ಹೋರಾಟದ ಹೆಸರಿನಲ್ಲಿ ವೇದಿಕೆ ದುರುಪಯೋಗ: ನಾರಾಯಣಗೌಡ

| Published : Nov 06 2025, 02:45 AM IST

ಸಾರಾಂಶ

ಕೆಲವು ವ್ಯಕ್ತಿಗಳಿಂದ ಕರ್ನಾಟಕ ರಕ್ಷಣಾ ವೇದಿಕೆಗೆ ಅಪಚಾರ ಉಂಟಾಗುತ್ತಿದೆ ಎಂದು ನಾರಾಯಣ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ರಾಜ್ಯದಲ್ಲಿ ಕೆಲವು ವ್ಯಕ್ತಿಗಳಿಂದ ಕರ್ನಾಟಕ ರಕ್ಷಣಾ ವೇದಿಕೆಗೆ ಅಪಚಾರ ಉಂಟಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಹಲವೆಡೆ ನಕಲಿ ರಕ್ಷಣಾ ವೇದಿಕೆ ಹುಟ್ಟಿಕೊಂಡು ಹೋರಾಟದ ಹೆಸರಿನಲ್ಲಿ ವೇದಿಕೆಯನ್ನು ದುರುಪಯೋಗಪಡಿಸುತ್ತಿದ್ದಾರೆ. ನ್ಯಾಯಾಲಯದಿಂದ ಈ ಬಗ್ಗೆ ಆಕ್ಷೇಪಣೆ ಇದ್ದರೂ ವೇದಿಕೆ ಹೆಸರನ್ನು ಬಳಸುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು. ಯಾವುದೇ ರೀತಿಯ ಕನ್ನಡಪರ ಹೋರಾಟ ಮಾಡುವುದರಲ್ಲಿ ಸಂಘಟನೆಗಳಿಗೆ ಬೇರೆ ಹೆಸರನ್ನು ಇಟ್ಟುಕೊಳ್ಳಲಿ ಎಂದು ಸಲಹೆ ನೀಡಿದರು.ಕರ್ನಾಟಕ ರಕ್ಷಣಾ ವೇದಿಕೆಗೆ 27 ವರ್ಷಗಳು ಸಂದಿದ್ದು ರಾಜ್ಯದ 31 ಜಿಲ್ಲೆಗಳಲ್ಲಿ ನಾಡಿನ ಭಾಷೆ ನೆಲ ಜಲ ವಿಷಯದಲ್ಲಿ ಹೋರಾಟ ಮಾಡುತ್ತಿದೆ. ಸುಮಾರು 78 ಲಕ್ಷ ಸದಸ್ಯರನ್ನು ಹೊಂದಿದ್ದು ಮೂರು ಲಕ್ಷ ಮಹಿಳೆಯರು ವೇದಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಆಳುವ ಸರ್ಕಾರಗಳು ರಾಜ್ಯದ ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರದ ಬಗ್ಗೆ ಇಚ್ಛಾಶಕ್ತಿ ಹೊಂದಿಲ್ಲ ಎಂದ ಅವರು ಪ್ರಜ್ಞಾವಂತ ರಾಜಕಾರಣಿಗಳ ಕೊರತೆ ಎದುರಾಗಿದೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲರಾಗಿದ್ದಾರೆ ರಾಜ್ಯದ ಉದ್ಯೋಗ ಸಮಸ್ಯೆ ಜಲ ಸಮಸ್ಯೆ ಗಡಿ ಸಮಸ್ಯೆ ಪರಿಹಾರ ಕಾಣುವಲ್ಲಿ ಕೂಡ ವೈಫಲತೆ ಎದ್ದು ಕಾಣುತ್ತಿದೆ ಎಂದರು.

