ಕಡೂರುತಾಲೂಕಿನಲ್ಲಿ ವೃದ್ಯಾಪ್ಯವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ,ಅಂಗವಿಕಲ ವೇತನ, ಮೈತ್ರಿ, ಮನಸ್ವಿನಿಯಂತಹ ವಿವಿಧ ಮಾಸಿಕ ಪಿಂಚಣಿ ಪಡೆಯುತ್ತಿದ್ದ ಸುಮಾರು 30 ಸಾವಿರ ಜನರಿಗೆ ಪಿಂಚಣಿ ಸೌಲಭ್ಯ ನಿಲ್ಲಿಸಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ಇಲ್ಲದ ಕಾರಣ ತಹಸೀಲ್ದಾರ್ ಆರ್‌ಐಗಳಿಗೆ ಶಾಸಕ ಕೆ.ಎಸ್.ಆನಂದ್ ತರಾಟೆಗೆ ತೆಗೆದುಕೊಂಡರು.
ಶಾಸಕ ಕೆ.ಎಸ್.ಆನಂದ್ । ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆ
ಕನ್ನಡಪ್ರಭ ವಾರ್ತೆ ಕಡೂರುತಾಲೂಕಿನಲ್ಲಿ ವೃದ್ಯಾಪ್ಯವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ,ಅಂಗವಿಕಲ ವೇತನ, ಮೈತ್ರಿ, ಮನಸ್ವಿನಿಯಂತಹ ವಿವಿಧ ಮಾಸಿಕ ಪಿಂಚಣಿ ಪಡೆಯುತ್ತಿದ್ದ ಸುಮಾರು 30 ಸಾವಿರ ಜನರಿಗೆ ಪಿಂಚಣಿ ಸೌಲಭ್ಯ ನಿಲ್ಲಿಸಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ಇಲ್ಲದ ಕಾರಣ ತಹಸೀಲ್ದಾರ್ ಆರ್‌ಐಗಳಿಗೆ ಶಾಸಕ ಕೆ.ಎಸ್.ಆನಂದ್ ತರಾಟೆಗೆ ತೆಗೆದುಕೊಂಡರು.ತಾಪಂನಲ್ಲಿ ಮಂಗಳವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಪಿಂಚಣಿ ದಾರರ ಸಮಸ್ಯೆ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದರು. ಅಂದಾಜು 30 ಸಾವಿರ ಜನರಿಗೆ ಪಿಂಚಣಿ ತಡೆ ಹಿಡಿದಿರು ವುದಕ್ಕೆ ಕಾರಣ ಕೇಳಿದ ಶಾಸಕರಿಗೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರಿಂದ ‘ಅಂಡರ್ ಏಜ್ ‘ನಿಂದ ಎಂಬ ಉತ್ತರಕ್ಕೆ ಕೋಪಗೊಂಡ ಶಾಸಕರು ಅಂಡರ್ ಏಜ್ ನೀವು ಹುಟ್ಟಿ ಹಾಕಿರುವ ಪದ ಎಲ್ಲಿಯೂ ಸರ್ಕಾರ ಈ ಪದವನ್ನು ಬಳಸಿಲ್ಲ ಅಲ್ಲದೆ ಆಧಾರ ಕಾರ್ಡ್ ನಿಮ್ಮ ಇಲಾಖೆ ಈ ವಿಷಯಕ್ಕೆ ಪರಿಗಣಿಸುವಂತಿಲ್ಲ ಎಂಬ ಅಂಶ ಮೊದಲು ತಿಳಿದುಕೊಳ್ಳಿ ಯಾವ ಮಾನದಂಡದ ಆಧಾರದಲ್ಲಿ ಅವರ ಪಿಂಚಣಿ ನಿಲ್ಲಿಸಿರುತ್ತೀರಿ ಎಂದು ಪ್ರಶ್ನಿಸಿದರು.
