ಆರ್‌ಟಿಐ ಕಾಯ್ದೆ ದುರ್ಬಳಕೆ ತಡೆದು, ಕಿರುಕುಳ ತಪ್ಪಿಬೇಕು

| Published : Jul 20 2025, 01:15 AM IST

ಸಾರಾಂಶ

ಕೆಲವು ಮಾಹಿತಿ ಹಕ್ಕುದಾರರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತ, ಆರ್‌ಟಿಐ ಕಾಯ್ದೆ ದುರುಪಯೋಗ ಮಾಡಿಕೊಳ್ಳುತ್ತಿರುವ ಹಿನ್ನೆಲೆ ಅಂಥವರ ಆಸ್ತಿಯನ್ನು ತನಿಖೆಗೊಳಪಡಿಸಿ, ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಿಗೆ ದೂಡಾ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.

- ರಾಜ್ಯ ಮಾಹಿತಿ ಹಕ್ಕು ಆಯೋಗ ಆಯುಕ್ತರಿಗೆ ದಿನೇಶ ಶೆಟ್ಟಿ ಒತ್ತಾಯ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೆಲವು ಮಾಹಿತಿ ಹಕ್ಕುದಾರರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತ, ಆರ್‌ಟಿಐ ಕಾಯ್ದೆ ದುರುಪಯೋಗ ಮಾಡಿಕೊಳ್ಳುತ್ತಿರುವ ಹಿನ್ನೆಲೆ ಅಂಥವರ ಆಸ್ತಿಯನ್ನು ತನಿಖೆಗೊಳಪಡಿಸಿ, ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಿಗೆ ದೂಡಾ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಮಾಹಿತಿ ಹಕ್ಕುಗಳ ಆಯೋಗದ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ದಿನೇಶ ಕೆ. ಶೆಟ್ಟಿ ಮಾತನಾಡಿ, ದಾವಣಗೆರೆ ನಗರ, ಜಿಲ್ಲೆಯಲ್ಲಿ ಈಚೆಗೆ ಕೆಲವು ಮಾಹಿತಿ ಹಕ್ಕುದಾರರು ಕೆಲವು ಅಧಿಕಾರಿಗಳ ಕುಮ್ಮಕ್ಕಿನಿಂದ ಅಧಿಕಾರಿಗಳನ್ನು ಗುರಿಯಾಗಿಸಿ, ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವ ಮೂಲಕ ಕಾಯ್ದೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಮಾಹಿತಿ ಹಕ್ಕುದಾರರ ಆಸ್ತಿ ವಿವರಣೆಯನ್ನು ಆಯೋಗವು ಪಡೆದು, ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರಗಳ ನಗರ ವ್ಯಾಪ್ತಿಯಲ್ಲಿ ಕೆಲವರು ಮಾಹಿತಿ ಹಕ್ಕು ಕಾಯ್ದೆ ಹೆಸರಿನಲ್ಲಿ ಆರ್‌ಟಿಐ ಕಾರ್ಯಕರ್ತರೆಂದು 30ರಿಂದ 40 ವರ್ಷ ಹಳೆಯ ಕಟ್ಟಡಗಳ ಮೂಲಕ ದಾಖಲೆಗಳ ಮಾಹಿತಿ ಕೇಳಿ, ಪಾಲಿಕೆ ಅಧಿಕಾರಿಗಳನ್ನು ಕಟ್ಟಡಗಳ ಬಳಿಗೆ ಕಳಿಸಿ, ಮಾಲೀಕರಿಗೆ ಹೆದರಿಸಿ, ಅಂತಹವರಿಂದ ಹಣ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇಂತಹ ಕೆಲವು ಮಾಹಿತಿ ಹಕ್ಕುದಾರರ ವಿರುದ್ಧ ಆಯೋಗ ಸೂಕ್ತ ಕ್ರಮ ಜರುಗಿಸಲಿ ಎಂದು ತಿಳಿಸಿದರು.

