ಸಿಎಂ ಬಹುಪರಾಕ್‌ ವೇದಿಕೆಯಾದ ದಸರಾ ಸಮಾರಂಭ: ಎಸ್.ದತ್ತಾತ್ರಿ ಆರೋಪ

| Published : Oct 06 2024, 01:15 AM IST

ಸಿಎಂ ಬಹುಪರಾಕ್‌ ವೇದಿಕೆಯಾದ ದಸರಾ ಸಮಾರಂಭ: ಎಸ್.ದತ್ತಾತ್ರಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ನಿವೇಶನ ಹಿಂತಿರುಗಿಸಿದ್ದು, ಬಿಜೆಪಿ ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ಕುಂಠಿತವಾಗಿದೆ. ಸಿಎಂ ರಾಜೀನಾಮೆ ಸನ್ನಿಹಿತವಾಗಿದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯಾಧ್ಯಕ್ಷ ಎಸ್.ದತ್ತಾತ್ರಿ ಭವಿಷ್ಯ ನುಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಗತ್ಪ್ರಸಿದ್ಧ ಪಾರಂಪರಿಕ ಮೈಸೂರು ದಸರಾ ಉದ್ಘಾಟನಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ರಾಜಕೀಯ ಭಾಷಣಕ್ಕೆ ದುರ್ಬಳಕೆ ಮಾಡಿಕೊಂಡಿದ್ದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯಾಧ್ಯಕ್ಷ ಎಸ್.ದತ್ತಾತ್ರಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನವರಾತ್ರಿ ನಾಡಿನ ಸಂಸ್ಕೃತಿ, ಪರಂಪರೆ ಉಳಿಸುವ ಬಗ್ಗೆ ಮಾತನಾಡುವ ವೇದಿಕೆಯಲ್ಲಿ ಖ್ಯಾತ ಸಾಹಿತಿ ಡಾ.ಹಂಪನಾ, ಜಿ.ಟಿ.ದೇವೇಗೌಡ ಮೊದಲಾದವರು ಸಿಎಂಗೆ ಬಹುಪರಾಕ್ ಹಾಕಲು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಮುಂದಿನ 5 ವರ್ಷ ತಾವೇ ಮುಖ್ಯಮಂತ್ರಿಯಾಗಿರಲು ಶ್ರೀ ಚಾಮುಂಡಿ ದೇವಿಯು ಆಶೀರ್ವದಿಸುತ್ತಾಳೆ ಎನ್ನುವುದರ ಮೂಲಕ ದೇವರ ನಂಬದ, ನಾಸ್ತಿಕವಾದದ ಸಿಎಂ ಸಿದ್ದರಾಮಯ್ಯ ಅವರು ಆಸ್ತಿಕವಾದದೆಡೆ ವಾಲುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಾಸ್ತವವಾಗಿ ನಿವೇಶನವನ್ನು ಫಲಾನುಭವಿಗಳಿಗೆ ಮಂಜೂರು ಮಾಡುವ ಮುನ್ನ ಮುಡಾದಲ್ಲಿ ಚರ್ಚಿಸಿ ಠರಾವು ಅಂಗೀಕರಿಸಿದ ನಂತರವೇ ನೋಂದಣಿ ಮಾಡಬೇಕು. ಅದರಂತೆ ಫಲಾನುಭವಿಗಳು ನಿವೇಶನ ವಾಪಸ್ ಪಡೆಯುವ ಮುನ್ನ ಮುಡಾದಲ್ಲಿ ಠರಾವು ಅಂಗೀಕರಿಸಬೇಕು ಎಂಬ ನಿಯಮವಿದೆ. ಆದರೆ, ಇದರಲ್ಲಿ ಮುಡಾ ಯಾವುದನ್ನೂ ಪಾಲಿಸಿಲ್ಲ ಎಂದು ಆರೋಪಿಸಿದರು.

ತಮ್ಮ ಪಕ್ಷ ಸದಸ್ಯತಾ ಅಭಿಯಾನ ಆರಂಭಿಸಿದ್ದು ರಾಜ್ಯದಲ್ಲಿ 1.5 ಕೋಟಿ ಸದಸ್ಯತ್ವದ ಗುರಿ ಹೊಂದಿದೆ. ಇಲ್ಲಿಯವರೆಗೆ 40 ಲಕ್ಷ ಸದಸ್ಯತ್ವ ನೋಂದಣಿ ಯಾಗಿದೆ ಎಂಬ ಮಾಹಿತಿ ನೀಡಿದರು.

ಸಿಎಂ ರಾಜೀನಾಮೆ ಸನ್ನಿಹಿತ:ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಪ್ರಕರಣದಲ್ಲಿ ತಮ್ಮದೇನೂ ಪಾತ್ರ ಇಲ್ಲ ಎನ್ನುತ್ತಿದ್ದ ಸಿಎಂ, ಇ.ಡಿ. ಪ್ರವೇಶಿಸಿ ಇಸಿಐಆರ್ ದಾಖಲಿಸಿದ ತಕ್ಷಣ ನಿವೇಶನ ವನ್ನು ಮುಡಾಕ್ಕೆ ವಾಪಸ್ ಮಾಡುವುದರ ಮೂಲಕ ತಮ್ಮ ಬಣ್ಣ ಬಯಲು ಮಾಡಿಕೊಂಡಿದ್ದಾರೆ. ಸಿಎಂ ನಿವೇಶನ ಹಿಂತಿರುಗಿಸಿದ್ದು, ಬಿಜೆಪಿ ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ಕುಂಠಿತವಾಗಿದೆ. ಸಿಎಂ ರಾಜೀನಾಮೆ ಸನ್ನಿಹಿತವಾಗಿದೆ ಎಂದು ದತ್ತಾತ್ರಿ ಭವಿಷ್ಯ ನುಡಿದರು.

ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸೇರಿದಂತೆ ಬಿಜೆಪಿಯ ಕೆಲ ಶಾಸಕರು ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸುವ ಹೇಳಿಕೆ ನೀಡುತ್ತಿದ್ದು ಸದ್ಯದಲ್ಲೇ ಅಂಥವರ ವಿರುದ್ಧ ಬಿಜೆಪಿ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜ್ಞಾನೇಶ್ವರ್, ಜಗದೀಶ್, ಶಿವರಾಜ್, ವಿನ್ಸೆಂಟ್ ರೋಡ್ರಿಗಸ್, ವಿರೂಪಾಕ್ಷಪ್ಪ, ಹೃಷಿಕೇಶ್ ಪೈ.ಚಂದ್ರಶೇಖರ್ ಇದ್ದರು.