ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸರ್ಕಾರಿ ಕೆಲಸ ನಿರ್ವಹಿಸುವಲ್ಲಿ ಕರ್ತವ್ಯ ಲೋಪ, ಮೃದು ಧೋರಣೆ ತೋರುವ ಕೆಲವು ಅಧಿಕಾರಿಗಳನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ತರಾಟೆ ತೆಗೆದುಕೊಂಡರರು. ಉತ್ತಮ ಕೆಲಸ ನಿರ್ವಹಿಸುವ ಕೆಲವು ಅಧಿಕಾರಿ, ನೌಕರರನ್ನು ಶಾಸಕರು ಪ್ರಶಂಸಿಸಿದರು.ನಗರಸಭೆ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಕೃಷ್ಣಮೂರ್ತಿ ಮೊದಲಿಗೆ ಸಭೆಗೆ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೋರಿದರು. ಬಳಿಕ ನಗರಸಭೆ ಆಯುಕ್ತರ ವಿರುದ್ಧ ಪ್ರಾರಂಭದಲ್ಲೆ ಅಸಮಾಧಾನ ಹೊರಹಾಕಿದರು. ಇಂದಿನ ಸಭೆಯ ಅಜೆಂಡಾ ಪ್ರತಿ ನನಗೆ ತಲುಪಿಲ್ಲ ಎಂದು ಖಾರವಾಗಿ ಪ್ರಶ್ನಿಸಿ ನಿಮ್ಮ ಕಾರ್ಯವೈಖರಿ ಸರಿಯಲ್ಲ, ಮುಂದೆ ಈ ರೀತಿ ಅಗಬಾರದು ಎಂದು ಎಚ್ಚರಿಕೆ ಸಂದೇಶ ರವಾನಿಸಿದರು. ಬಳಿಕ ಎಂಜಿನಿಯರ್ ಸುರೇಶ್ ಅವರ ಜವಾಬ್ದಾರಿ ಕುರಿತು ಸಭೆಯಲ್ಲಿ ಪ್ರಶ್ನಿಸುತ್ತಿದ್ದ ಶಾಸಕರು ನಿಮಗೆ ಇಲ್ಲಿ ಕೆಲಸ ಮಾಡಬೇಕು ಎಂಬ
ಇಚ್ಛಾಶಕ್ತಿ ಇದ್ದರೆ ಇಲ್ಲಿ ಕೆಲಸ ಮಾಡಿ ಇಲ್ಲದಿದ್ದರೆ ನನಗೆ ಇಲ್ಲಿ ಕೆಲಸ ಮಾಡಲು ಆಗಲ್ಲ ಎಂದು ಪತ್ರ ನೀಡಿ ಹೊರಟುಹೋಗಿ, ಬೇರೆಯವರನ್ನು ಹಾಕಿಸಿಕೊಳ್ಳುವೆ, ಸಭೆಯ ವಿಚಾರಕ್ಕೆ ಅನುಗುಣವಾಗಿ ನೀವು ಕಾರ್ಯನಿರ್ವಹಿಸಿಲ್ಲ ಎಂದು ಗರಂ ಆದರು.ಈ ವೇಳೆ ನಗರಸಭೆ ಮಾಜಿ ಅದ್ಯಕ್ಷ ಶಾಂತರಾಜು ಆಯುಕ್ತರ ಕಾರ್ಯವೈಖರಿಗೆ ಮುಂದೆ ಈ ರೀತಿ ನಿರ್ಲಕ್ಷ್ಯ ಸರಿಯಲ್ಲ ಎಂದರು. ಸದಸ್ಯೆ ಸುಮ ಸುಬ್ಬಣ್ಣ ಆಯುಕ್ತರು ವಾರ್ಡ್‌ಗಳಿಗೆ ಭೇಟಿ ನೀಡಲ್ಲ, ನಾಗರಿಕರ ಸಮಸ್ಯೆ ಆಲಿಸಲ್ಲ, ಈ ಹಿನ್ನೆಲೆ ವಾರ್ಡ್‌ನಲ್ಲಿ ಸಮರ್ಪಕ ರೀತಿ ಸ್ವಚ್ಛತೆ ಆಗುತ್ತಿಲ್ಲ, ಆರೋಗ್ಯ ನಿರೀಕ್ಷರೆ ಎಲ್ಲಾ ಜವಾಬ್ದಾರಿ ನೋಡಿಕೊಳ್ಳುವಂತಾಗಿದೆ. ಪೌರ ಕಾರ್ಮಿಕರ ಕೊರೆತೆ ಇದ್ದರೂ ಗಮನಹರಿಸುತ್ತಿಲ್ಲ ಎಂದು ದೂರಿದರು.
ಆಯುಕ್ತರು ಪ್ರತಿಕ್ರಿಯಿಸಿ, ಮುಂದೆ ಈ ರೀತಿ ಆಗದಂತೆ ಕಾರ್ಯನಿರ್ವಹಿಸುವೆ, ಶಾಸಕರಿಗೆ ಪ್ರತ್ಯೇಕ ಅಜೆಂಡಾ ಪ್ರತಿ ನೀಡಿ ಕರೆಯಲು ಆಗಲಿಲ್ಲ, ಆದರೆ ಕಚೇರಿಗೆ ತಲುಪಿಸಿದ್ದೆ, ನಾನು ಕರೆ ಮಾಡಿ ಹೇಳಲಿಲ್ಲ, ಮುಂದಿನ ದಿನಗಳಲ್ಲಿ ಜಾಗೃತಿಯಿಂದ ಕಾರ್ಯನಿರ್ವಹಿಸುವೆ ಎಂದರು.ಬರೀ 3ವರ್ಷ ಅವಧಿಗೆ ಶಾಸಕ ಅನ್ನಬೇಡಿ:
ನನ್ನನ್ನು ಬರೀ 3ವರ್ಷದ ಅವಧಿಗೆ ಶಾಸಕ ಅನ್ನಬೇಡಿ, ಬರೀ 3 ವರ್ಷ ಸಾಕಾ ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಕೃಷ್ಣಮೂರ್ತಿ ಪ್ರಶ್ನಿಸುವ ಮೂಲಕ ಸಭೆ ನಗೆಗಡಲಲ್ಲಿ ತೇಲುವಂತೆ ಮಾಡಿತು. ರಾಜಕುಮಾರ್, ಅಂಬೇಡ್ಕರ್ ರಸ್ತೆ ಅಗಲಿಕರಣ ವಿಚಾರದಲ್ಲಿ ಕೆಲ ಸದಸ್ಯರು ತಮ್ಮ 3 ವರ್ಷ ಅವಧಿಯಲ್ಲಿ ಈ ಕೆಲಸ ಪೂರ್ಣಗೊಳಿಸಿ ಎಂದು ವಿಚಾರ ಪ್ರಸ್ತಾಪಿಸುತ್ತಿದ್ದಂತೆ 3 ವರ್ಷಗಳಿಗೆ ಮಾತ್ರ ಶಾಸಕ ಅನ್ನುತ್ತೀರಲಪ್ಪ ಎಂದು ಸಭೆಯಲ್ಲಿ ಹೇಳಿದಾಗ ಸಭೆ ನಗೆಡಗಡಲಲ್ಲಿ ತೇಲಿತು.ಸರ್ಕಾರಿ ಆಸ್ತಿಯ ಕಡತ ಕಾಪಾಡು- ನೌಕರನಿಗೆ ಶಾಸಕರ ಅಭಯ
ಉತ್ತಮ ಕೆಲಸಗಾರರನ್ನು ನಾನು ಬೆನ್ನುತಟ್ಟುವೆ, ನಗರಸಭೆ ಆಸ್ತಿಗಳನ್ನು ನ್ಯಾಯಾಲಯದಲ್ಲಿ ಉಳಿಸುವಲ್ಲಿ ಮುಂದಾಗು ನಿನ್ನ ಜೊತೆಗೆ ನಾನಿರುವೆ ಎಂದು ಶಾಸಕ ಕೃಷ್ಣಮೂರ್ತಿ ನಗರಸಭೆ ಆಸ್ತಿ ರೆಕಾರ್ಡ್ ನೀಡಿದ ನೌಕರ ರಾಘವೇಂದ್ರರನ್ನು ಪ್ರಶಂಸಿಸಿದರು. ನಿನಗೆ ಕಡತಗಳ ಬಗ್ಗೆ ಗೊತ್ತು, ಸರ್ಕಾರಿ ಆಸ್ತಿಗಳ ಕಡತ ಆಚೆ ತೆಗಿ, ಸರ್ಕಾರಿ ಆಸ್ತಿ ಉಳಿಸು, ಉತ್ತಮ ಕೆಲಸಗಾರರನ್ನು ಬೆನ್ನು ತಟ್ಟುವೆ, ನಗರಸಭೆ ಸಂಬಂಧಿಸಿದ ಕೋರ್ಟ್ ವಿಚಾರವನ್ನು ನೀನೆ ನೋಡಿಕೊ, ನಗರಸಭೆ ಆಸ್ತಿಯನ್ನು ನಗರಸಭೆಗೆ ಉಳಿಸುವಲ್ಲಿ ನ್ಯಾಯಾಲಯದಲ್ಲಿ ಗೆದ್ದು ಬಾ ನಾನು ನಿನ್ನ ಜೊತೆಗಿರುವೆ ಎಂದು ಹುರಿದುಂಬಿಸಿದರು. ನಗರಸಭೆ ಆಸ್ತಿ ಪುಸ್ತಕವನ್ನು ಮುಂದಿನ ದಿನಗಳಲ್ಲಿ ಜೋಪಾನವಾಗಿಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕರು ಇದೆ ವೇಳೆ ಕಿವಿಮಾತು ಹೇಳಿದರು.ಜಿಲ್ಲಾ ಸಕ್ಷಮ ಪ್ರಾಧಿಕಾರ ಅಧಿಕಾರಿ ಕಾರ್ಯ ವೈಖರಿ ಬಣ್ಣನೆ:ಜಿಲ್ಲಾ ಸಕ್ಷಮ ಪ್ರಾಧಿಕಾರದ ಅಧಿಕಾರಿ ಲಕ್ಷ್ಮೀಶ ಅವರು ನುರಿತವರು, ಹೆಚ್ಚು ವಿಚಾರ ತಿಳಿದುಕೊಂಡಿದ್ದಾರೆ, ಅವರಂತಹ ಅಧಿಕಾರಿಗಳ ಮಾರ್ಗದರ್ಶನ ಕೊಳ್ಳೇಗಾಲ ಸಮಗ್ರ ಅಬಿವೃದ್ಧಿಗೆ ಅತ್ಯಗತ್ಯ ಎಂದು ಶಾಸಕ ಕೃಷ್ಣಮೂರ್ತಿ ಪ್ರಶಂಶಿಸಿದರು. ಸಾಮಾನ್ಯ ಸಭೆಯಲ್ಲಿ ಲಕ್ಷ್ಮೀಶ ಅವರಿಂದ ರಸ್ತೆ ಅಗಲಿಕರಣ ಸೇರಿದಂತೆ ಇನ್ನಿತರೆ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡ ಶಾಸಕರು ಲಕ್ಷ್ಮೀಶ ಹೆಚ್ಚು ವಿಚಾರವಂತರು. ಎಲ್ಲ ಸದಸ್ಯರು ಅವರ ಮಾರ್ಗದರ್ಶನದಲ್ಲಿ ಮುಂದಡಿ ಇಡುವ ಮೂಲಕ ರಸ್ತೆ ಅಗಲಿಕರಣ, ನಗರಸಭೆಗೆ ಆದಾಯ ತರುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದರು.
