸಾರ್ವಜನಿಕರಾಗಲಿ ಪ್ರಶ್ನೆ ಮಾಡದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಗ್ರಾಪಂ ಅಭಿವೃದ್ದಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಕ್ಷಾಂತರ ರು. ಅನುದಾನ ನೀಡುತ್ತಿದ್ದು, ಅದನ್ನು ಸರ್ಮಪಕವಾಗಿ ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ಬಾಡಿಗೆಗಾಗಿ ಸರ್ಕಾರಿ ಕಟ್ಟಡಗಳನ್ನ ನೀಡುತ್ತಿದ್ದಾರೆ. ಮಾವತೂರು ಗ್ರಾಪಂಯಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿದ್ದು, ಇದರ ಜೊತೆ ಕಂದಾಯ ವಸೂಲಾತಿ ಮಾಡುತ್ತಿದ್ದರೂ ಸಹ ಅಂಬೇಡ್ಕರ್ ಭವನವನ್ನು ಬಾಡಿಗೆ ನೀಡಿದ್ದಾರೆ. ಒಂದು ತಿಂಗಳ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಟ್ಟಡಕ್ಕೆ ಬಂದಿದ್ದು, ಗ್ರಾಪಂ ಅಧಿಕಾರಿಗಳು ಈ ಹಿಂದೆ ಇದ್ದ ಕಟ್ಟಡ ಶಿಥಲವಾಗಿದ್ದ ಕಾರಣ ಅಂಬೇಡ್ಕರ್ ಭವನದಲ್ಲಿ ಇರುವಂತೆ ಸೂಚಿಸಿದ್ದಾರೆ. ಪ್ರತಿ ತಿಂಗಳು 500 ರು. ನಂತೆ ಗ್ರಾಪಂಗೆ ಬಾಡಿಗೆ ಹಣವನ್ನು ನೀಡುತ್ತಿದ್ದೇನೆ.- ಜಾವೀದ್ ನಕಲಿ ವೈದ್ಯ ಮಾವತ್ತೂರು

ದಲಿತರ ಅಭಿವೃದ್ಧಿಗಾಗಿ ಅಂಬೇಡ್ಕರ್ ಹೆಸರಲ್ಲಿ ಭವನ ನಿರ್ಮಾಣ ಮಾಡಲಾಗಿದ್ದು, ಸಮುದಾಯ ಭವನವನ್ನ ಯಾರೋ ಖಾಸಗಿ ವ್ಯಕ್ತಿ ಕ್ಲಿನಿಕ್ ತೆರೆಯಲು ಗ್ರಾಪಂ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಇಂತಹ ಎಷ್ಟು ಪ್ರಕರಣಗಳ ತಾಲೂಕಿನಲ್ಲಿ ನಡೆಯುತ್ತಿದ್ದು, ಅನೇಕ ಬಾರಿ ಇಲ್ಲಿನ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ತಿಳಿಸಿದರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ತಕ್ಷಣ ಮಾವತ್ತೂರು ಗ್ರಾಮದ ಸಮುದಾಯ ಭವನವನ್ನ ತೆರವುಗೊಳಿಸಬೇಕು. -ದಾಡಿವೆಂಕಟೇಶ್ ಮುಖಂಡ ಕೊರಟಗೆರೆ

ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾದ ಅಂಬೇಡ್ಕರ್ ಭವನದಲ್ಲಿ ಖಾಸಗಿ ಕ್ಲಿನಿಕ್ ತೆರೆದಿರುವುದು ನನ್ನ ಗಮನಕ್ಕೆ ಬಂದಿದ್ದು, ಈಗಾಗಲೇ ಸಮಾಜ ಕಲ್ಯಾಣ ಇಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಸಮುದಾಯ ಭವನಗಳನ್ನು ಯಾವುದೇ ಖಾಸಗಿ ವ್ಯಕ್ತಿಗಳು ಬಳಸುವಂತಿಲ್ಲ ಯಾರಾದರೂ ಬಳಸಿದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. -ಮಂಜುನಾಥ್ ತಹಸೀಲ್ದಾರ್ ಕೊರಟಗೆರೆ

ಮಾವತ್ತೂರು ಗ್ರಾಪಂಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಖಾಸಗಿ ವೈದ್ಯರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದ್ದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಭವನವನ್ನು ಖಾಲಿ ಮಾಡಿಸಲಾಗಿದೆ. ತಾಲೂಕಿನಲ್ಲಿ ಯಾವುದೇ ಸರ್ಕಾರದ ಭವನಗಳಲ್ಲಿ ಖಾಸಗಿ ವ್ಯಕ್ತಿಗಳು ಇದ್ದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. -ಯಮುನಾ ಸಮಾಜ ಕಲ್ಯಾಣಾಧಿಕಾರಿಮಾವತ್ತೂರು ಗ್ರಾಮದಲ್ಲಿ ಕ್ಲಿನಿಕ್‌ ಇಟ್ಟಿರುವ ವೈದ್ಯರ ನಮ್ಮ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದಿಲ್ಲ. ಆ ಗ್ರಾಮದಲ್ಲಿ ಕ್ಲಿನಿಕ್ ಇರುವುದು ನನಗೆ ಮಾಹಿತಿ ಇಲ್ಲ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ನಕಲಿ ಕ್ಲಿನಿಕ್ ತೆರವುಗೊಳಿಸುವಂತೆ ಸೂಚನೆ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. -ವಿಜಯಕುಮಾರ್ ಟಿಹೆಚ್‌ಒ ಕೊರಟಗೆರೆ

ನಮ್ಮ ಗ್ರಾಪಂಯ ಹಳೆಯ ಕಟ್ಟಡ ಶಿಥಿಲಗೊಂಡಿದ್ದು, ನೂತನ ಕಟ್ಟಡ ನಿರ್ಮಾಣ ಮಾಡಲು ತಯಾರು ಮಾಡಲಾಗಿದ್ದು, ಗ್ರಾಪಂ ಸಭೆಯಲ್ಲಿ ತಿರ್ಮಾನ ಮಾಡಿ ಅಧ್ಯಕ್ಷ, ಉಪಾಧ್ಯಕ್ಷರು ತಾತ್ಕಾಲಿಕವಾಗಿ ಕ್ಲಿನಿಕ್‌ ಇಡಲು ತಿಳಿಸಿದ್ದಾರೆ. ಬಾಡಿಗೆ ನೀಡುವ ಬಗ್ಗೆ ಮಾಹಿತಿ ಇಲ್ಲ.- ಬಿ.ಸಿ.ಪ್ರಶಾಂತ್ ಪಿಡಿಒ ಮಾವತ್ತೂರು ಗ್ರಾಪಂ