ಕ್ಷೇತ್ರದ ಎಲ್ಲಾ ಹೋಬಳಿಗಳ ಆರ್‌ಐಗಳು ವಿಎಗಳು ಸರ್ಕಾರದಿಂದ ನೀಡಿರುವ ಮಾನದಂಡದಂತೆಯೇ ಕಾರ್ಯ ನಿರ್ವಹಿಸಿ ಕೂಡಲೇ 30 ಸಾವಿರ ಜನಗಳ ಸ್ಥಗಿತಗೊಂಡವರ ಸರ್ವೇ ನಡೆಸಿ ಕೂಡಲೇ ಮುಂದಿನ ಸೋಮವಾರ ವರದಿ ನೀಡಬೇಕು ಎಂದು ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ವಿಳಂಬ ಮಾಡಿದರೆ ಸಹಿಸುವುದಿಲ್ಲ ಬಡವರ ಕಷ್ಟ ಕೇಳುರ‍್ಯಾರು ಎಂದು ಪ್ರಶ್ನಿಸಿದರು.ನಮ್ಮ ಸರ್ಕಾರ ಅನೇಕ ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಸಹಾಯ ನೀಡುತ್ತಿದೆ. ನಿಮ್ಮಗಳ ಕರ್ತವ್ಯ ಲೋಪ ದಿಂದ ನಾವು ಕೊಟ್ಟಿರುವುದಕ್ಕಿಂತ ಕಿತ್ತುಕೊಂಡಿರುವುದೇ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದಷ್ಟು ಬೇಗ ಸರಿ ಪಡಿಸದಿದ್ದರೆ ನಾವು ಖುದ್ದಾಗಿ ತಾಲೂಕು ಕಚೇರಿ ಮುಂದೆ ಫಲಾನುಭವಿಗಳೊಂದಿಗೆ ಪ್ರತಿಭಟನೆಗೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕೃಷಿ ಇಲಾಖೆ ಅಧಿಕಾರಿಗಳು ಬರದಿಂದ ಈ ಬಾರಿ ಬಿತ್ತನೆ ಕುಂಠಿತವಾಗಿದೆ. 53 ಸಾವಿರ ಹೆಕ್ಟೇರಿಗೆ ಬಿತ್ತನೆಯಾಗಬೇಕಿತ್ತು, ಆದರೆ ೧೫,೨೯೯ ಹೆಕ್ಟೇರಿನಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ಒಂದು ವಾರದಿಂದ ಬರುತ್ತಿರುವ ಮಳೆಯಿಂದ ಜೋಳ ಬಿತ್ತನೆಗೆ ರೈತರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ರಾಗಿ ಬಿತ್ತನೆ ಸಮಯ ಮುಗಿದಿದೆ ಆದರೂ ಜಿಕೆವಿಕೆ ಸಂಶೋಧಿಸಿರುವ ಕೆಎಂಆರ್ ರಾಗಿ ತಳಿ ಬಿತ್ತನೆ ಮಾಡಲು ಕೆಲವು ರೈತರು ಮುಂದಾದ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕೆ ಬೆಳೆಗಳಿಗೆ ೮೮೦೫ ರೈತರು ವಿಮೆ ಮಾಡಿಸಿರುತ್ತಾರೆ. ಮಳೆ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ವಿಮೆ ಅನ್ವಯವಾಗಲಿದೆ ಎಂಬ ಭರವಸೆ ನೀಡಿದರು.ಪಶು ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಮಾಹಿತಿ ನೀಡಿ ತಾಲೂಕಿನಲ್ಲಿ 25 ಸಾವಿರ ಮೇವಿನ ಕಿಟ್‌ಗಳಿಗೆ ಬೇಡಿಕೆ ಬಂದಿದ್ದು ಸದ್ಯ ೩೭೨೨ ರೈತರಿಗೆ ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ ಇನ್ನು ಕಿಟ್‌ಗಳು ಬರುವ ನಿರೀಕ್ಷೆ ಇದೆ. ತಾಲೂಕಿ ನಲ್ಲಿ ಮೇವು ಬ್ಯಾಂಕ್, ಗೋಶಾಲೆ ತೆರೆಯಲು ಈಗಾಗಲೇ ಸ್ಥಳ ಗುರುತಿಸಲಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.