ಕನ್ನಡಪ್ರಭ ವಾರ್ತೆ ಬೀಳಗಿ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಇಡಿ, ಸಿಬಿಐ ಮತ್ತು ಚುನಾವಣಾ ಆಯೋಗಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಜನಪರ ನಾಯಕರ ಮೇಲೆ ಇಡಿ ದಾಳಿ ನಡೆಸುವ ಮೂಲಕ ಭಯದ ವಾತಾವರಣ ಸೃಷ್ಟಿಸುತ್ತಿದೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತನ್ನ ಅಧಿಕಾರದ ಬಲದಿಂದ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಜೆ.ಟಿ.ಪಾಟೀಲ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ಕೇಂದ್ರದ ಬಿಜೆಪಿ ಸರ್ಕಾರ ದೇಶದ ಇಡಿ, ಸಿಬಿಐ ಮತ್ತು ಚುನಾವಣಾ ಆಯೋಗಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಜನಪರ ನಾಯಕರ ಮೇಲೆ ಇಡಿ ದಾಳಿ ನಡೆಸುವ ಮೂಲಕ ಭಯದ ವಾತಾವರಣ ಸೃಷ್ಟಿಸುತ್ತಿದೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತನ್ನ ಅಧಿಕಾರದ ಬಲದಿಂದ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಜೆ.ಟಿ.ಪಾಟೀಲ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿರುವ ಅವರು, ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಡಿ.ಕೆ.ಶಿವಕುಮಾರ್ ನಂತರ, ಇದೀಗ ನಮ್ಮ ನಾಡಿನ ನಾಯಕ ಸತೀಶ್ ಜಾರಕಿಹೊಳಿ ಅವರನ್ನು ತೇಜೋವಧೆ ಮಾಡಲು ಮತ್ತು ಮಾನಸಿಕವಾಗಿ ಕುಗ್ಗಿಸಲು ಇಡಿ ಮೂಲಕ ಸಂಚು ರೂಪಿಸಲಾಗಿದೆ. ಶಾಸಕಾಂಗ ಹಾಗೂ ಆಡಳಿತ ವ್ಯವಸ್ಥೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಕೇಂದ್ರದ ಈ ರೀತಿಯ ನಡವಳಿಕೆಯನ್ನು ನಾವೆಲ್ಲರೂ ಒಗ್ಗಟ್ಟಿನಿಂದ ವಿರೋಧಿಸುತ್ತೇವೆ ಎಂದರು.
ಇವಿಎಂ ಯಂತ್ರಗಳ ಗೊಂದಲ, ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ ಮಾಡುವುದು ಹಾಗೂ ಹೆದರಿಸಿ ಪಕ್ಷಾಂತರ ಮಾಡಿಸುವ ಕುತಂತ್ರ ನಡೆದಿದೆ. ಮುಂಬರುವ ಚುನಾವಣೆಗಳಲ್ಲಿ ನಾಡಿನ ಹಾಗೂ ದೇಶದ ಜಾಗೃತ ಮತದಾರರು ಇಂತಹ ಅನ್ಯಾಯಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸಚಿವರಾದ ಸತೀಶ್ ಜಾರಕಿಹೊಳಿ ಅವರ ಬೆನ್ನಿಗೆ ಎಲ್ಲಾ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಬಂಡೆಯಂತೆ ನಿಲ್ಲಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಬೆಳಗಾವಿ ಪ್ರಾಂತ ಸಂಚಾಲಕ ಮಹಾದೇವ ಹಾದಿಮನಿ ಮಾತನಾಡಿ, ಕೇಂದ್ರ ಸರ್ಕಾರ ಇಡಿ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಸಚಿವ ಸತೀಶ್ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಅಹಿಂದ ನಾಯಕರ ತೇಜೋವಧೆಗೆ ಯತ್ನಿಸಲಾಗುತ್ತಿದೆ. ಈ ಅಘೋಷಿತ ತುರ್ತು ಪರಿಸ್ಥಿತಿಯ ವಿರುದ್ಧ ನಾವೆಲ್ಲರೂ ಜಾರಕಿಹೊಳಿ ಅವರಿಗೆ ನೈತಿಕ ಹಾಗೂ ಹೋರಾಟದ ಮೂಲಕ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಪಡಿಯಪ್ಪ ಕರಿಗಾರ, ಸಂಗಪ್ಪ ಕಂದಗಲ್, ಸಿದ್ದು ಸಾರಾವರಿ, ಬಸವರಾಜ್ ಹಳ್ಳದಮನಿ, ರವಿ ಪಾಟೀಲ, ಅನೀಲ ಹಲ್ಯಾಳ, ಯಲ್ಲಪ್ಪ ಮೇಟಿ, ಸಿಕಂದರ್ ಹುದ್ದಾರ, ಅನಿಲ್ ಗಚ್ಚಿನಮನಿ, ಟಿ.ವೈ.ಜಾನಮಟ್ಟಿ, ರಾಜು ಬೋರ್ಜಿ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
----ಕೋಟ್
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಬಿಜೆಪಿ ಮುಖಂಡರನ್ನು ಪರಿಶುದ್ಧರೆಂದು ಬಿಂಬಿಸಿ, ಎದುರಾಳಿ ನಾಯಕರನ್ನು ಸಂಸ್ಥೆಗಳ ಮೂಲಕ ಸದೆಬಡಿಯಲು ಯತ್ನಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಸೇರಿದಂತೆ ನಾನಾ ರಾಜ್ಯಗಳಲ್ಲಿ ಭ್ರಷ್ಟಾಚಾರದ ಆರೋಪ ಹೊಂದಿದ್ದ ನೂರಾರು ನಾಯಕರು ಬಿಜೆಪಿ ಸೇರಿದ ತಕ್ಷಣ ಪಾವನರಾಗಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಇಸಿ, ಇಡಿ, ಸಿಬಿಐ ಹಾಗೂ ಆರ್‌ಬಿಐನಂತಹ ಸ್ವತಂತ್ರ ತನಿಖಾ ಸಂಸ್ಥೆಗಳು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ಸ್ಥಿತಿ ನಿರ್ಮಾಣವಾಗಿದೆ.ಜೆ.ಟಿ.ಪಾಟೀಲ, ಶಾಸಕ