ಬೆಂಗಳೂರಿನ ದೇವನಹಳ್ಳಿ ಸಮೀಪದ ಪೂಜೇನಹಳ್ಳಿಯಲ್ಲಿ ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ (ಕೆಪೆಕ್) ಕೋಲ್ಡ್ ಸ್ಟೋರೇಜ್ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ವಿಧಾನಪರಿಷತ್‌ನ ಮಾಜಿ ಸದಸ್ಯರೂ ಆಗಿರುವ ಫಿಜ್ ಗ್ಲೋಬಲ್ ಆಗ್ರೋ ವೆಂಚರ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಬಿ.ಎಂ.ಫಾರೂಕ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನ ದೇವನಹಳ್ಳಿ ಸಮೀಪದ ಪೂಜೇನಹಳ್ಳಿಯಲ್ಲಿ ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ (ಕೆಪೆಕ್) ಕೋಲ್ಡ್ ಸ್ಟೋರೇಜ್ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ವಿಧಾನಪರಿಷತ್‌ನ ಮಾಜಿ ಸದಸ್ಯರೂ ಆಗಿರುವ ಫಿಜ್ ಗ್ಲೋಬಲ್ ಆಗ್ರೋ ವೆಂಚರ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಬಿ.ಎಂ.ಫಾರೂಕ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಅವರು ಈ ನೋಟಿಸ್‌ ನೀಡಿದ್ದು, ಬರುವ ಏ.2 ರೊಳಗೆ ಉತ್ತರಿಸದಿದ್ದರೆ ನೇರವಾಗಿ ಕೋಲ್ಡ್ ಸ್ಟೋರೇಜ್ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಒಪ್ಪಂದದ ಅನುಸಾರ ಕಂಪನಿಯು ರೈತರಿಗೆ ಸರಿಯಾದ ಸೇವೆ ಒದಗಿಸುತ್ತಿಲ್ಲ. ಅನುಭವಿ ಕೆಲಸಗಾರರನ್ನು ನೇಮಿಸಿಕೊಂಡಿಲ್ಲ. ಅನೇಕ ಬಾರಿ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಈ ಎಲ್ಲದರಿಂದಾಗಿ ಕೋಲ್ಡ್‌ ಸ್ಟೋರೇಜ್‌ ದುರ್ಬಳಕೆ ಸಂಬಂಧ ನೋಟಿಸ್‌ ಜಾರಿ ಮಾಡಲಾಗಿದೆ. ಅಲ್ಲದೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಸ್ಟೋರೇಜ್‌ಗಾಗಿ ಇರುವ ಈ ಸ್ಥಳದಲ್ಲಿ ನಾಲ್ಕು ಲೋಡ್ ರೆಡಿಮೇಡ್ ಬಟ್ಟೆ ಹಾಗೂ ಮಸಾಲ ಪದಾರ್ಥಗಳು ದಾಸ್ತಾನು ಇಡಲಾಗಿತ್ತು. ಇತ್ತೀಚೆಗೆ ಜಿಎಸ್ಟಿ ಅಧಿಕಾರಿಗಳು ದಾಳಿ ನಡೆಸಿ ಕೋಲ್ಡ್ ಸ್ಟೋರೇಜ್‌ ಜಪ್ತಿ ಮಾಡಿದ್ದರು. ಜೊತೆಗೆ, ಒಪ್ಪಂದದ ಪ್ರಕಾರ ಸರ್ಕಾರಕ್ಕೆ ಪಾವತಿಸಬೇಕಾದ ₹2.48 ಕೋಟಿ ಬಾಕಿ ಸೇರಿ, ಅನೇಕ ನಿಯಮಗಳ ಉಲ್ಲಂಘನೆ ಉಲ್ಲೇಖಿಸಿ ನೋಟಿಸ್ ಜಾರಿ ಮಾಡಲಾಗಿದೆ.

ಕೃಷಿ ಉತ್ಪನ್ನಗಳಾದ ತರಕಾರಿ ಮತ್ತು ಹಣ್ಣು ರಫ್ತು ಮಾಡಲು ಅನುಕೂಲವಾಗುವಂತೆ ಪೂಜೇನಹಳ್ಳಿ ಬಳಿ ನಾಲ್ಕು ಎಕರೆ ಜಮೀನಿನಲ್ಲಿ ₹27.50 ಕೋಟಿ ವೆಚ್ಚದಲ್ಲಿ ಕೆಪೆಪ್‌ ಈ ಕೋಲ್ಡ್ ಸ್ಟೋರೇಜ್ ಸ್ಥಾಪಿಸಿದೆ. 2024ರ ಏಪ್ರಿಲ್‌ನಿಂದ ನಿಗಮವು ಈ ಕೋಲ್ಡ್ ಸ್ಟೋರೇಜ್ ಕಾರ್ಯಾಚರಣೆ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಬಿ.ಎಂ.ಫಾರೂಕ್ ಒಡೆತನದ ಫಿಜ್ ಗ್ಲೋಬಲ್ ಆಗ್ರೋ ವೆಂಚರ್ ಕಂಪನಿಗೆ ವಹಿಸಿತ್ತು. ರೈತರಿಗೆ ಸೇವೆ ಒದಗಿಸುವ ಜೊತೆಗೆ ಕೆಪೆಕ್‌ಗೆ ತಮ್ಮ ಕಂಪನಿಯಿಂದ ವಾರ್ಷಿಕ ₹1.55 ಕೋಟಿ ಪಾವತಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಈವರೆಗೆ ₹18.29 ಲಕ್ಷ ಮಾತ್ರ ಪಾವತಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಬಿ.ಎಂ.ಫಾರೂಕ್ ನೀಡಿದ್ದ ₹1 ಕೋಟಿ ಮೊತ್ತದ ಬ್ಯಾಂಕ್ ಗ್ಯಾರಂಟಿ ಮುಟ್ಟುಗೋಲು ಹಾಕಿಕೊಂಡ ಕೆಪೆಕ್, ಕೋಲ್ಡ್ ಸ್ಟೋರೇಜ್ ತೆರವು ಮಾಡುವಂತೆ ಆದೇಶಿಸಿತ್ತು.