ಎಂ.ಕೆ.ರಾಮಸ್ವಾಮಿ ಸಾಮಾಜಿಕ ಬದ್ಧತೆಯ ಸಾಕ್ಷಿಪ್ರಜ್ಞೆ: ಮರಿತಿಬ್ಬೇಗೌಡ

| Published : Mar 01 2025, 01:04 AM IST

ಸಾರಾಂಶ

ರಾಮಸ್ವಾಮಿ ಅವರು ವಿಜ್ಞಾನ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ವಿದ್ಯಾರ್ಥಿಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜ, ವಿದ್ಯಾರ್ಥಿಗಳಿಗಾಗಿ ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿಯಿಂದ ಏನೆಲ್ಲ ಕೆಲಸ ಮಾಡಬಹುದು ಎಂಬುದಕ್ಕೆ ರಾಮಸ್ವಾಮಿ ಅವರು ಸಾಕ್ಷಿ ಆಗಿದ್ದಾರೆ. ಅವರದ್ದು ಸಾರ್ಥಕ ಬದುಕು.

ಕನ್ನಡಪ್ರಭ ವಾರ್ತೆ ಮೈಸೂರು

ಎಂ.ಕೆ.ರಾಮಸ್ವಾಮಿ ಅವರು ಸಾಮಾಜಿಕ ಬದ್ಧತೆಯ ಸಾಕ್ಷಿಪ್ರಜ್ಞೆ ಆಗಿದ್ದಾರೆ ಎಂದು ವಿಧಾನಪರಿಷತ್ತು ಮಾಜಿ ಸಭಾಪತಿ ಮರಿತಿಬ್ಬೇಗೌಡ ಬಣ್ಣಿಸಿದರು.

ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಎಂ.ಕೆ. ರಾಮಸ್ವಾಮಿರವರ ಸ್ನೇಹ ಬಳಗವು ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ಲೇಖಕ ಎಂ.ಕೆ. ರಾಮಸ್ವಾಮಿ ಅವರಿಗೆ 75ನೇ ವಸಂತಾಚರಣೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಮಸ್ವಾಮಿ ಅವರು ವಿಜ್ಞಾನ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ವಿದ್ಯಾರ್ಥಿಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜ, ವಿದ್ಯಾರ್ಥಿಗಳಿಗಾಗಿ ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿಯಿಂದ ಏನೆಲ್ಲ ಕೆಲಸ ಮಾಡಬಹುದು ಎಂಬುದಕ್ಕೆ ರಾಮಸ್ವಾಮಿ ಅವರು ಸಾಕ್ಷಿ ಆಗಿದ್ದಾರೆ. ಅವರದ್ದು ಸಾರ್ಥಕ ಬದುಕು ಎಂದು ಅವರು ತಿಳಿಸಿದರು.

ರಾಮಸ್ವಾಮಿ ಅವರು ಪ್ರಾಂಶುಪಾಲರಾಗಿ ಮಹಾರಾಜ ಪಿಯು ಕಾಲೇಜನ್ನು ಎತ್ತರಕ್ಕೆ ಬೆಳೆಸಿದರು. ಈ ಕಾಲೇಜಿಗೆ ಪ್ರವೇಶ ಪಡೆಯಲು ರಾಜಕಾರಣಿಗಳಿಂದ ಶಿಪಾರಸು ತರುವ ಮಟ್ಟಿಗೆ ಸರ್ಕಾರಿ ಸಂಸ್ಥೆಯನ್ನು ಬೆಳೆಸಿದ ಕೀರ್ತಿ ಅವರಿಗೂ ಸಲ್ಲುತ್ತದೆ ಎಂದರು.

ವಿಜ್ಞಾನ ಪಾಠವನ್ನು ಕನ್ನಡದಲ್ಲಿ ಬೋಧಿಸುವ ಮೂಲಕ ರಾಮಸ್ವಾಮಿ ಅವರು, ಎಷ್ಟೋ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕಾರಣರಾಗಿದ್ದಾರೆ. ತಾಂತ್ರಿಕ ಶಿಕ್ಷಣ ಅಧ್ಯಯನ ಕನ್ನಡದಲ್ಲಿ ಆಗಬೇಕು ಎಂದು ಸುದೀರ್ಘ ಕಾಲದಿಂದ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಇನ್ನೂ ಜಾರಿಯಾಗಿಲ್ಲ ಎಂದು ಅವರು ವಿಷಾದಿಸಿದರು.

ವಿಜ್ಞಾನ ಲೇಖಕ ಎಂ.ಕೆ. ರಾಮಸ್ವಾಮಿ ದಂಪತಿಯನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ವಿಶ್ರಾಂತ ಕುಲಪತಿ ಪ್ರೊ.ಎನ್.ಎಸ್. ರಾಮೇಗೌಡ ಉದ್ಘಾಟಿಸಿದರು. ನಿವೃತ್ತ ಡಿಡಿಪಿಯು ಬಿ.ಎಸ್. ಶ್ರೀಧರರಾಜೇ ಅರಸ್ ಅಭಿನಂದನಾ ನುಡಿಗಳನ್ನಾಡಿದರು. ಸಂಚಾಲಕರಾದ ಹೊನ್ನಯ್ಯ, ಎಸ್. ಚಿದಂಬರ ಮೊದಲಾದವರು ಇದ್ದರು.

ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಕನ್ನಡದಲ್ಲಿ ವಿಜ್ಞಾನ ಪಾಠ ಮಾಡಲು ಆರಂಭಿಸಿದೆ. ಕುವೆಂಪು, ದೇಜಗೌ ಅವರ ಸ್ಫೂರ್ತಿಯಿಂದ ಪುಸ್ತಕಗಳನ್ನು ಬರೆದಿದ್ದೇನೆ. ನಾಡಿನ ಹಲವು ಪತ್ರಿಕೆಗಳನ್ನು ನನ್ನ ವಿಜ್ಞಾನ ಲೇಖನಗಳು ಪ್ರಕಟವಾಗಿವೆ. ವಿಜ್ಞಾನ ಸಂಬಂಧಿಸಿದ ಇನ್ನಷ್ಟು ಪುಸ್ತಕಗಳನ್ನು ಬರೆಯುತ್ತಿದ್ದೇನೆ.

- ಎಂ.ಕೆ. ರಾಮಸ್ವಾಮಿ, ವಿಜ್ಞಾನ ಲೇಖಕ