ಶಾಸಕ ಬಸನಗೌಡ ಯತ್ನಾಳರು ನಾಲಿಗೆ ಹರಿಬಿಟ್ಟಿದ್ದಾರೆ. ಹೋರಾಟದಲ್ಲಿ ಭಾಗವಹಿಸಿದ ಪಕ್ಷಾತೀತ ನಾಯಕರು, ಸ್ವಾಮೀಜಿಗಳು, ಬುದ್ಧಿಜೀವಿಗಳಿಗೆಲ್ಲ ಲಪುಟರು ಎಂದು ಮಾತನಾಡಿ ಅವಮಾನ ಮಾಡಿರುವ ಯತ್ನಾಳರು ತಕ್ಷಣ ಜಿಲ್ಲೆಯ ಜನತೆಗೆ ಕ್ಷಮೆಯಾಚಿಸಬೇಕು ಎಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಆಗ್ರಹಿಸಿ ಕಳೆದ 84 ದಿನಗಳಿಂದ ಧರಣಿ ಕುಳಿತಿರುವ ಹೋರಾಟಗಾರರು ಪೇಮೆಂಟ್ ಗಿರಾಕಿಗಳು ಎಂದು ಬಿಜೆಪಿ ಉಚ್ಛಾಟಿತ ನಗರ ಶಾಸಕ ಬಸನಗೌಡ ಯತ್ನಾಳರು ನಾಲಿಗೆ ಹರಿಬಿಟ್ಟಿದ್ದಾರೆ. ಹೋರಾಟದಲ್ಲಿ ಭಾಗವಹಿಸಿದ ಪಕ್ಷಾತೀತ ನಾಯಕರು, ಸ್ವಾಮೀಜಿಗಳು, ಬುದ್ಧಿಜೀವಿಗಳಿಗೆಲ್ಲ ಲಪುಟರು ಎಂದು ಮಾತನಾಡಿ ಅವಮಾನ ಮಾಡಿರುವ ಯತ್ನಾಳರು ತಕ್ಷಣ ಜಿಲ್ಲೆಯ ಜನತೆಗೆ ಕ್ಷಮೆಯಾಚಿಸಬೇಕು ಎಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಮಾಡಬೇಕು ಎಂದು ಹೋರಾಟ ನಡೆಸುತ್ತಿರುವವರು ಸಚಿವ ಶಿವಾನಂದ ಪಾಟೀಲರ ಮನೆಗೆ ಹೋಗಿ ಪೇಮೆಂಟ್ ಪಡೆಯುತ್ತಾರೆ ಎಂದು ಹೇಳುವ ನಿಮ್ಮ ಬಳಿ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಯತ್ನಾಳರು ಬೇಕಾಬಿಟ್ಟಿ ಮಾತನಾಡಿ ಹೋರಾಟಗಾರರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಹಾಗೂ ಮಂತ್ರಿಗಳನ್ನು ಓಲೈಸಿ ಮೆಡಿಕಲ್ ಕಾಲೇಜು ತಾನೇ ಹೊಡೆದುಕೊಳ್ಳಬೇಕು ಎಂದು ಯತ್ನಾಳ ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.

ಕಳೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಆಗಬೇಕು ಎಂದು ನಾನು ಹಾಗೂ ಸಚಿವ ಶಿವಾನಂದ ಪಾಟೀಲರು ಹೇಳಿದ್ದೇವೆ ಎಂದು ಎಂ.ಬಿ.ಪಾಟೀಲರು ನಮಗೆ ಹೇಳಿದ್ದಾರೆ. ಹಾಗಾಗೀ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಲು ಇರುವ ಸಾಧಕ ಬಾಧಕಗಳ ಬಗ್ಗೆ ತಿಳಿಸಿ ಎಂದು ಸಿಎಂ ಅವರು ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಕಳಿಸಿದ್ದಾರೆ. ಶಿವಾನಂದ ಪಾಟೀಲರು ಕೇವಲ 14 ತಿಂಗಳು ಆರೋಗ್ಯ ಮಂತ್ರಿಯಾಗಿದ್ದಾಗ ಮೆಡಿಕಲ್ ಕಾಲೇಜಿಗೆ ಬೇಕಾದ ಸೌಲಭ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ಮುಖಂಡ ಡಾ.ರವಿಕುಮಾರ ಬಿರಾದಾರ ಮಾತನಾಡಿ, ಯತ್ನಾಳರು ಹೋರಾಟಗಾರರ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಪೇಮೆಂಟ್ ಗಿರಾಕಿ ಎಂದಿರುವುದನ್ನು ನಾವು ಖಂಡಿಸುತ್ತೇವೆ. ಹೋರಾಟಗಾರರೆಲ್ಲ ಮೊದಲಿನಿಂದ ಹಲವಾರು ವಿಚಾರಗಳಲ್ಲಿ ಹೋರಾಟ ಮಾಡಿದವರು, ಪ್ರಾಮಾಣಿಕರಾಗಿದ್ದಾರೆ. ಅಂತಹವರಿಗೆ ಅವಮಾನಿಸಿದ್ದಕ್ಕಾಗಿ ತಕ್ಷಣ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಮುಖಂಡ ಎಂ.ಸಿ.ಮುಲ್ಲಾ ಮಾತನಾಡಿ, ಜಿಲ್ಲೆಗೆ ಮೆಡಿಕಲ್ ಕಾಲೇಜು ಬರಬೇಕು ಎಂದು ಕಳೆದ ಮೂರು ತಿಂಗಳಿನಿಂದ ಹೋರಾಟ ಮಾಡುತ್ತಿದ್ದಾರೆ. ಅವರ ಬಗ್ಗೆ ಯತ್ನಾಳರು ಪೇಮೆಂಟ್ ಗಿರಾಕಿಗಳು ಎಂದಿದ್ದನ್ನು ನಾವು ಖಂಡಿಸುತ್ತೇವೆ. ಈ ಹೋರಾಟದಲ್ಲಿ ಎಲ್ಲ ಸಂಘಟನೆಗಳು, ಮಠಾಧೀಶರು ಭಾಗವಹಿಸಿದ್ದಾರೆ. ಅವರನ್ನು ಲಪುಟ ಎನ್ನುವ ನೀವು ಎಷ್ಟು ಲಪುಟರು ಎಂದು ತಿರುಗೇಟು ನೀಡಿದರು. ತಕ್ಷಣ ಹೋರಾಟಗಾರರಿಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅಧಿವೇಶನದಿಂದ ಬಂದ ಕೂಡಲೆ ನೀವು ಹೋದಲ್ಲಿ ಬಂದಲ್ಲಿ ಕಪ್ಪುಬಟ್ಟೆ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಸಿದರು.

ಅನಿಲ ಹೊಸಮನಿ ಮಾತನಾಡಿ, ಜಾತ್ಯಾತೀತ, ಧರ್ಮಾತೀತ ಹಾಗೂ ಪಕ್ಷಾತೀತವಾಗಿ 84 ದಿನಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ರಾಜಕೀಯ ಬೆರೆಸುವ ಉದ್ದೇಶದಿಂದ ಯತ್ನಾಳರು ಹೀಗೆ ಮಾತನಾಡಿದ್ದಾರೆ. ಶಿವಾನಂದ ಪಾಟೀಲರ ಮೇಲೆ ನೀವು ರಾಜಕೀಯ ಮಾಡಿಕೊಳ್ಳಿ, ಆದರೆ ಹೋರಾಟಗಾರರ ಹೆಗಲ‌ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುವ ಕೆಲಸ ಮಾಡಬೇಡಿ ಎಂದರು.

ಸುರೇಶ ಬಿಜಾಪುರ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ನಡೆದಿದೆ. ಸಚಿವರಾದ ಎಂ.ಬಿ‌.ಪಾಟೀಲ ಹಾಗೂ ಶಿವಾನಂದ ಪಾಟೀಲರು ಸಿಎಂ ಅವರ ಮನವೊಲಿಸುತ್ತಿದ್ದಾರೆ. 200ಕ್ಕೂ ಅಧಿಕ ಸಂಘಟನೆಗಳಿರುವ ಈ ಹೋರಾಟ ಸಮಿತಿ ಶಾಶ್ವತ ಹೋರಾಟ ಸಮಿತಿಯಾಗಲಿದೆ ಎಂದರು. ಸರ್ಕಾರ ಇದೇ ಅಧಿವೇಶನದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಿಸಬೇಕು ಎಂದರು. ಹೋರಾಟಗಾರರು ಪೇಮೆಂಟ್ ಗಿರಾಕಿ ಎಂದು ಸುಳ್ಳು ಆರೋಪಿಸಿರುವ ಯತ್ನಾಳ ಮೇಲೆ ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮ್ಮೆ ಹಾಕಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಅಕ್ರಂ ಮಾಶಾಳಕರ, ಫಯಾಜ್ ಕಲಾದಗಿ ಉಪಸ್ಥಿತರಿದ್ದರು.