ಕೊಡಗು ಬಂದ್‌ ಕರೆಗೆ ಮಿಶ್ರ ಪ್ರತಿಕ್ರಿಯೆ: ಆರೋಪಿಗೆ ಗಡಿಪಾರು ಆಗ್ರಹಿಸಿ ಪ್ರತಿಭಟನೆ

| Published : Dec 13 2024, 12:46 AM IST

ಕೊಡಗು ಬಂದ್‌ ಕರೆಗೆ ಮಿಶ್ರ ಪ್ರತಿಕ್ರಿಯೆ: ಆರೋಪಿಗೆ ಗಡಿಪಾರು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧದ ಹೋರಾಟಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡಗು ಸರ್ವಜನಾಂಗದ ಒಕ್ಕೂಟ ನೀಡಿದ್ದ ಕರೆಗೆ ಜಿಲ್ಲೆಯ ಜನತೆ ಓಗೊಟ್ಟು ಸ್ಪಂದಿಸಿದ್ದರು. ಮುಂಜಾನೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೊಡಗು ಬಂದ್ ಗೆ ಕರೆ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪಿ ಗಡಿಪಾರಿಗೆ ಆಗ್ರಹಿಸಿ ಗುರುವಾರ ಕೊಡಗು ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್‌ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿತು.

ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧದ ಹೋರಾಟಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡಗು ಸರ್ವಜನಾಂಗದ ಒಕ್ಕೂಟ ನೀಡಿದ್ದ ಕರೆಗೆ ಜಿಲ್ಲೆಯ ಜನತೆ ಓಗೊಟ್ಟು ಸ್ಪಂದಿಸಿದ್ದರು. ಮುಂಜಾನೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೊಡಗು ಬಂದ್ ಗೆ ಕರೆ ನೀಡಲಾಗಿತ್ತು.

ಜಿಲ್ಲೆಯ ಅಂಗಡಿ ಮುಂಗಟ್ಟುಗಳ ಬಹುತೇಕ ಬಂದ್ ಆಗಿದ್ದವು. ಖಾಸಗಿ ಬಸ್‌ ಸಂಚಾರವೂ ಸ್ಥಗಿತಗೊಂಡಿತು. ಜಿಲ್ಲೆಯಲ್ಲಿ ಆಟೋಗಳ ಓಡಾಟವೂ ವಿರಳವಾಗಿತ್ತು. ಖಾಸಗಿ ಬಸ್, ಆಟೋಗಳ ಸ್ಥಗಿತ ಹಿನ್ನೆಲೆಯಲ್ಲಿ ಸರ್ಕಾರಿ ಸಾರಿಗೆ ಬಸ್‌ ಓಡಾಟ ಯಥಾಸ್ಥಿತಿ ಇತ್ತು. ಜಿಲ್ಲೆಯ ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿತ್ತು.

ಶಾಲಾ ಕಾಲೇಜು ಹಾಗೂ ಕರ್ತವ್ಯಗಳಿಗೆ ಹೋಗಿ ಬರುವವರು ಪರದಾಡಿದ ದೃಶ್ಯ ಕಂಡುಬಂತು. ಗ್ರಾಮೀಣ ಪ್ರದೇಶಗಳಿಗೆ ಬಸ್‌ಗಳ ಸಂಚಾರ ಸ್ಥಗಿತ ಹಿನ್ನೆಲೆ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ತೆರಳುವವರ ಪರದಾಡಿದರು.

ಕೊಡಗು ಸರ್ವಜನಾಂಗದ ಒಕ್ಕೂಟದ ವತಿಯಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು.

ಕೆಲ ಹೊತ್ತು ರಸ್ತೆ ತಡೆ ನಡೆಸಿ ಬಳಿಕ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿತು. ಪ್ರತಿಭಟನಾಕಾರರು ಆರೋಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಒಕ್ಕೂಟದ ಸಂಚಾಲಕ ರಾಜೀವ್ ಬೋಪಯ್ಯ, ಜಿಲ್ಲೆಯಲ್ಲಿ ಶೇ.90ರಷ್ಟು ಬಂದ್ ಯಶಸ್ವಿಯಾಗಿದೆ. ವೀರ ಸೇನಾನಿಗಳ ಮೇಲಿರುವ ಅಭಿಮಾನ, ಗೌರವಕ್ಕಾಗಿ ಬಂದ್‌ಗೆ ಬೆಂಬಲ ಕೊಟ್ಟಿದ್ದಾರೆ. ಅವಹೇಳನ ಆರೋಪಿಗೆ ಶಿಕ್ಷೆ ವಿಧಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು. ಕೂಡಲೇ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದರು.

