ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಮತ್ತು ಈ ಎಲ್ಲ ಅನಧಿಕೃತ ಇ-ಖಾತೆ ಗಳನ್ನು ರದ್ದುಪಡಿಸಬೇಕೆಂದು ಸಹಾಯಕ ಆಯುಕ್ತ ಪ್ರಕಾಶ ಕುದರೆ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
(ವಿಶೇಷ ವರದಿ)
ಕನ್ನಡಪ್ರಭ ವಾರ್ತೆ ಬೀದರ್ಸರ್ಕಾರಿ ಜಮೀನು, ರಸ್ತೆ ಹಾಗೂ ಪಾರ್ಕಿಂಗ್ ಸ್ಥಳಗಳಿಗೆ ಅಕ್ರಮ ಖಾತೆ ಸೃಷ್ಟಿಸಿ ಕೋಟಿ ಕೋಟಿ ಮೌಲ್ಯದ ಜಾಗ ಬಿಕರಿಗೆ ಮಾರಿರುವ, ಇ-ಆಸ್ತಿ ತಂತ್ರಾಂಶ ದುರುಪಯೋಗ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟವನ್ನುಂಟು ಮಾಡಿದ ಇ-ಆಸ್ತಿ ಖಾತಾ ಮಹಾ ಹಗರಣ ಬಸವಕಲ್ಯಾಣ ನಗರಸಭೆಯಲ್ಲಿ ನಡೆದಿರುವುದು ಬಯಲಿಗೆ ಬಂದಿದೆ.
ಬಸವಕಲ್ಯಾಣ ನಗರಸಭೆ ವ್ಯಾಪ್ತಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ, ಸರ್ಕಾರದ ಸುತ್ತೋಲೆಯಂತೆ ಲೇಔಟ್ನಲ್ಲಿ ಶೇ. 60ರಷ್ಟು ನಿವೇಶನಗಳನ್ನು ಮಾತ್ರ ಬಿಡುಗಡೆ ಮಾಡಲು ಅವಕಾಶವಿದ್ದರೂ, ಆ ಮಿತಿ ಯನ್ನು ಮೀರಿ ಹಾಗೂ ಬಿಡುಗಡೆಯಾಗದ ಉಳಿದ ನಿವೇಶನಗಳಿಗೂ ಸಹ ಕಾನೂನುಬಾಹಿರವಾಗಿ ಇ-ಖಾತೆಗಳನ್ನು ವಿತರಿಸಿ ಭಾರಿ ಹಗರಣ ಎಸಗಿರುವುದು ಸಹಾಯಕ ಆಯುಕ್ತ ಪ್ರಕಾಶ ಕುದರಿ ಅವರು ಅವರು ಸಲ್ಲಿಸಿರುವ ತನಿಖಾ ವರದಿಯಲ್ಲಿ ಎಲ್ಲವನ್ನೂ ಬಟಾಬಯಲು ಮಾಡಿದೆ.ನಾಗೇಶ ಮದಕಟ್ಟೆ, ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಜ್ಞಾನೇಶ್ವರ ಸಿಂಗಾರೆ ಹಾಗೂ ನವಾಜ್ ಅಹ್ಮದ್ ಖುರೇಶಿ ಎಂಬುವವರು ಸಲ್ಲಿಸಿದ್ದ ಗಂಭೀರ ದೂರುಗಳ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಡೆಸಲಾದ ವಿಚಾರಣೆಯಲ್ಲಿ ಬಸವಕಲ್ಯಾಣ ನಗರಸಭೆ ಪೌರಾಯುಕ್ತ ರಾಜು ಡಿ. ಬಣಕರ, ಪ್ರಭಾರ ಕಂದಾಯ ಅಧಿಕಾರಿ ಸುನೀಲ ಕುಮಾರ ವೀರಶೆಟ್ಟಿ ಹಾಗೂ ಪ್ರಭಾರ ಕಂದಾಯ ನಿರೀಕ್ಷಕ ಸೂರ್ಯಕಾಂತ ಶಾಖಾ ಅವರು ನಿಯಮಗಳನ್ನು ಸಂಪೂರ್ಣ ವಾಗಿ ಉಲ್ಲಂಘಿಸಿ ನಕಲಿ ಖಾತೆಗಳನ್ನು ವಿತರಿಸಿರುವುದು ಪತ್ತೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ನಗರ ಯೋಜನಾ ಪ್ರಾಧಿಕಾರದ ವರದಿ ಮತ್ತು ನಗರಾಭಿವೃದ್ಧಿ ಕೋಶದ ದಾಖಲೆಗಳನ್ನು ಪರಿಶೀಲಿಸಿದ ಸಹಾಯಕ ಆಯುಕ್ತರು, ಸರ್ಕಾರಿ ಜಮೀನು ಕಬಳಿಕೆದಾರರು ಮತ್ತು ಅನಧಿಕೃತ ಲೇಔಟ್ ಮಾಲೀಕರೊಂದಿಗೆ ಅಧಿಕಾರಿಗಳು ಶಾಮೀ ಲಾಗಿ ಕೋಟ್ಯಂತರ ರುಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಖಾಸಗಿಯವರ ಹೆಸರಿಗೆ ವರ್ಗಾಯಿಸಲು ನೆರವಾಗಿದ್ದಾರೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.ತ್ರಿಪುರಾಂತ ಗ್ರಾಮದ ಸರ್ವೆ ಸಂಖ್ಯೆ 220 ರ ಒಟ್ಟು 5 ಎಕರೆ 30 ಗುಂಟೆ ಜಮೀನಿನ ಪೈಕಿ ಶೇ. 60ರಷ್ಟು ಬಿಡುಗಡೆ ಆದೇಶ ದಲ್ಲಿ ಸೇರದಿರುವ ಪ್ಲಾಟ್ ಸಂಖ್ಯೆ 30 ಮತ್ತು 85 ಕ್ಕೆ ಮ್ಯೂಟೇಷನ್ ಆದೇಶ ಜಾರಿ ಮಾಡಿ ಅಕ್ರಮವಾಗಿ ಇ-ಖಾತೆ ನೀಡ ಲಾಗಿದೆ. ನಾರಾಯಣಪುರ ಗ್ರಾಮದ ಸರ್ವೆ ಸಂಖ್ಯೆ 46/3 ರ 2 ಎಕರೆ 23 ಗುಂಟೆ ಜಮೀನಿನಲ್ಲಿ ಏಕ ನಿವೇಶನ ವಿನ್ಯಾಸಕ್ಕೆ ಅನುಮೋದನೆ ಪಡೆದು, ಮಹಾಯೋಜನೆಗೆ ಕಾಯ್ದಿರಿಸಿದ ರಸ್ತೆ ಜಾಗವನ್ನು ನಗರಸಭೆಗೆ ಹಸ್ತಾಂತರಿಸದೇ ಮತ್ತು ಸಂಬಂಧಿತ ಶುಲ್ಕ ಪಾವತಿಸದೇ ಇದ್ದರೂ ಮಿತಿಯನ್ನು ಮೀರಿ ಬಹು ನಿವೇಶನಗಳಿಗೆ ಖಾತೆ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತ್ರಿಪುರಾಂತ ಗ್ರಾಮದ ಸರ್ವೆ ಸಂಖ್ಯೆ 51/6 ಮತ್ತು 52/1ರ ಜಮೀನುಗಳು ಬಸವಕಲ್ಯಾಣ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲೇ ಬರುವುದಿಲ್ಲವಾದರೂ, ತಂತ್ರಾಂಶದ ದುರುಪಯೋಗಪಡಿಸಿಕೊಂಡು ಅಕ್ರಮ ಖಾತೆ ಜಾರಿ ಮಾಡಲಾಗಿದೆ. ತ್ರಿಪುರಾಂತ ಸರ್ವೆ ಸಂಖ್ಯೆ 59/1 ಮತ್ತು ಸರ್ವೆ ಸಂಖ್ಯೆ 106/ಬಿ ಜಮೀನುಗಳಿಗೆ ನಗರ ಯೋಜನಾ ಪ್ರಾಧಿಕಾರದ ವಿನ್ಯಾಸ ಅನುಮೋದನೆಯೇ ಇಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಸರ್ವೆ ಸಂಖ್ಯೆ 135/1 ರ ಒಟ್ಟು 4 ಎಕರೆ 39 ಗುಂಟೆ ಜಮೀನಿನಲ್ಲಿ ಪ್ರಾಧಿಕಾರದಿಂದ ಬಿಡುಗಡೆಯಾದ ನಿವೇಶನಗಳ ಮಿತಿಯನ್ನು ಮೀರಿ, ಉಳಿದ ಕಾಯ್ದಿರಿಸಿದ ನಿವೇಶನಗಳಿಗೂ ಕಾನೂನುಬಾಹಿರವಾಗಿ ಖಾತೆ ನೀಡಲಾಗಿದೆ ಎಂದು ಹೇಳಲಾಗಿದೆ.ಅದೇ ರೀತಿ ಬಸವಕಲ್ಯಾಣದ ಸರ್ವೆ ಸಂಖ್ಯೆ 34/9 ರ 4 ಎಕರೆ 16 ಗುಂಟೆ ಜಮೀನಿಗೆ ವಿನ್ಯಾಸ ಅನುಮೋದನೆ ಶುಲ್ಕವನ್ನೇ ಪಾವತಿಸದಿದ್ದರೂ ಖಾತೆ ವಿತರಿಸಲಾಗಿದೆ. ವಿನ್ಯಾಸ ಬಿಡುಗಡೆ ಮಿತಿಯನ್ನು ಮೀರಿ ಅಕ್ರಮ ಖಾತೆ ಸೃಷ್ಟಿಸಲಾಗಿದೆ. ಸರ್ವೆ ಸಂಖ್ಯೆ 4/1ಸಿ ರ 11 ಗುಂಟೆ ಜಮೀನಿನಲ್ಲಿ ಏಕ ನಿವೇಶನಕ್ಕೆ ಮಾತ್ರ ಅನುಮತಿ ಇದ್ದರೂ ಬಹು ನಿವೇಶನಗಳ ಖಾತೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಮತ್ತು ಈ ಎಲ್ಲ ಅನಧಿಕೃತ ಇ-ಖಾತೆ ಗಳನ್ನು ರದ್ದುಪಡಿಸಬೇಕೆಂದು ಸಹಾಯಕ ಆಯುಕ್ತ ಪ್ರಕಾಶ ಕುದರೆ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.---
ಒಂದೇ ಸರ್ವೆ ನಂಬರಿನಲ್ಲಿ 200ಅಕ್ರಮ ಇ-ಖಾತೆ ಪ್ರತಿಗಳ ಸೃಷ್ಟಿ!
ಸರ್ವೆ ಸಂಖ್ಯೆ 159/1, 159/2 ಮತ್ತು 159/3ರ ಜಮೀನುಗಳಿಗೆ ಲೇಔಟ್ ಅನುಮೋದನೆ ಇಲ್ಲದಿದ್ದರೂ ಮತ್ತು ಯಾವುದೇ ಅಧಿಕೃತ ಕ್ರಯಪತ್ರ ಇಲ್ಲದಿದ್ದರೂ ಒಂದೇ ಸರ್ವೆ ನಂಬರಿನಲ್ಲಿ ಸುಮಾರು 100 ರಿಂದ 200 ಅಕ್ರಮ ಇ-ಖಾತೆ ಪ್ರತಿಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ನೀಡಿ ವಂಚಿಸಲಾಗಿದೆ ಎಂದು ವರದಿಯಲ್ಲಿ ಭ್ರಷ್ಚಾಚಾರವನ್ನು ಬಯಲಿಗೆ ಎಳೆಯಲಾಗಿದೆ.