ಅಧಿಕಾರಿ ರೇಣುಕಾ ಲೋಪದಿಂದ ರಸ್ತೆ ನಿರ್ಮಾಣಕ್ಕೆ ಹಿನ್ನಡೆ:ರಸ್ತೆ ವಿಚಾರದಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕರು ಮೊದಲು ಅಧಿಕಾರಿಗಳು ನಗರಸಭ ಜಾಗಕ್ಕೆ ಕಲ್ಲು ನೆಡಿ, ಕೆಲ ಗಂಭೀರ ಸಮಸ್ಯೆಗಳನ್ನು ಅರ್ಥೈ ಸಿಕೊಳ್ಳಿ, ಖಾಸಗಿ ವ್ಯಕ್ತಿಯೊಬ್ಬರ ಶೆಡ್ ಉಳಿಸಲು ಹಿಂದಿನ ಅಧಿಕಾರಿ ರೇಣುಕಾ ಎಂಬುವರು ಮಾಡಿದ ಲೋಪದಿಂದಾಗಿ ರಸ್ತೆ ಕಾಮಗಾರಿಗೆ ಹಿನ್ನಡೆಯಾಗಿದೆ. ಈ ವಿಚಾರದಲ್ಲಿ ಸರ್ವೆ ನ್ಯಾಯ ಸಮ್ಮುತವಾಗಿ ಆಗಲಿ, ನಕ್ಷೆಯಂತೆ ಅಳತೆ ಮಾಡಿ ವರದಿ ಸಲ್ಲಿಸಿ, ನ್ಯಾಯ ಸಮ್ಮತ ತೀರ್ಮಾನವಾಗಲಿ ಎಂದರು.
ಯಾವ ಸದಸ್ಯರನ್ನು ಆಪರೇಷನ್ ಮಾಡಿಲ್ಲ:ನಾನು ಕಮಲ ಪಕ್ಷದಲ್ಲಿದ್ದವನು, ಕಮಲ ಪಕ್ಷದ ಆಪರೇಷನ್‌ಗೆ ಒಳಗಾದವನಲ್ಲ, ಅನಂತ್ ಕುಮಾರ್ ಹೆಗ್ಗಡೆ ಅವರ ಹೇಳಿಕೆ ವಿರೋಧಿಸಿ ಸ್ವಾಭಿಮಾನದಿಂದ ಪಕ್ಷ ಬಿಟ್ಟು ಬಂದೆ. ಅದೇ ರೀತಿಯಲ್ಲಿ ನಗರಸಭೆಯಿಂದ ಕಮಲ ಪಕ್ಷದಲ್ಲಿ ಗೆದ್ದ ಸದಸ್ಯರನ್ನು ನಾನು ಆಪರೇಶಷನ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿಲ್ಲ, ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ನನ್ನ ಅಭಿವೃದ್ಧಿ ಪರ ಕೆಲಸ ಮನಗಂಡು ಪಕ್ಷ ಸೇರಿದ್ದಾರೆ, ಅವರೆಲ್ಲರನ್ನೂ ಗೌರವ ಭಾವನೆಯಿಂದ ಕಾಣಲಾಗುತ್ತಿದೆ. ಅವರ ವಾರ್ಡ್ ಅಭಿವೃದ್ಧಿಗೆ ನಾನು ಕೈಜೋಡಿಸುವೆ ಎಂದು ಹೇಳಿದರು. ಉಪಾಧ್ಯಕ್ಷ ಶಂಕರ್, ಸ್ಠಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯ ಮಂಜುನಾಥ್, ರಾಘವೇಂದ್ರ, ಶಾಂತರಾಜು, ಜಿಪಿ ಶಿವಕುಮಾರ್, ಧರಣೀಶ್, ರಾಮಕೃಷ್ಣ, ಪ್ರಶಾಂತ್, ಮನೋಹರ್, ಸ್ವಾಮಿ ನಂಜಪ್ಪ, ಅನ್ಸರ್ ಬೇಗ್, ಶಿವಮಲ್ಲು, ನಾಗಸುಂದ್ರಮ್ಮ, ಕವಿತಾ ಇನ್ನಿತರರಿದ್ದರು.