ನೈರ್ಮಲ್ಯ ಕುಡಿಯುವ ನೀರಿನ ಇಲಾಖೆ ನೂತನ ಕಚೇರಿ ಕಟ್ಟಡದ ಕಾಮಗಾರಿ ಕಳೆದ ೪ ವರ್ಷಗಳಿಂದ ಸಾಗುತ್ತಿದ್ದು ಗುತ್ತಿಗೆ ದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಶಾಸಕರು ಸೂಚನೆ ನೀಡಿದರು. ಸಂಬಂಧಿಸಿದ ಎಂಜಿನಿಯರ್ ಪ್ರಕಾಶ್ ಬರುವ ಮಾರ್ಚ್ ಒಳಗೆ ಕಟ್ಟಡ ಪೂರ್ಣಗೊಳಿಸಲಿದ್ದಾರೆ ಎಂಬ ಮಾಹಿತಿ ನೀಡಿದರು. ಜೆಜೆಎಂ ಕಾಮಗಾರಿಗಳು ಕಳಪೆ ಯಿಂದ ಹಾಗೂ ಪೈಪ್‌ಲೈನ್ ಅಳವಡಿಕೆ ಕೆಲಸಗಳು ಬಾಕಿ ಇದ್ದರೆ ಕೂಡಲೆ ಪೂರ್ಣಗೊಳಿಸಲು ಆದೇಶ ನೀಡಿದರು. ಕುಡಿಯುವ ನೀರಿಗೆ ಬಂದಿರುವ ₹೧.೮೦ ಕೋಟಿ ಅನುದಾನದ ಮಾಹಿತಿ ಪಡೆದ ಶಾಸಕರು ಬಾಕಿ ಹಣದಲ್ಲಿ ಅವಶ್ಯ ವಾದ ಕಡೆ ಕೊಳವೆ ಬಾವಿ ಕೊರೆಯಿಸಲು ಸೂಚನೆ ನೀಡಿದರು. ಕುಡಿಯುವ ನೀರಿನ ಸಮಸ್ಯೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗುತ್ತಿದ್ದು ಸ್ಥಳೀಯ ವಾಟರ್ ಮ್ಯಾನ್‌ಗಳು ಶಾಸಕರ ಬಳಿ ಹೋಗಿ ಕೊಳವೆ ಬಾವಿ ಅನುಮೋದನೆ ಮಾಡಿಸಿಕೊಂಡು ಬನ್ನಿ ಎಂದು ಗ್ರಾಮಸ್ಥರಿಗೆ ಹೇಳಿ ನಮ್ಮ ಹತ್ತಿರ ಕಳುಹಿಸುತ್ತಿರುವ ಅನೇಕ ಪ್ರಸಂಗಗಳು ಬಂದಿದ್ದು ಅಲ್ಲಿನ ಪಿಡಿಒಗಳು ಏನು ಮಾಡುತ್ತಿದ್ದಾರೆ? ಎಂದು ಇಓ ರನ್ನು ಪ್ರಶ್ನಿಸಿದ ಶಾಸಕರು ಕೂಡಲೆ ವಾಟರ್ ಮ್ಯಾನ್‌ಗಳನ್ನು ಬಿಗಿ ಮಾಡಲು ಇಒಗೆ ಸೂಚಿಸಿದರು.ಮೆಸ್ಕಾಂ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಗಳಿರುವ ಕಡೆ ಲೈನ್‌ಗಳನ್ನು,ಟಿಸಿಗಳನ್ನು ಸಮರ್ಪಕವಾಗಿ ನೀಡ ಬೇಕು,ಲೋಡ್ ಶೆಡ್ಡಿಂಗ್ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಶಾಸಕರು ಆದಷ್ಟು ಸಮಸ್ಯೆಗಳಿಲ್ಲದಂತೆ ಕಾರ್ಯನಿರ್ವಹಿಸಿ ಎಂದರು.ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ 32 ಕಂತು ಹಣ ಅವರ ಖಾತೆಗೆ ಜಮಾ ಮಾಡಲಾಗಿದೆ. ಇಲ್ಲಿವರೆವಿಗೂ ₹೪೩೭ ಕೋಟಿ ಹಣ ಕಡೂರು ತಾಲೂಕಿನ ಫಲಾನುಭವಿಗಳಿಗೆ ಬಂದ ಮಾಹಿತಿ ನೀಡಿದರು. ಕ್ಷೇತ್ರದಲ್ಲಿ ಅಂಗನವಾಡಿ ಕಟ್ಟಡಗಳ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು.ಆರೋಗ್ಯ,ಶಿಕ್ಷಣ,ಅರಣ್ಯ,ಪುರಸಭೆ,ನೀರಾವರಿ ಇಲಾಖೆ, ಕೆ.ಆರ್.ಐ.ಡಿ.ಎಲ್, ಪೊಲೀಸ್, ಕಾರ್ಮಿಕ, ಸಾರಿಗೆ ಇಲಾಖೆಗಳ ಪ್ರಗತಿಯ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆದರು. ಸಭೆಯಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್,ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಆಸಂದಿ ಕಲ್ಲೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.6ಕೆಡಿಆರ್1ಕಡೂರು ತಾಪಂ ಸಬಾಂಗಣದಲ್ಲಿ ಮಂಗಳವಾರ ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್.ಪ್ರವೀಣ್ ಇದ್ದರು.