ಕನಕಗಿರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

| Published : Aug 02 2025, 12:00 AM IST

ಸಾರಾಂಶ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಗ್ರಾಮ, ಪಟ್ಟಣದ ಅಭಿವೃದ್ಧಿಗೆ ಕೊಕ್ಕೆ ಬಿದ್ದಿದೆ. ರೈತರಿಗೆ ಬೆಳೆ ಪರಿಹಾರ, ಕಿಸಾನ್ ಸಮ್ಮಾನ್ ಯೋಜನೆಯಡಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಕನಕಗಿರಿ:

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಶುಕ್ರವಾರ ಕರೆ ನೀಡಿದ್ದ ಪಟ್ಟಣದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆಯಿಂದ ಮಧ್ಯಾಹ್ನ ೧ರ ವರೆಗೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಮಧ್ಯಾಹ್ನದ ನಂತರ ಹೋಟೆಲ್, ಕಿರಾಣಿ, ದಲಾಲಿ ಅಂಗಡಿಗಳು ಎಂದಿನಂತೆ ಆರಂಭಗೊಂಡಿದ್ದವು. ಮೆಲುಗಡೆ ಅಗಸಿ ಹನುಮಪ್ಪ ದೇವಸ್ಥಾನದಿಂದ ವಾಲ್ಮೀಕಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಬಿಜೆಪಿ ಬಂದ್‌ಗೆ ಕರೆ ನೀಡಿದ್ದರಿಂದ ಬೆಳಗ್ಗೆಯಿಂದ ಕಿರಾಣಿ ಅಂಗಡಿ, ದಲಾಲಿ ಅಂಗಡಿ ಸೇರಿದಂತೆ ವಿವಿಧ ಸಣ್ಣ ಪುಟ್ಟ ಅಂಗಡಿಕಾರರು ಬಾಗಿಲು ಮುಚ್ಚಿದ್ದರು. ವಾಹನಗಳ ಸಂಚಾರ, ಶಾಲಾ-ಕಾಲೇಜು, ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು. ಮಧ್ಯಾಹ್ನ ಬಳಿಕ ಎಲ್ಲ ಅಂಗಡಿಗಳು ಬಾಗಿಲು ತೆರೆದು ಎಂದಿನಂತೆ ವ್ಯಾಪಾರ-ವಹಿವಾಟು ನಡೆಸಿದವು.

ಅಭಿವೃದ್ಧಿ ಶೂನ್ಯ:

ಮಾಜಿ ಕಾಡಾ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಗ್ರಾಮ, ಪಟ್ಟಣದ ಅಭಿವೃದ್ಧಿಗೆ ಕೊಕ್ಕೆ ಬಿದ್ದಿದೆ. ರೈತರಿಗೆ ಬೆಳೆ ಪರಿಹಾರ, ಕಿಸಾನ್ ಸಮ್ಮಾನ್ ಯೋಜನೆಯಡಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ಶಾಸಕರು ಜಿಲ್ಲಾ ಮಂತ್ರಿಯಾಗಿರುವುದು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಕನಕಗಿರಿ ಅಭಿವೃದ್ಧಿಯಿಂದ ತೀರಾ ಹಿಂದುಳಿದಿದ್ದು, ಇಲ್ಲಿನ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ. ಸಚಿವರ ಕ್ಷೇತ್ರದಲ್ಲಿಯೇ ಎಲ್ಲ ಇಲಾಖೆಯಲ್ಲೂ ಅಧಿಕಾರಿಗಳನ್ನು ಪ್ರಭಾರಿಯನ್ನಾಗಿ ನಿಯೋಜಿಸಿಕೊಳ್ಳಲಾಗಿದೆ. ಸಚಿವ ತಂಗಡಗಿ ಅವರ ವರ್ಗಾವಣೆ, ಕಮಿಷನ್ ದಂಧೆಯ ವಿರುದ್ಧ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರಮುಖರಾದ ಸಣ್ಣ ಕನಕಪ್ಪ, ಹರೀಶ ಪೂಜಾರ, ರಂಗಪ್ಪ ಕೊರಗಟಗಿ, ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ಅರುಣ್ ಭೂಸನೂರುಮಠ, ಮೌನೇಶ ದಢೇಸೂಗುರು, ವೀರಬಸವನಗೌಡ, ಪೃಥ್ವಿ ಮ್ಯಾಗೇರಿ, ಸುರೇಶ ಗುಗ್ಗಳಶೆಟ್ರ, ರಾಮಾಂಜನೇಯರೆಡ್ಡಿ ಸೇರಿದಂತೆ ಇತರರಿದ್ದರು.