ರಸ್ತೆ ಅಗಲಿಕರಣಕ್ಕೆ ಒಪ್ಪಿಗೆ; ವಾರದೊಳಗೆ ವರದಿ ಸಲ್ಲಿಕೆ ನಗರಸಭೆ ವ್ಯಾಪ್ತಿಯ ರಾಜಕುಮಾರ್ ಮತ್ತು ಅಂಬೇಡ್ಕರ್ ರಸ್ತೆಗಳನ್ನು ಅಗಲೀಕರಣ ಮಾಡಿ ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸ್ಪಂದಿಸಲು ಹಾಗೂ ಈ ಸಂಬಂಧ ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು. ಮೊದಲಿಗೆ ಅಧ್ಯಕ್ಷೆ ರೇಖಾ ರಮೇಶ್ ಮಾತನಾಡಿ, ರಸ್ತೆ ಅಗಲಿಕರಣದಿಂದ ಪಟ್ಟಣದ ಅಭಿವೃದ್ದಿಗೆ ಸಹಕಾರವಾಗಲಿದೆ ಎಂದರು. ಸದಸ್ಯರಾದ ಪ್ರಶಾಂತ್, ಶಾಂತರಾಜು, ಜಿಪಿ ಶಿವಕುಮಾರ್ ನರಸಿಂಹನ್ ಇನ್ನಿತರರು ಮಾತನಾಡಿ, ರಸ್ತೆ ಅಗಲಿಕರಣದಿಂದ ಕೊಳ್ಳೇಗಾಲದ ಅಂದ ಹೆಚ್ಚಲಿದೆ. ಅಭಿವೖದ್ದಿಗೂ ಪೂರಕವಾಗಲಿದ್ದು ಸಂಪೂಣ೯ ಒಪ್ಪಿಗೆ ಇದೆ ಎಂದರು.ಈ ವೇಳೆ ಶಾಸಕರು ಮಾತನಾಡಿ, ಲೋಕೋಪಯೋಗಿ ಮತ್ತು ನಗರಸಭೆ ಅದಿಕಾರಿಗಳು ಈ ಸಂಬಂಧ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮ ಕುರಿತು, ಅಲ್ಲಿರುವ ಆಸ್ತಿಗಳ ಹಾಗೂ ಕೈಗೊಳ್ಳಬೇಕಾದ ಅಭಿವೃದ್ದಿ ಕುರಿತು ವಾರದೊಳಗೆ ವರದಿ ಸಲ್ಲಿಸಬೇಕು, ನೀವು ನಿಧಾನಗತಿಯಲ್ಲಿ ಸಾಗಿದರೆ ರಸ್ತೆ ಅಗಲಿಕರಣ ಮಾಡಬೇಕೆಂಬ ನನ್ನ ಸಂಕಲ್ಪ ಈಡೇರಲ್ಲ, ಹಾಗಾಗಿ ಈ ವಿಚಾರದಲ್ಲಿ ಅಧಿಕಾರಿಗಳು ಕಾರ್ಯಪ್ರವೖತ್ತರಾಗಬೇಕು, ಹಿಂದಿನ ಅನುಮೋದನೆಯಂತೆ ಅಗಲಿಕರಣಕ್ಕೆ ಮುಂದಾಗಿ, ನಗರ ಪ್ರದೇಶ ಅಭಿವೃದ್ದಿಯಾದರೆ ಮಾತ್ರ ನಗರಸಭೆಗೆ ಆದಾಯ ಬರಲು ಸಾಧ್ಯ ಎಂದರು ನಗರಸಭೆಯಿಂದ ನಿರ್ಮಾಣವಾದ ಶೌಚಾಲಯದಿಂದ ಆದಾಯ ಬರುತ್ತಿಲ್ಲ ಎಂದು ಉಪಾಧ್ಯಕ್ಷ ಶಂಕರ್ ವಿಚಾರ ಪ್ರಸ್ತಾಪಿಸಿದರು.