ಸ್ಥಳೀಯರಿಗೆ ಅನ್ಯಾಯ: ಪ್ರಸಕ್ತ ಉತ್ತರ ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ರಾಜ್ಯಕ್ಕೆ ಬರುತ್ತಿದ್ದು ಇದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಅನ್ಯಾಯ ಉಂಟಾಗುತ್ತಿದೆ ಎಂದರು.ಡಾ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಹಲವು ಬಾರಿ ಆಗ್ರಹ ವ್ಯಕ್ತಪಡಿಸಲಾಗಿದೆ. ಆದರೆ ಕೆಲವರ ವಿರೋಧದಿಂದ ಸಮಿತಿ ವರದಿ ಅನುಷ್ಠಾನಗೊಂಡಿಲ್ಲ ಎಂದರು. ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಹೇರಿಕೆ ಮಾಡಿರುವುದು ಸರಿಯಲ್ಲ ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ ಎಂದು ಹೇಳಿದ ಅವರು ದ್ವಿ ಭಾಷಾ ಸೂತ್ರ ಜಾರಿ ಆಗಬೇಕಾಗಿದೆ ಎಂದು ಆಗ್ರಹಿಸಿದರು.ತಾನು ಕರ್ನಾಟಕ ರಕ್ಷಣಾ ವೇದಿಕೆ ಮೂಲಕ ಕಳೆದ ನಾಲ್ಕು ದಶಕಗಳಿಂದ ಕನ್ನಡ ಪರ ಹೋರಾಟ ನಡೆಸುತ್ತಿದ್ದು ತನ್ನ ಮೇಲೆ ಕನ್ನಡದ ಹೋರಾಟ ಪರಿಣಾಮ ಸರ್ಕಾರಗಳು ಇದುವರೆಗೆ ಒಟ್ಟು 42 ಪ್ರಕರಣಗಳನ್ನು ದಾಖಲಿಸಲಾಗಿದೆ.

ಏಳು ಬಾರಿ ಜೈಲಿಗೆ ಹೋಗುವ ಪರಿಸ್ಥಿತಿ ಉಂಟಾಗಿತ್ತು ಎಂದು ಹೇಳಿದರು. ಬೇಡಿಕೆಗಳಿಗೆ ಸ್ಪಂದನೆ:

ಕನ್ನಡದ ವಿಚಾರದಲ್ಲಿ ಧ್ವನಿ ಗಟ್ಟಿಯಾಗಿದ್ದು ರಾಜೀ ಮಾಡುವ ಪರಿಸ್ಥಿತಿಗೆ ಹೋಗುವುದಿಲ್ಲ. ಪ್ರಸಕ್ತ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಕನ್ನಡ ವಿಚಾರದಲ್ಲಿ ಕಾಳಜಿ ಹೊಂದಿದ್ದು ಬಹುತೇಕ ಬೇಡಿಕೆಗಳಿಗೆ ಸ್ಪಂದನೆ ನೀಡಿದ್ದಾರೆ ಎಂದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದ ನಾರಾಯಣಗೌಡ ಅವರು ತೆರಿಗೆ ಕಟ್ಟುವಲ್ಲಿ ದೇಶದಲ್ಲಿ ಎರಡನೇ ಸ್ಥಾನ ಹೊಂದಿರುವ ರಾಜ್ಯಕ್ಕೆ ಶೇ. 50ರಷ್ಟು ಅನುದಾನ ನೀಡಬೇಕು ಎಂದರು.ಜೀವನದಿ ಕಾವೇರಿ ಸೇರಿದಂತೆ ರಾಜ್ಯದ ಬಹುತೇಕ ನದಿಗಳು ಕಲುಷಿತಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ನಾರಾಯಣಗೌಡ ಅವರು ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ನದಿ ಸಂರಕ್ಷಣೆ ವಿಷಯದಲ್ಲಿ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರಾಜ್ಯದ ರಾಜಧಾನಿ ಬೆಂಗಳೂರಿಗೆ ಸೇರಿದಂತೆ ವಿವಿಧ ನಗರಗಳಿಗೆ ಕಾವೇರಿ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಜೀವನದಿ ಕಾವೇರಿಯ ಉಳಿವು ಮತ್ತು ರಕ್ಷಣೆ ಗೆ ಸರ್ಕಾರ ಒತ್ತು ನೀಡಬೇಕು ಎಂದ ಅವರು ಜಿಲ್ಲೆಯಲ್ಲಿ ಕಾವೇರಿ ನದಿ ಸ್ವಚ್ಛತೆಗೆ ನಡೆಯುತ್ತಿರುವ ಅಭಿಯಾನಕ್ಕೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು. ಸರ್ಕಾರದ ಗಮನ ಸೆಳೆಯಲು ಕಾರ್ಯಕ್ರಮ ರೂಪಿಸಲಾಗುವುದು ಎಂದರು.ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕಿ ದೀಪ ಪೂಜಾರಿ ಕೊಡಗು ಜಿಲ್ಲಾ ನೂತನ ಅಧ್ಯಕ್ಷರಾದ ಕೆ ಪಿ ರಾಜು ಮಹಿಳಾ ಅಧ್ಯಕ್ಷೆ ಜ್ಯೋತಿ ಇದ್ದರು.