ಕನಿಷ್ಠ 6 ತಿಂಗಳ ಕಾಲ ಆರೋಪಿಯನ್ನು ಕೊಡಗಿನಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಜನತೆಯ ಆಗ್ರಹವನ್ನು ಸರ್ಕಾರಕ್ಕೆ ಮುಟ್ಟಿಸಿ ಜಿಲ್ಲಾಡಳಿತ ವತಿಯಿಂದ ತುರ್ತಾಗಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಡಿಸಿ ಐಶ್ವರ್ಯ ಭರವಸೆ ನೀಡಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಪ್ರಮುಖರಾದ ಉಳ್ಳಿಯಡ ಪೂವಯ್ಯ, ಬೊಟ್ಟಂಗಡ ಜಪ್ಪು, ಮಾಳೇಟಿರ ಶ್ರೀನಿವಾಸ್, ಕುಪ್ಪಂಡ ವಸಂತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಕೃತಜ್ಞತೆ ಸಲ್ಲಿಕೆ:

ಶಾಂತಿ ಮತ್ತು ಸಹಬಾಳ್ವೆಗೆ ಹೆಸರಾಗಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾತಿಯ ಸಂಘರ್ಷ ಮತ್ತು ಮತೀಯ ಸಂಘರ್ಷ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಂಡುಬರುತ್ತಿದೆ. ಇದರ ಭಾಗವಾಗಿ ನಾವು ಕೊಡಗು ಸರ್ವ ಜನಾಂಗಗಳ ಒಕ್ಕೂಟ ಎಂಬ ಸಂಘಟನೆಯ ಮುಖಾಂತರ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್, ಕರೆ ನೀಡಿದ್ದ ಬಂoddಗೆ ವ್ಯಾಪಕ ಬೆಂಬಲ ನೀಡಿ ಯಶಸ್ವಿ ಮಾಡಿದ ಜಿಲ್ಲೆಯ ಜನತೆಗೆ, ಸಂಘ ಸಂಸ್ಥೆಗಳಿಗೆ ಹಾಗೂ ಕೊಡಗಿನ ಎಲ್ಲಾ ವ್ಯಾಪಾರಸ್ಥರಿಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಕೃತಜ್ಞತೆ ಅರ್ಪಿಸಿದ್ದಾರೆ.

ಕೊಡಗು ಜಿಲ್ಲೆಯ ವರ್ತಕ ಬಾಂಧವರು ಗುರುವಾರ ಸಂಪೂರ್ಣ ಬಂದ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಕೊಡಗು ಬಂದ್ ಯಶಸ್ವಿಗೆ ಜಿಲ್ಲೆಯ ಎಲ್ಲಾ ಸ್ಥಾನೀಯ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೈಜೋಡಿಸಿ ಸಹಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಾಳೆಲೆಯಲ್ಲಿ ಪ್ರತಿಭಟನೆ:

ಬಂದ್ ನಿಮಿತ್ತ ಬಾಳೆಲೆ ಶ್ರೀ ರಾಮ ವೃತ್ತದಲ್ಲಿ ಜಮಾಯಿಸಿದ್ದ ವಿವಿಧ ಸಂಘಟನೆಗಳ ಪ್ರಮುಖರು ಅವಹೇಳನ ಆರೋಪಿ ನಡೆಯನ್ನು ತೀವ್ರವಾಗಿ ಖಂಡಿಸಿದರು.

ವೀರಸೇನಾನಿಗಳು ಸೇರಿದಂತೆ ಯಾರನ್ನೂ ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸುವುದು ಸರಿಯಲ್ಲವೆಂದು ಮುಖಂಡ ಅಳಮೆಂಗಡ ಬೋಸ್ ಮಂದಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ, ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಭಾರತೀಯ ಸೇನೆಗೆ ಮತ್ತು ಭಾರತದ ರಕ್ಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಇವರನ್ನು ಅವಹೇಳನ ಮಾಡಿರುವುದು ನೀಚತನದ ಪರಮಾವಧಿಯಾಗಿದೆಯೆಂದು ಆಕ್ರೋಶ ವ್ಯಕ್ತವಡಿಸಿದರು.

ಬಾಳೆಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಮುಕ್ಕಾಟಿರ ಜಾನಕಿ, ಸದಸ್ಯರಾದ ಪೊಡಮಾಡ ಸುಕೇಶ್ ಭೀಮಯ್ಯ, ನವೀನ್, ಕಳ್ಳಿಚಂಡ ಕುಶಾಲಪ್ಪ, ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಪ್ರಮುಖರಾದ ಅಡ್ಡೇಂಗಡ ರಾಖಿ, ಮೇಚಂಡ ಸೋಮಯ್ಯ ಮತ್ತಿತರರು ಹಾಜರಿದ್ದರು.