ಹಗರಿಬೊಮ್ಮನಹಳ್ಳಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ನಾನಾ ದಲಿತ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾರಂಭ ನಡೆಯಿತು.

ಹಗರಿಬೊಮ್ಮನಹಳ್ಳಿ: ಮುಂದಿನ ವರ್ಷದ ಅಂಬೇಡ್ಕರ್ ಜಯಂತಿಯಂದು ಕಂಚಿನ ಪುತ್ಥಳಿ ಸಹಿತ ಅಂಬೇಡ್ಕರ್ ವೃತ್ತವನ್ನು ಲೋಕಾರ್ಪಣೆ ಮಾಡಲಾಗುತ್ತದೆ. ₹೬೫ ಲಕ್ಷ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕರಾದ ನೇಮರಾಜ್ ನಾಯ್ಕ ಪ್ರಕಟಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ತಾಲೂಕು ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಮತ್ತು ನಾನಾ ದಲಿತ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರ ಮೀಸಲಾತಿಯ ಜಾರಿಯಿಂದಾಗಿ ಕಳೆದ ಹತ್ತು ವರ್ಷ ಕ್ಷೇತ್ರದ ಶಾಸಕರಾಗಿದ್ದವರು, ಅಂಬೇಡ್ಕರ್‌ ವೃತ್ತ ನಿರ್ಮಾಣ ಮಾಡದೇ ದಲಿತ ಅಸ್ಮಿತೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಸಾವಿರಾರು ಕೋಟಿ ಎಸ್.ಇ.ಪಿ. ಮತ್ತು ಟಿ.ಎಸ್.ಪಿ. ಅನುದಾನ ದುರ್ಬಳಕೆಯಾಗಿದೆ. ಪರಿಶಿಷ್ಟರ ಕಲ್ಯಾಣ ಕಾಗದದಲ್ಲಿಯೇ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

೨೦೨೯ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಗೆ ನರೇಂದ್ರ ಮೋದಿ ಒತ್ತುಕೊಟ್ಟಿರುವ ಪರಿಣಾಮವಾಗಿ ೩೦೦ಕ್ಕೂ ಹೆಚ್ಚು ಮಹಿಳೆಯರು ಸಂಸದರಾಗಿ ಅಧಿಕಾರ ಚಲಾಯಿಸಲಿದ್ದಾರೆ. ೨೦೩೩ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಅನುರಣಿಸುತ್ತದೆ. ಅಡುಗೆ ಮನೆಗೆ ಹೆಣ್ಣುಮಕ್ಕಳು ಸೀಮಿತ ಎಂಬ ಭಾವನೆ ಬದಲಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಎಚ್. ದೊಡ್ಡಬಸಪ್ಪ ಅಬೇಂಡ್ಕರ್ ಕುರಿತು ಉಪನ್ಯಾಸ ನೀಡಿದರು. ತಹಸೀಲ್ದಾರ್ ಕವಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆಯ ಹಂಗಾಮಿ ಅಧ್ಯಕ್ಷೆ ನೇತ್ರಾವತಿ ಸೆರೆಗಾರ ಮಾತನಾಡಿದರು.

ವಾಲ್ಮೀಕಿ ಸಮಾಜದ ಅಧ್ಯಕ್ಷ ಪವಾಡಿ ಹನುಮಂತಪ್ಪ, ಪುರಸಭಾ ಸದಸ್ಯ ಬಂಜಾರ್ ಗಣೇಶ್, ಅಹಿಂದ ನಾಯಕ ಮುಟುಗನಹಳ್ಳಿ ಕೊಟ್ರೇಶ್, ದಲಿತ ಮುಖಂಡರಾದ ಹೆಗ್ಡಾಳು ರಾಮಣ್ಣ, ಕನ್ನಿಹಳ್ಳಿ ಚಂದ್ರಶೇಖರ್, ಸುಭಾಷ್ ನಾಯ್ಕ, ರಮೇಶ ಪೂಜಾರ್, ಎಚ್. ಸತ್ಯನಾರಾಯಣ, ಕೆಚ್ಚಿಬಂಡಿ ದುರುಗಪ್ಪ, ಯಡ್ರಾಮನಹಳ್ಳಿ ಮರಿಯಪ್ಪ, ಬಾಚಿನಳ್ಳಿ ಮಹೇಶ್, ಕಾಳಿ ಪ್ರಸಾದ್, ಜನವಾದಿ ಮಹಿಳಾ ಸಂಘಟನೆಯ ಸರ್ದಾರ್ ಹುಲಿಗೆಮ್ಮ, ಪ್ರಭಾಕರ್, ತಾಪಂ ಇಒ ವಿಶ್ವನಾಥ್, ಪುರಸಭೆ ಮುಖ್ಯಾಧಿಕಾರಿ ಕೆ.ಎಂ. ಮುಗಳಿ, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್, ಬಿಇಒ ಪ್ರಭಾಕರ್, ಅಕ್ಷರ ದಾಸೋಹದ ರಾಜಕುಮಾರ್, ಚೇಂಬರ್‌ ಆಫ್ ಕಾಮರ್ಸ್‌ನ ಬಾದಾಮಿ ಮೃತ್ಯುಂಜಯ, ಔಷಧ ವ್ಯಾಪಾರಿಗಳ ಸಂಘದ ಬಸವರಾಜ ರೆಡ್ಡಿ ಹಾಗೂ ಸಿಪಿಐ ವಿಕಾಸ್ ಲಮಾಣಿ ಮತ್ತಿತರರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಶೋಭಾ, ನಾಗಪ್ಪ, ಸಂಗೀತ ಶಿಕ್ಷಕಿ ಶಾರದಾ ಮಂಜುನಾಥ, ನೆಲ್ಕುದ್ರಿ ಮಹಾಂತೇಶ ಕಾರ್ಯಕ್ರಮವನ್ನು ನಿರ್ವಹಿಸಿದರು.