ಕೆಲ ಮಾಹಿತಿ ಹಕ್ಕುದಾರರು ಕಳೆದೊಂದು ದಶಕದಿಂದ ಎಷ್ಟು ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ, ಎಷ್ಟು ಕಟ್ಟಡಗಳನ್ನು ಕೆಡವಲು ಆದೇಶ ಮಾಡಿಸಿದ್ದಾರೆಂಬ ಬಗ್ಗೆಯೂ ಆಯೋಗ ಮಾಹಿತಿ ಪಡೆಯಲಿ. ಅಂತಹ ಆರ್‌ಟಿಐ ಕಾರ್ಯಕರ್ತರ ವೈಯಕ್ತಿಕ ಹಿನ್ನಲೆ ಸಹ ಪರಿಶೀಲನೆಗೊಳಪಡಿಸಬೇಕು. ಇಂಥವರಿಂದಾಗಿ ಅಧಿಕಾರಿ, ನೌಕರರು ಭಯದಿಂದ ಕೆಲಸ ಮಾಡುವಂತಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ದಿನೇಶ ಶೆಟ್ಟಿ ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಅಯೂಬ್ ಖಾನ್‌, ಎ.ನಾಗರಾಜ, ಉದಯಕುಮಾರ, ಲಿಯಾಖತ್ ಅಲಿ, ಜಿ.ರಾಕೇಶ ಗಾಂಧಿ ನಗರ, ಮೊಹಮ್ಮದ್ ಮುಜಾಹಿದ್‌, ಷಫೀಕ್ ಪಂಡಿತ್, ಎಚ್‌.ಜೆ.ಮೈನುದ್ದೀನ್, ರಾಘವೇಂದ್ರ ಗೌಡ, ಸೈಯದ್ ಜಿಕ್ರಿಯಾ, ದಾಕ್ಷಾಯಣಮ್ಮ, ಎಂ.ಎಚ್.ಮಂಜುಳಾ, ಮಂಜಮ್ಮ, ಫಯಾಜ್‌, ಟಿ.ಎಂ.ರಾಜೇಶ್ವರಿ, ಶ್ರೀಕಾಂತ, ಅಯೂಬ್ ಖಾನ್, ಕಾವ್ಯ ಇತರರು ಇದ್ದರು.

- - -

(ಕೋಟ್‌) ಕೆಲವು ಅಧಿಕಾರಿಗಳು, ನೌಕರರು ಸಹ ಆರ್‌ಟಿಐ ಕಾರ್ಯಕರ್ತರ ಜೊತೆಗೆ ಶಾಮೀಲಾಗಿ, ಕೆಲವು ಮಾಹಿತಿಗಳನ್ನು ಅಕ್ರಮವಾಗಿ ನೀಡುತ್ತಿದ್ದಾರೆ. ಹೀಗೆ ಸರ್ಕಾರದ ಗೌಪ್ಯ ಮಾಹಿತಿಗಳು ಸಹ ಸಾರ್ವಜನಿಕಗೊಳ್ಳುವ ಸಂಭವವಿದೆ. ಇಂಥವರ ವಿರುದ್ಧವೂ ಆಯೋಗವು ಕಠಿಣ ಕ್ರಮ ಕೈಗೊಳ್ಳಬೇಕು.

- ದಿನೇಶ್‌ ಕೆ. ಶೆಟ್ಟಿ, ಕಾಂಗ್ರೆಸ್‌ ಮುಖಂಡ

- - -

-19ಕೆಡಿವಿಜಿ1.ಜೆಪಿಜಿ:

ದಾವಣಗೆರೆ ಡಿಸಿ ಕಚೇರಿಯಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗ ಆಯುಕ್ತರಿಗೆ ಕಾಂಗ್ರೆಸ್ ಪಕ್ಷದಿಂದ ದಿನೇಶ ಕೆ. ಶೆಟ್ಟಿ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.